ಕೋವಿಡ್ ಪಿಡುಗಿನಿಂದ ಹೊರಬರಲು ಸಂಘಟಿತ ಪ್ರಯತ್ನ ಅಗತ್ಯ ಜಿ-20 ರಾಷ್ಟ್ರಗಳಿಗೆ ಮೋದಿ ಕರೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ನ.22- ಲೋಕ ಕಂಟಕವಾಗಿರುವ ಡೆಡ್ಲಿ ಕೊರೊನಾ ವೈರಸ್ ತಂದೊಡ್ಡಿರುವ ಸಮಸ್ಯೆ ಮತ್ತು ಸವಾಲುಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಆರ್ಥಿಕ ಸದೃಢ ದೇಶಗಳು ಒಗ್ಗೂಡಿ ಸಂಘಟಿತ ಹೋರಾಟ ನಡೆಸುವ ಅಗತ್ಯವಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.

ಸೌದಿ ಅರೇಬಿಯಾದಲ್ಲಿ ನಿನ್ನೆ ರಾತ್ರಿ ಮುಕ್ತಾಯಗೊಂಡ ಜಿ-20 ಶೃಂಗಸಭೆಯಲ್ಲಿ ವಿಡಿಯೋ ಕಾನರೆನ್ಸ್ ಮೂಲಕ ಮಾತನಾಡಿದ ಅವರು, ವಿವಿಧ ದೇಶಗಳಲ್ಲಿ ಕಿಲ್ಲರ ಕೋವಿಡ್-19 ವೈರಸ್‍ನ ಎರಡನೆ ಅಲೆ ಎದ್ದಿದೆ. ಈ ಪಿಡುಗಿಗೆ ಧೃತಿಗೆಡದೆ ಜಿ-20 ರಾಷ್ಟ್ರಗಳು ಕೈ ಜೋಡಿಸಿ ಸಾಮೂಹಿಕ ಹೋರಾಟ ನಡೆಸಬೇಕು. ಇದರಿಂದ ಈ ಸಮಸ್ಯೆಯಿಂದ ಹೊರಬರಲು ಸಾಧ್ಯವಿದೆ ಎಂದು ಮೋದಿ ಸಲಹೆ ಮಾಡಿದರು.

ಕೊರೊನಾ ಹಾವಳಿಯಿಂದ ವಿಶ್ವದ ಆರ್ಥಿಕತೆ ಕುಸಿದಿದೆ. ಆರ್ಥಿಕತೆ ಪುನಶ್ಚೇತನಕ್ಕೆ ರಾಷ್ಟ್ರಗಳ ನಡುವೆ ಪರಸ್ಪರ ಸಹಕಾರ ಅತ್ಯಗತ್ಯ. ಕೋವಿಡ್ ಕಲಿಸಿರುವ ಪಾಠವನ್ನು ನಾವೆಲ್ಲರೂ ಮನದಟ್ಟು ಮಾಡಿಕೊಂಡು ಭವಿಷ್ಯದಲ್ಲಿ ಇಂತಹ ಸಮಸ್ಯೆಗಳು ಉದ್ಬವಿಸಿದಾಗ ಅದನ್ನು ಸಮರ್ಥ ಮತ್ತು ಪರಿಣಾಮಕಾರಿಯಾಗಿ ಎದುರಿಸಬೇಕು ಎಂದು ಪ್ರಧಾನಮಂತ್ರಿ ಕರೆ ನೀಡಿದರು.

ಸೌದಿ ಅರೇಬಿಯಾದಲ್ಲಿನ ಜಿ-20 ರಾಷ್ಟ್ರಗಳ ಶೃಂಗಸಭೆಗೆ ಭಾರತವು ವರ್ಚುವಲ್ ತಂತ್ರಜ್ಞಾನ (ವಿಡಿಯೋ ಸಂವಾದ) ಪೂರೈಸಿದೆ. ಅತ್ಯಾಧುನಿಕ ತಂತ್ರಜ್ಞಾನದಿಂದ ವಿಶ್ವದ ಪ್ರಗತಿ ಸಾಧ್ಯ. ಈ ನಿಟ್ಟಿನಲ್ಲಿ ಬಹುಕೌಶಲ್ಯ ಮತ್ತು ಮರುಕೌಶಲ್ಯ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟರು.

ಎಲ್ಲ ಕ್ಷೇತ್ರಗಳಲ್ಲೂ ಅತ್ಯಾಧುನಿಕ ತಂತ್ರಜ್ಞಾನ ಮಹತ್ವದ ಪಾತ್ರ ವಹಿಸಲಿದೆ. ಈ ತಂತ್ರಜ್ಞಾನ ಬೆಳೆದಂತೆ ನಾವುಗಳು ಅದನ್ನು ಮೇಲ್ದರ್ಜೆಗೇರಿಸಿಕೊಂಡು ಪ್ರಗತಿ ಕಾಣಬೇಕಿದೆ. ಇದು ಇಂದಿನ ದಿನದಲ್ಲಿ ಅತ್ಯಂತ ಅನಿವಾರ್ಯವೂ ಹೌದು ಎಂದು ಮೋದಿ ವ್ಯಾಖ್ಯಾನಿಸಿದರು.

ಶೃಂಗಸಭೆಯ ಆತಿಥ್ಯ ವಹಿಸಿರುವ ಸೌದಿ ಅರೇಬಿಯಾ ದೊರೆ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ ಅಲ್ ಸಾದ್ ಮಾತನಾಡಿ, ಕೊರೊನಾ ಪಿಡುಗು ನಿವಾರಣೆಗೆ ಎಲ್ಲ ದೇಶಗಳೂ ಲಸಿಕೆಯನ್ನು ಎದುರು ನೋಡುತ್ತಿವೆ. ಆದಷ್ಟು ಶೀಘ್ರದಲ್ಲೇ ಲಸಿಕೆ ಲಭ್ಯವಾಗಿ ಈ ಪಿಡುಗು ನಿವಾರಣೆಯಾಗುತ್ತದೆ ಎಂಬ ಆಶಾಭಾವನೆ ವ್ಯಕ್ತಪಡಿಸಿದರು.

Facebook Comments