ಕಾಂಗ್ರೆಸ್ ಟೀಕಾಸ್ತ್ರವನ್ನೇ ಬ್ರಹ್ಮಾಸ್ತ್ರವನ್ನಾಗಿ ಬಳಸಿಕೊಂಡ ‘ಚೌಕಿದಾರ್’ ಮೋದಿ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮಾ.17- ಪ್ರಧಾನಮಂತ್ರಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸೇರಿದಂತೆ ಬಿಜೆಪಿ ನಾಯಕರ ಟ್ವಿಟರ್ ಖಾತೆಗಳ ಹೆಸರುಗಳ ಹಿಂದೆ ಇಂದು ಚೌಕಿದಾರ್ ಎಂದು ಸೇರ್ಪಡೆಯಾಗಿದೆ.ಟ್ವಿಟರ್ ಖಾತೆಗಳಲ್ಲಿ ಚೌಕಿದಾರ್ ನರೇಂದ್ರ ಮೋದಿ, ಚೌಕಿದಾರ್ ಅಮಿತ್ ಷಾ ಇತ್ಯಾದಿ ಹೆಸರುಗಳು ಇಂದು ಕಂಡು ಬಂದಿತು.

ಭ್ರಷ್ಟಾಚಾರ ಮತ್ತು ಲಂಚಾವತಾರದ ವಿರುದ್ಧ ಹೋರಾಡಲು ಮೇ ಭಿ ಚೌಕಿದಾರ್ (ನಾನು ಕೂಡ ಕಾವಲುಗಾರ) ಪ್ರತಿಜ್ಞೆ ಸ್ವೀಕರಿಸು ವಂತೆ ಪ್ರಧಾನಿ ನರೇಂದ್ರ ಮೋದಿ ಪಕ್ಷದ ಕಾರ್ಯಕರ್ತರಿಗೆ ಮತ್ತು ಅಭಿಮಾನಿಗಳಿಗೆ ನಿನ್ನೆಯಷ್ಟೇ ಕರೆ ನೀಡಿದ್ದರು.ಹೀಗಾಗಿ ಇಂದು ಬಹುತೇಕ ಬಿಜೆಪಿ ನಾಯಕರ ಹೆಸರುಗಳ ಹಿಂದೆ ಚೌಕಿದಾರ್ ಎಂಬ ನಾಮ ವಿಶೇಷಣ ಗೋಚರಿಸುತ್ತಿದೆ.

ಭ್ರಷ್ಟಾಚಾರ ವಿರುದ್ಧ ಹೋರಾಡಲು ದೇಶದ ಪ್ರತಿಯೊಬ್ಬ ನಾಗರಿಕರು ಮುಂದಾಗಬೇಕು. ಇದೇ ಕಾರಣಕ್ಕಾಗಿ ನಾನು ನನ್ನನ್ನು ಚೌಕಿದಾರ್ (ಕಾವಲುಗಾರ) ಎಂದು ಘೋಷಿಸಿಕೊಂಡಿದ್ದರು. ನನಗೆ ಈ ಹೋರಾಟದಲ್ಲಿ ಬೆಂ ಬಲ ನೀಡಲು ನೀವೆಲ್ಲರೂ ನಾನು ಕೂಡ ಕಾವಲುಗಾರ ಎಂಬ ಪ್ರತಿಜ್ಞೆ ಸ್ವೀಕರಿಸಬೇಕು ಎಂದು ಸಲಹೆ ಮಾಡಿದ್ದರು.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಚೋಕಿದಾರ್ ಚೋರ್ ಹೈ ( ಕಾವಲುಗಾರನೇ ಕಳ್ಳ) ಎಂದು ಮೋದಿ ಅವರನ್ನು ಟೀಕಿಸಿದ್ದರು. ಇದಕ್ಕೆ ತಿರುಗುಬಾಣವಾಗಿ ಪ್ರಧಾನಿ ಈ ಅಭಿಯಾನವನ್ನು ಆರಂಭಿಸಿದ್ದಾರೆ ಎಂದು ವಿಶ್ಲೇಷಿಸಲಾಗುತ್ತದೆ.

ನಾನೊಬ್ಬನೇ ದೇಶ ಸೇವೆ ಮಾಡುತ್ತಿಲ್ಲ. ಯಾರೆಲ್ಲ ದೇಶಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೋ ಅವರೆಲ್ಲ ಕಾವಲುಗಾರರೇ. ಭ್ರಷ್ಟಾಚಾರ, ದುಷ್ಟತನ, ಸಮಾಜ ವಿರೋಧಿ ಕೆಲಸಗಳ ವಿರುದ್ಧ ಹೋರಾಡುವವರೆಲ್ಲ ಚೌಕಿದಾರರೇ.

ಭಾರತದ ಪ್ರಗತಿಗಾಗಿ ಪರಿಶ್ರಮದಿಂದ ಶ್ರಮಿಸುವವರೆಲ್ಲ ಚೌಕಿದಾರರೇ. ಇಂದು, ಪ್ರತಿಯೊಬ್ಬ ಭಾರತೀಯ ಹೇಳುತ್ತಿದ್ದಾನೆ #MainBhiChowkidar ಎಂದು ಟ್ವೀಟ್ ಮಾಡಿದ್ದರು. ಇದರ ಜತೆಗೆ, ಮೂರು ನಿಮಿಷಗಳ ಒಂದು ವಿಡಿಯೊವನ್ನು ಕೂಡಾ ಪೋಸ್ಟ್‌ ಮಾಡಲಾಗಿದ್ದು, ಅದರಲ್ಲಿ, ಭಾರತೀಯ ನಾಗರಿಕರು ತಾವು ತಮ್ಮ ಸ್ವಂತ ಮನೆಗಳ ಹೆಮ್ಮೆಯ ಚೌಕಿದಾರರೆಂದು ಹೇಳಿಕೊಳ್ಳುತ್ತಿರುವುದನ್ನು ತೋರಿಸಲಾಗಿದೆ. ಹೀಗೆ ಪ್ರತಿಯೊಬ್ಬರೂ ಅಂತಿಮವಾಗಿ ದೇಶದ ಕಾವಲುಗಾರರು ಎಂದು ಬಿಂಬಿಸಲಾಗಿದೆ.

‘ಚೌಕಿದಾರ್‌ ಚೋರ್‌ ಹೈ’ ಎಂಬ ಕಾಂಗ್ರೆಸ್‌ ಸ್ಲೋಗನ್‌ಗೆ ತಿರುಗೇಟು ನೀಡಲು ರೂಪಿಸಿರುವ ಈ ತಂತ್ರ ಒಂದೇ ದಿನದಲ್ಲಿ ಫಲ ನೀಡಿದ್ದು, ದೇಶ ಮಾತ್ರ, ವಿದೇಶದಲ್ಲೂ ಇದು ಟ್ರೆಂಡ್‌ ಸೃಷ್ಟಿಸಿದೆ. ಈ ಹ್ಯಾಷ್‌ಟ್ಯಾಗ್ ಜಾಗತಿಕ ಮಟ್ಟದಲ್ಲಿ ಟ್ವಿಟರ್‌ನ ಮೊದಲ ಟ್ರೆಂಡ್ ಆಗಿದೆ.

Facebook Comments