ಮುನಿಸಿಕೊಂಡು ಮೋದಿ ವಿಡಿಯೋ ಕಾನ್ಫರೆನ್ಸ್‌ನಿಂದ ದೂರ ಉಳಿದ ದೀದಿ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜೂ.17-ದೇಶಾದ್ಯಂತ ಕಿಲ್ಲರ್ ಕೊರೊನಾ ಸೋಂಕು ಮತ್ತು ಸಾವು ಪ್ರಕರಣಗಳು ಆತಂಕಕಾರಿ ಮಟ್ಟದಲ್ಲಿ ಮುಂದುವರಿದಿದ್ದು, ಹೆಮ್ಮಾರಿಯನ್ನು ನಿಗ್ರಹಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಿದರು.

ಆದರೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಅಧಿನಾಯಕಿ ಮಮತಾ ಬ್ಯಾನರ್ಜಿ ಪ್ರಧಾನಿ ಮೋದಿ ಅವರ ಮೇಲೆ ಮುನಿಸಿಕೊಂಡಿದ್ದು, ವಿಡಿಯೋ ಕಾನ್ಫರೆನ್ಸ್ ಸಂವಾದದಲ್ಲಿ ಭಾಗವಹಿಸುತ್ತಿಲ್ಲ.

ನಿನ್ನೆ ಪ್ರಧಾನಿ 18ಕ್ಕೂ ಹೆಚ್ಚು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳೊಂದಿಗೆ ಕೊರೊನಾ ನಿಗ್ರಹ ಕುರಿತು ಚರ್ಚಿಸಿದ್ದರು. ಇಂದು ಮಮತಾ ಬ್ಯಾನರ್ಜಿ ಅವರ ಜೊತೆ ಚರ್ಚೆಗೆ ಪಟ್ಟಿ ಸಿದ್ಧವಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಪಟ್ಟಿಯಲ್ಲಿ ಅವರ ಹೆಸರು ಬಿಟ್ಟು ಹೋಗಿದೆ.

ಇದರಿಂದ ಕುಪಿತಗೊಂಡಿರುವ ದೀದಿ, ಮೋದಿಯವರ ಜೊತೆ ವಿಡಿಯೋ ಕಾನ್ಫರೆನ್ಸ್‍ನಲ್ಲಿ ಭಾಗವಹಿಸದಿರಲು ನಿರ್ಧರಿಸಲಿದ್ದು, ನಾಮಕಾವಸ್ಥೆಗೆ ಪ್ರತಿನಿಧಿಯೊಬ್ಬರನ್ನು ತಮ್ಮ ಸ್ಥಾನದಲ್ಲಿ ಕೂರಿಸಲು ತೀರ್ಮಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದರೊಂದಿಗೆ ಕೇಂದ್ರ ಮತ್ತು ಪಶ್ಚಿಮ ಬಂಗಾಳ ಸರ್ಕಾರದ ನಡುವಣ ಭಿನ್ನಾಭಿಪ್ರಾಯ ಮತ್ತಷ್ಟು ಹದಗೆಟ್ಟಿದೆ.  ಮೊದಲಿನಿಂದಲೂ ಒಂದಿಲ್ಲೊಂದು ವಿಷಯದಲ್ಲಿ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ತೀವ್ರ ಭಿನ್ನಾಭಿಪ್ರಾಯ ಹೊಂದಿರುವ ದೀದಿ ಕೊರೊನಾ ಬಿಕ್ಕಟ್ಟು ವಿಚಾರದಲ್ಲೂ ಕೇಂದ್ರದ ವಿರುದ್ಧ ನಿರಂತರ ವಾಗ್ದಾಳಿ ನಡೆಸಿದ್ದರು.

ಸಿಎಂಗಳ ಜತೆ ಪಿಎಂ ಚರ್ಚೆ: ಕಳೆದ 20 ದಿನಗಳಿಂದ ಕೋವಿಡ್-19 ಆಟ್ಟಹಾಸ ತೀವ್ರವಾಗಿರುವ ಕಾರಣ ಮುಂದೆ ಕೈಗೊಳ್ಳಬೇಕಾದ ಪರಿಣಾಮಕಾರಿ ಕ್ರಮಗಳ ಕುರಿತು ಮೋದಿ ಇಂದು ಕೂಡ ಕೆಲವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿ ಜತೆ ಮಹತ್ವದ ಸಮಾಲೋಚನೆ ಮುಂದುವರಿಸಿ ಸಲಹೆ ಮತ್ತು ಅಭಿಪ್ರಾಯಗಳನ್ನು ಪಡೆದಿದ್ದಾರೆ.

ಮುಂದಿನ ದಿನಗಳಲ್ಲಿ ಸೋಂಕು ಸಾಧ್ಯತೆ ಮತ್ತಷ್ಟು ಹೆಚ್ಚಾಗುವ ಆತಂಕವಿರುವುದರಿಂದ ಯಾವ ಕ್ರಮಗಳನ್ನು ಕೈಗೊಳ್ಳಬೇಕೆಂಬ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಒಂದು ಸಮಗ್ರ ಯೋಜನೆಯನ್ನು ರೂಪಿಸುವರು. ನಾಳೆ ಈ ಬಗ್ಗೆ ಅಧಿಕೃತ ಘೋಷಣೆ ಪ್ರಕಟವಾಗುವ ಸಾಧ್ಯತೆ ಇದೆ.

ಸೋಂಕು ಪ್ರಕರಣಗಳನ್ನು ಗಮನಾರ್ಹವಾಗಿ ನಿಯಂತ್ರಿಸಬೇಕು. ಮರಣ ಪ್ರಮಾಣವನ್ನು ಕಡಿಮೆ ಮಾಡಬೇಕು. ಆಸ್ಪತ್ರೆಗಳಲ್ಲಿ ರೋಗಿಗಳು ಚಿಕಿತ್ಸಾ ಸೌಲಭ್ಯಗಳನ್ನು ಮತ್ತಷ್ಟು ಉನ್ನತೀಕರಣಗೊಳಿಸಬೇಕು. ಕೊರೊನಾ ಪರೀಕ್ಷೆ ಮತ್ತು ಆರೋಗ್ಯ ಮೂಲಸೌಕರ್ಯಾಭಿವೃದ್ದಿಯನ್ನು ಹೆಚ್ಚಿಸಬೇಕು. ಇವೇ ಮೊದಲಾದ ಅಗತ್ಯ ಕ್ರಮಗಳ ಬಗ್ಗೆ ಮೋದಿ ನಿನ್ನೆ ಮುಖ್ಯಮಂತ್ರಿಗಳಿಗೆ ಸೂಚನೆ ನೀಡಿದ್ದಾರೆ.

ಹಂತಹಂತವಾಗಿ ಲಾಕ್‍ಡೌನ್ ತೆರವುಗೊಳಿಸಿದ ನಂತರ ಆಯಾ ರಾಜ್ಯಗಳಲ್ಲಿನ ಕೊರೊರಾ ಕೇಸ್‍ಗಳು ಪರಿಸ್ಥಿತಿ ಬಗ್ಗೆ ಮೋದಿ ಪರಾಮರ್ಶೆ ನಡೆಸಿ ಹೆಮ್ಮಾರಿಯನ್ನು ಅಂಕೆಯಲ್ಲಿಡಲು ಮತ್ತಷ್ಟು ದಿಟ್ಟ ಕ್ರಮಗಳನ್ನು ಕೈಗೊಳ್ಳಬೇಕೆಂದು ಸೂಚಿಸಿದ್ದಾರೆ.

ಐದನೇ ಹಂತದ ಲಾಕ್‍ಡೌನ್ ಜೂ.30ರಂದು ಮುಕ್ತಾಯಗೊಳ್ಳಲಿದೆ. ಸಾಮಾನ್ಯ ಜನಜೀವನ ಈಗಷ್ಟೇ ಸಹಜ ಸ್ಥಿತಿಗೆ ಬರುತ್ತಿದ್ದು, ಕಠಿಣ ಲಾಕ್‍ಡೌನ್ ವಿಸ್ತರಣೆ ಮಾಡುವ ಉದ್ದೇಶ ಕೇಂದ್ರ ಸರ್ಕಾರದ ಮುಂದಿಲ್ಲ. ಆದರೆ ಅನ್‍ಲಾಕ್ ಸ್ಥಿತಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ರೋಗ ನಿಯಂತ್ರಣವು ಪ್ರಧಾನಿ ಅವರ ಮೂಲಮಂತ್ರವಾಗಿದೆ.

ಮಾಸ್ಕ್ ಬಳಕೆ ಕಡ್ಡಾಯ, ಸಾಮಾಜಿಕ ಅಂತರ, ಸಾರ್ವಜನಿಕರ ಅನಗತ್ಯ ಸಂಚಾರ, ವೃದ್ಧರು, ಗರ್ಭಿಣಿಯರು ಮತ್ತು ಮಕ್ಕಳ ಆರೈಕೆ, ರೋಗ ನಿರ್ಮೂಲನೆಯ ಔಷಧಿಯ ತ್ವರಿತ ಅನ್ವೇಷಣೆ ಬಗ್ಗೆಯೂ ಅವರು ಸೂಚನೆ ನೀಡಲಿದ್ದಾರೆ.

ದೇಶದಲ್ಲಿ ಕೋವಿಡ್ ಬಿಕ್ಕಟ್ಟು ಸೃಷ್ಟಿಯಾದ ನಂತರ ರಾಜ್ಯಗಳ ಸಿಎಂಗಳ ಜೊತೆ ಮೋದಿ ಅವರು ನಡೆಸುತ್ತಿರುವ ಏಳನೇ ಸಂವಾದ ಇದಾಗಿದೆ.

Facebook Comments