ವಿಶ್ವಕ್ಕೇ ಪ್ರಯೋಜನವಾಗುವ ನವಭಾರತ ಸೃಷ್ಟಿಗೆ ಕೇಂದ್ರ ಸರ್ಕಾರ ಕಂಕಣ ಬದ್ಧ : ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

ಚೆನ್ನೈ, ಸೆ.30- ಇಡೀ ಜಗತ್ತಿಗೆ ಪ್ರಯೋಜನವಾಗುವ ನವಭಾರತ ಸೃಷ್ಟಿಸಲು ಕೇಂದ್ರ ಸರ್ಕಾರ ಕಂಕಣಬದ್ಧವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.
ವಿಶ್ವಾದ್ಯಂತ ಭಾರತದ ಮೇಲೆ ನಿರೀಕ್ಷೆ ಮತ್ತು ಭರವಸೆ ಹಿಂದಿಗಿಂತಲೂ ಈಗ ಹೆಚ್ಚಾಗಿದೆ. ಜಗತ್ತಿಗೆ ಅತ್ಯಂತ ಉಪಯುಕ್ತವಾಗುವ ನಿಟ್ಟಿನಲ್ಲಿ ಭಾರತವನ್ನು ಯಶಸ್ಸಿನ ಹಾದಿಯತ್ತ ಕೊಂಡೊಯ್ಯುವುದಾಗಿ ಪ್ರಧಾನಿ ಆಶ್ವಾಸನೆ ಕೊಟ್ಟಿದ್ದಾರೆ.

ಚೆನ್ನೈನಲ್ಲಿಂದು ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ತಮಗೆ ಏರ್ಪಡಿಸಿದ್ದ ಸನ್ಮಾನ ಸ್ವೀಕರಿಸಿ ಮೋದಿ ಮಾತನಾಡಿದರು. ನಾನು ಈಗಷ್ಟೇ ಅಮೆರಿಕಾ ಪ್ರವಾಸ ಪೂರೈಸಿ ಹಿಂದಿರುಗಿದ್ದೇನೆ. ಭಾರತದ ಮೇಲೆ ಜಗತ್ತಿನ ಭರವಸೆ ಮತ್ತು ನಿರೀಕ್ಷೆಗಳು ದೊಡ್ಡಮಟ್ಟದಲ್ಲಿ ಹೆಚ್ಚಾಗಿವೆ. ಅದೇ ರೀತಿ ವಿಶ್ವದಲ್ಲಿ ಭಾರತದ ಘನತೆ ಮತ್ತು ಗೌರವ ಸಹ ವೃದ್ಧಿಯಾಗಿರುವುದು ನನ್ನ ಗಮನಕ್ಕೆ ಮೋದಿ ಹೇಳಿದರು.

ಇಡೀ ಜಗತ್ತು ಭಾರತದ ಬಗ್ಗೆ ಹೊಂದಿರುವ ಭಾರೀ ನಿರೀಕ್ಷೆಗಳನ್ನು ಹುಸಿಯಾಗಲು ನಾನು ಬಿಡುವುದಿಲ್ಲ. ವಿಶ್ವಕ್ಕೆ ಅನುಕೂಲ ಮತ್ತು ಪ್ರಯೋಜನವಾಗುವಂತಹ ಭಾರತವನ್ನು ಕೇಂದ್ರ ಸರ್ಕಾರ ಸೃಷ್ಟಿಸಲು ಕಾಯೋನ್ಮುಖವಾಗಿದೆ ಎಂದು ಮೋದಿ ತಿಳಿಸಿದರು. ದೇಶದಲ್ಲಿ ಸರ್ವರಿಗೂ ಉದ್ಯೋಗ ಲಭಿಸುವಂತಾಗಬೇಕು. ಕೇಂದ್ರ ಸರ್ಕಾರದ ಯೋಜನೆಗಳು 130ಕೋಟಿ ಜನರಿಗೆ ದೊರೆಯಬೇಕು. ಗ್ರಾಮವಿರಲಿ ಅಥವಾ ನಗರಪ್ರದೇಶವಿರಲಿ, ಬಡವರಾಗಲಿ ಅಥವಾ ಶ್ರೀಮಂತರಾಗಲಿ, ಯುವಕರಲಿ ಅಥವಾ ವೃದ್ಧರಿರಲಿ ಎಲ್ಲರಿಗೂ ಅನುಕೂಲವಾಗುವಂತಹ ಯೋಜನೆಗಳನ್ನು ತಲುಪಿಸುವ ನಿಟ್ಟಿನಲ್ಲಿ ನಾವು ಮುಂದಡಿ ಇಟ್ಟಿದ್ದೇವೆ ಎಂದು ಮೋದಿ ಹೇಳಿದರು.

ಮಾರಕ ಏಕ ಬಳಕೆ ಪ್ಲಾಸ್ಟಿಕ್‍ನನ್ನು ಸಂಪೂರ್ಣ ನಿರ್ಮೂಲನೆ ಮಾಡಬೇಕು. ಆದರೆ ನನ್ನ ಹೇಳಿಕೆಯನ್ನು ಕೆಲವರು ತಪ್ಪಾಗಿ ಅರ್ಥೈಸಲಾಗಿದೆ. ನಾನು ಪ್ಲಾಸ್ಟಿಕ್ ಮುಕ್ತ ಭಾರತ ಎಂದು ಎಲ್ಲೂ ಹೇಳಿಲ್ಲ, ಏಕ ಬಳಕೆ ಪ್ಲಾಸ್ಟಿಕ್‍ನಿಂದ ಮಾತ್ರ ದೇಶವನ್ನು ಮುಕ್ತಗೊಳಿಸುತ್ತೇನೆ ಎಂದು ಮೋದಿ ತಿಳಿಸಿದರು. ಎರಡನೇ ಬಾರಿ ಪ್ರಧಾನಿಯಾದ ನಂತರ ಮೋದಿ ಇದೇ ಮೊದಲ ಸಲ ತಮಿಳನಾಡಿಗೆ ಭೇಟಿ ನೀಡಿದ್ದು, ಚೆನ್ನೈನಲ್ಲಿ ಇಂದು ನಡೆದ ಕೆಲವು ಅಧಿಕೃತ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

Facebook Comments