ವಿರೋಧ ಪಕ್ಷಗಳ ಭಾಷೆ ಪಾಕಿಸ್ತಾನದಂತಿದೆ : ಪ್ರಧಾನಿ ತರಾಟೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಡಿ.11-ಪೌರತ್ವ ತಿದ್ದುಪಡಿ ಮಸೂದೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ಕಾಂಗ್ರೆಸ್ ಮತ್ತು ಇತರ ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಅವುಗಳ ಭಾಷೆ ಪಾಕಿಸ್ತಾನದಂತಿದೆ ಎಂದು ಆರೋಪಿಸಿದ್ದಾರೆ.

ದೆಹಲಿಯಲ್ಲಿ ಇಂದು ಬೆಳಗ್ಗೆ ನಡೆದ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು ವಿರೋಧ ಪಕ್ಷಗಳು ಪಾಕಿಸ್ತಾನದ ಭಾಷೆ ಮಾತನಾಡುತ್ತಿವೆ ಎಂದು ಕುಟುಕಿದರು. ಪೌರತ್ವ ತಿದ್ದುಪಡಿ ವಿಧೇಯಕವನ್ನು ಭಾರತೀಯ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆಯಬೇಕು.

ನೆರೆಹೊರೆ ದೇಶಗಳ ಧಾರ್ಮಿಕ ಕಿರುಕುಳದಿಂದ ಬೇಸತ್ತು ಭಾರತಕ್ಕೆ ಬಂದಿರುವ ಮುಸ್ಲಿಮೇತರರ ಸಮಸ್ಯೆಯನ್ನು ಈ ಮಸೂದೆ ನಿವಾರಿಸಿ ಶಾಶ್ವತ ಪರಿಹಾರ ನೀಡುವಲ್ಲಿ ಮಹತ್ವದ್ದಾಗಿದೆ ಎಂದು ಮೋದಿ ಬಣ್ಣಿಸಿದರು. ಪೌರತ್ವ ತಿದ್ದುಪಡಿ ಮಸೂದೆ ಕೇಂದ್ರ ಸರ್ಕಾರದ ಮತ್ತೊಂದು ಐತಿಹಾಸಿಕ ನಿರ್ಧಾರ. ಅನೇಕ ವರ್ಷಗಳಿಂದ ಆಗದೇ ಇದ್ದ ಕೆಲಸ ಕೇವಲ ಆರು ತಿಂಗಳಲ್ಲೇ ಆಗಿದೆ ಎಂದು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಮಸೂದೆ ಬಗ್ಗೆ ಸಂಸದರು ಜನರಿಗೆ ಮಾಹಿತಿ ನೀಡಿ ಅವರನ್ನು ಜಾಗೃತಗೊಳಿಸಬೇಕು ಎಂದು ಅವರು ಕರೆ ನೀಡಿದರು.  ಮುಂಬರುದ ಕೇಂದ್ರ ಸರ್ಕಾರದ ಬಜೆಟ್‍ಗಾಗಿ ಸಮಾಜದ ಎಲ್ಲ ವಲಯಗಳಿಂದ ಫೀಡ್ ಬ್ಯಾಕ್‍ಗಳನ್ನು ಸಂಗ್ರಹಿಸಬೇಕು. ಕೃಷಿ, ಬಡವರು, ಮಧ್ಯಮವರ್ಗದವರು ಮತ್ತು ಕೈಗಾರಿಕೋದ್ಯಮಗಳು ಮೊದಲಾದವರಿಂದ ಸಂಗ್ರಹಿಸಲಾದ ಮಾಹಿತಿಯನ್ನು ಹಣಕಾಸು ಸಚಿವರೊಂದಿಗೆ ವಿನಿಯಮ ಮಾಡಿಕೊಳ್ಳುವಂತೆಯೂ ಅವರು ಪಕ್ಷದ ಸಂಸದರಿಗೆ ಸಲಹೆ ಮಾಡಿದರು.

Facebook Comments