ಲಾಕ್ಡೌನ್ ಸಮಯದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿದ ಇಸ್ಪೀಟ್ ಅಡ್ಡೆಗಳು..!
ಬೆಂಗಳೂರು/ನೆಲಮಂಗಲ, ಜೂ.16- ಲಾಕ್ಡೌನ್ ನೆಪ ಮಾಡಿಕೊಂಡು ಪುಂಡರು ಈಗ ಗ್ರಾಮೀಣ ಪ್ರದೇಶದಲ್ಲಿ ಇಸ್ಪೀಟ್ ಅಡ್ಡೆಗಳನ್ನು ಆರಂಭಿಸಿದ್ದು, ಅಮಾಯಕರು ಮನೆ-ಮಠ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ..! ರಾಜಧಾನಿ ಹೊರವಲಯದ ಮಾದನಾಯಕನಹಳ್ಳಿ , ನೆಲಮಂಗಲ ಗ್ರಾಮೀಣ ಪ್ರದೇಶಗಳಲ್ಲಿ ಮನೆಗಳೇ ಇಸ್ಪೀಟ್ ಅಡ್ಡೆಗಳಾಗಿ ಪರಿವರ್ತನೆಯಾಗಿದ್ದು, ಕಾರ್ಮಿಕರು ಹಾಗೂ ಗ್ರಾಮಸ್ಥರು ಇದಕ್ಕೆ ದಾಸರಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಪೊಲೀಸರು ಒಂದೆಡೆ ಕೊರೊನಾ ವಾರಿಯರ್ಸ್ಗಳಾಗಿ ಜನಸಾಮಾನ್ಯರ ಸುರಕ್ಷತೆಗೆ ಮುಂದಾಗಿದ್ದಾರೆ. ಇದನ್ನೇ ಲಾಭ ಮಾಡಿಕೊಂಡ ಕೆಲವು ಕಿಡಿಗೇಡಿಗಳು ಈಗ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ.
ರೌಡಿಗಳನ್ನು ಮಟ್ಟ ಹಾಕಲು ವ್ಯಾಪಕ ಕ್ರಮ ಕೈಗೊಂಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್ ಯಶಸ್ವಿಯಾಗಿದ್ದಾರೆ. ಆದರೆ, ಈಗ ಇಸ್ಪೀಟ್ ಅಡ್ಡೆಗಳು ಅವ್ಯಾಹತವಾಗಿ ನೆಲಮಂಗಲ ಉಪವಿಭಾಗದಲ್ಲಿ ತಲೆ ಎತ್ತಿರುವುದು ಸ್ಥಳೀಯರನ್ನು ಆತಂಕಕ್ಕೀಡುಮಾಡಿದೆ.
ಪೊಲೀಸ್ ಬೀಟ್ ವೇಳೆ ಎಲ್ಲರೂ ಮನೆಯೊಳಗೆ ಅಡಗಿರುತ್ತಾರೆ. ಅವರಿಗೆ ಇಲ್ಲಿ ಜೂಜಾಟ ನಡೆಯುತ್ತಿದೆ ಎಂಬುದು ಗೊತ್ತಾಗದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೂಡ ಇಲ್ಲಿ ಕೈಗೊಳ್ಳಲಾಗುತ್ತಿದೆ. ಒಮ್ಮೆ ರೈಡ್ ಆದರೂ ತಪ್ಪಿಸಿಕೊಳ್ಳುವುದು ಹೇಗೆ ಎಂಬುದರ ಬಗ್ಗೆಯೂ ಎಲ್ಲರಿಗೂ ತಿಳಿಸಿಕೊಡಲಾಗುತ್ತದೆ.
ಕೆಲವರು ಲಕ್ಷಾಂತರ ರೂ. ಸಾಲ ಮಾಡಿ ಇಸ್ಪೀಟ್ನಲ್ಲಿ ಸೋತರೂ ಕೂಡ ಈ ನಶೆ ಅವರನ್ನು ಬಿಡುತ್ತಿಲ್ಲ. ಮತ್ತೆ ಮತ್ತೆ ತಮ್ಮ ಜಮೀನು, ಮನೆಗಳನ್ನೆಲ್ಲ ಅಡವಿಟ್ಟು ಬರುತ್ತಿದ್ದಾರೆ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ.
ನೆಲಮಂಗಲ ಪಟ್ಟಣದಲ್ಲೂ ಕೂಡ ಹಲವು ಗಲ್ಲಿಗಳಲ್ಲಿ ಕೂಡ ಈ ದಂಧೆ ನಡೆಯುತ್ತಿದೆ. ಪೊಲೀಸರು ಕೂಡ ಏನೂ ಮಾಡಲ್ಲ ಎಂಬ ಭಂಡ ಧೈರ್ಯ ಈ ಪುಂಡರಿಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಎಲ್ಲವೂ ವ್ಯವಸ್ಥಿತವಾಗಿ ನಡೆಯುತ್ತಿದ್ದು, ಇದನ್ನು ಮಟ್ಟ ಹಾಕಲು ಕ್ಷಿಪ್ರ ಕಾರ್ಯ ಕೈಗೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.
ಲಾಕ್ಡೌನ್ನಿಂದ ಈಗಾಗಲೇ ಹಲವು ಕಾರ್ಮಿಕರು ಸಂಕಷ್ಟದಲ್ಲಿದ್ದು, ಇಂತಹ ಜೂಜು ಅಡ್ಡೆಗಳ ಮೂಲಕ ಹಣ ಕಳೆದುಕೊಂಡು ಮತ್ತೆ ತಮ್ಮ ಕುಟುಂಬವನ್ನು ಬೀದಿಗೆ ತಳ್ಳುವಂತಹ ಕೆಟ್ಟ ಪ್ರವೃತ್ತಿಯನ್ನು ನಿಲ್ಲಿಸುವ ಜವಾಬ್ದಾರಿ ಪೊಲೀಸರ ಮೇಲಿದೆ. ಇದರಲ್ಲಿ ಕೆಲವರು ಶಾಮೀಲಾಗಿದ್ದಾರೆ ಎಂಬ ಮಾತುಗಳೂ ಕೇಳಿ ಬರುತ್ತಿದ್ದು, ಈಗ ಮತ್ತೆ ನೆಲಮಂಗಲ ಇಸ್ಪೀಟ್ ಆಟದ ಅಡ್ಡೆ ಕುಖ್ಯಾತಿಗೆ ಗುರಿಯಾಗಿದೆ.