ಉತ್ತಮ ಭವಿಷ್ಯ ಸಾಬೀತು ಮಾಡಿದ ಅಯೋಧ್ಯೆ ತೀರ್ಪು : ಪ್ರಧಾನಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಡಿ.6-ಅಯೋಧ್ಯೆಯ ರಾಮಮಂದಿರ ಮತ್ತು ಬಾಬ್ರಿ ಮಸೀದಿ ಭೂ ವಿವಾದ ಕುರಿತು ಸುಪ್ರೀಂಕೋರ್ಟ್ ತೀರ್ಪು ನೀಡುವುದಕ್ಕೆ ಮುನ್ನ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಆದರೆ ಆದೇಶದ ನಂತರ ಈ ಗೊಂದಲ ವಾತಾವರಣ ಸೃಷ್ಟಿಯಾಗಿದ್ದು ಸುಳ್ಳು ಎಂಬುದನ್ನು ನಮ್ಮ ಜನತೆ ಸಾಬೀತು ಮಾಡಿದರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಶತಮಾನಗಳಿಂದಲೂ ವಿವಾದಕ್ಕೆ ಕಾರಣವಾಗಿದ್ದ ಅಯೋಧ್ಯೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ನಮ್ಮ ನಾಳಿನ ಉತ್ತಮ ಭವಿಷ್ಯವನ್ನು ಸಾಬೀತು ಮಾಡಿದೆ ಎಂದು ಅವರು ಹೇಳಿದ್ದಾರೆ.  ದೆಹಲಿಯಲ್ಲಿಂದು ಹಿಂದೂಸ್ತಾನ್ ಟೈಮ್ಸ್ ನಾಯಕತ್ವ ಶೃಂಗಸಭೆ(ಎಚ್‍ಟಿ ಎಲ್‍ಎಸ್)ಯ 17ನೇ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ರಾಮಮಂದಿರ-ಬಾಬ್ರಿ ಮಸೀದಿ ವಿವಾದ ಕುರಿತು ನೀಡಿರುವ ತೀರ್ಪಿನಿಂದ ಅಯೋಧ್ಯೆ ಕುರಿತು ಇದ್ದ ಅಡ್ಡಿಆತಂಕಗಳು ದೂರವಾಗಿವೆ. ಇದು ನಮ್ಮ ನಾಳಿನ ಉತ್ತಮ ಭವಿಷ್ಯಕ್ಕೆ ಲಭಿಸಿರುವ ಪುರಾವೆಯಾಗಿದೆ ಎಂದು ಹೇಳಿದರು.

ಸಂಸತ್‍ನಲ್ಲಿ ಅನುಮೋದನೆ ದೊರೆತಿರುವ ಪೌರತ್ವ(ತಿದ್ದುಪಡಿ) ಮಸೂದೆಯನ್ನು ಸಮರ್ಥಿಸಿಕೊಂಡ ಪ್ರಧಾನಿ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ತಾನದಲ್ಲಿರುವ ಮುಸ್ಲಿಮೇತರರಿಗೆ ಭಾರತೀಯ ನಾಗರಿಕತ್ವ ಒದಗಿಸಿಕೊಡುವುದರಲ್ಲಿ ದಿಟ್ಟ ಹೆಜ್ಜೆಯಾಗಿದೆ ಎಂದು ಹೇಳಿದರು.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಭಾರತ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ಮೋದಿ ಮತ್ತೊಮ್ಮೆ ಬಲವಾಗಿ ಸಮರ್ಥಿಸಿಕೊಂಡರು. ಇದು ರಾಜಕೀಯವಾಗಿ ಅತ್ಯಂತ ಕ್ಲಿಷ್ಟಕರ ನಿಜ. ಆದರೆ ಕಾಶ್ಮೀರ ಜನತೆಯ ಹಿತಾಸಕ್ತಿ ಮತ್ತು ಅವರ ಉಜ್ವಲ ಭವಿಷ್ಯ ದೃಷ್ಟಿಯಿಂದ ದಿಟ್ಟ ನಿರ್ಣಯ ಎಂದು ವ್ಯಾಖ್ಯಾನಿಸಿದರು.

ಯಾವುದೇ ದೇಶವಿರಲಿ ಉತ್ತಮ ನಿರ್ಧಾರಗಳನ್ನು ಕೈಗೊಂಡು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅದನ್ನು ಸಾಕಾರಗೊಳಿಸುತ್ತವೆಯೋ ಆ ರಾಷ್ಟ್ರ ಸುಸ್ಥಿತಿ ಮತ್ತು ಸುಸ್ಥಿರವಾಗಿರುತ್ತದೆ ಎಂದು ಬಣ್ಣಿಸಿದರು.  ನಮ್ಮ ಸರ್ಕಾರ ಆಶ್ವಾಸನೆ ನೀಡುವ ಸರ್ಕಾರವಲ್ಲ. ವಾಗ್ದಾನವನ್ನು ಕಾರ್ಯಗತಗೊಳಿಸಿರುವ ಆಡಳಿತ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂಬ ಧ್ಯೇಯದೊಂದಿಗೆ ನಾವು ಕಾರ್ಯಕ್ರಮಗಳನ್ನು ಅನುಷ್ಠಾಣಗೊಳಿಸಿದ ಕಾರಣ 2019ರ ಲೋಕಸಭಾ ಚುನಾವಣೆಯಲ್ಲೂ ನಾವು ಮತ್ತೆ ಎರಡನೇ ಬಾರಿ ಅಧಿಕಾರಕ್ಕೆ ಬಂದಿದ್ದೇವೆ ಎಂದರು.

ನಮ್ಮದು ಜವಾಬ್ದಾರಿ ಮತ್ತು ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ಸರ್ಕಾರವಲ್ಲ. ನಾವು ಏನು ಆಶ್ವಾಸನೆ ನೀಡಿದ್ದೇವೋ ಅದನ್ನೆಲ್ಲ ಈಡೇರಿಸಿದ್ದೇವೆ. ನಮ್ಮ ಜನಪರ ಕಾರ್ಯಕ್ರಮ ಮತ್ತು ಯೋಜನೆಗಳು ಇನ್ನು ದೊಡ್ಡಮಟ್ಟದಲ್ಲಿ ಮುಂದುವರೆಯುತ್ತದೆ ಎಂದು ಮೋದಿ ಹೇಳಿದರು.

Facebook Comments