ನಿಮ್ಮ ಹಕ್ಕನ್ನು ಯಾರೂ ಕಸಿದುಕೊಳ್ಳಲಾರರು : ಈಶಾನ್ಯ ಜನತೆಗೆ ಮೋದಿ ಅಭಯ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಡಿ.12-ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಪ್ರತಿಭಟನೆ ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ಈಶಾನ್ಯ ಭಾರತದ ಜನರ ಆಕ್ರೋಶ ತಣಿಸಲು ಪ್ರಧಾನಿ ನರೇಂದ್ರ ಮೋದಿ ಮುಂದಾಗಿದ್ದಾರೆ. ಈ ಮಸೂದೆ ಬಗ್ಗೆ ಯಾವುದೇ ಆತಂಕ ಬೇಡ. ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳ ಹಿತಾಸಕ್ತಿ ಮತ್ತು ಜನರ ಹಕ್ಕುಗಳನ್ನು ರಕ್ಷಿಸಲು ಕೇಂದ್ರ ಸರ್ಕಾರ ಬದ್ಧ ಎಂದು ಅವರು ಘೋಷಿಸಿದ್ದಾರೆ.

ನಿಮ್ಮ ಭೂಮಿ, ಹಕ್ಕು, ನಿಮ್ಮ ವಿಶಿಷ್ಟ ಆಸ್ಮಿತೆ ಮತ್ತು ಸುಂದರ ಸಂಸ್ಕøತಿಯನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಪ್ರಧಾನಿ ಅಭಯ ನೀಡಿದ್ದಾರೆ. ರಾಜ್ಯಸಭೆಯಲ್ಲಿ ನಿನ್ನೆ ಪೌರತ್ವ ಮಸೂದೆಗೆ ಅಂಗೀಕಾರ ದೊರೆಯುತ್ತಿದ್ದಂತೆ ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಮತ್ತಷ್ಟು ಹಿಂಸಾತ್ಮಕ ಪ್ರತಿಭಟನೆಗಳು ಭುಗಿಲೆದ್ದವು. ಈ ಹಿನ್ನೆಲೆಯಲ್ಲಿ ಈಶಾನ್ಯ ಜನರನ್ನು ಸಂತೈಸಿ ಓಲೈಸಲು ಪ್ರಧಾನಿ ಮುಂದಾಗಿದ್ದಾರೆ.

ಇಂದು ಮುಂಜಾನೆಯೇ ಇಂಗ್ಲಿಷ್ ಮತ್ತು ಅಸ್ಸಾಮಿ ಭಾಷೆಗಳಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ, ಅಸ್ಸಾಂನ ನನ್ನ ಸಹೋದರ ಮತ್ತು ಸಹೋದರಿಯರಿಗೆ ನಾನು ಭರವಸೆ ನೀಡುವುದೇನೆಂದರೆ ನಿಮ್ಮ ನೆಲ, ನಿಮ್ಮ ಹಕ್ಕು ಮತ್ತು ನಿಮ್ಮ ಸಂಸ್ಕøತಿಯನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಅದು ನಿಮ್ಮ ಭೂಮಿಯಲ್ಲಿ ನಿರಂತರವಾಗಿ ಮುಂದುವರಿಯಲಿದೆ ಹಾಗೂ ಇನ್ನಷ್ಟು ಬೆಳವಣಿಗೆ ಸಾಧಿಸಲಿದೆ ಎಂದು ಹೇಳಿದ್ದಾರೆ.

ಈಶಾನ್ಯ ಭಾರತದ ಹಿತಾಸಕ್ತಿ ಮತ್ತು ಒಳಿತಿಗಾಗಿಯೇ ಈ ವಿಧೇಯಕವನ್ನು ಜಾರಿಗೊಳಿಸಲಾಗುತ್ತಿದೆ. ಮಸೂದೆ ಬಗ್ಗೆ ಗೊಂದಲ, ಭಯ ಮತ್ತು ಆತಂಕ ಬೇಡ ಎಂದು ಪ್ರತಿಭಟನಾನಿರತರಿಗೆ ಮೋದಿ ಮನವಿ ಮಾಡಿದ್ದಾರೆ.  ಅಸ್ಸಾಂ ಮತ್ತು ಈಶಾನ್ಯ ರಾಜ್ಯಗಳ ಜನತೆ ಅಸ್ತಿತ್ವ ಮತ್ತು ಆಸ್ಮಿತೆಯನ್ನು ಕೇಂದ್ರ ಸರ್ಕಾರ ರಕ್ಷಿಸುತ್ತದೆ. ಈ ಪ್ರಾಂತ್ಯದ ಹಿತಾಸಕ್ತಿ ರಕ್ಷಣೆಗೆ ನಮ್ಮ ಸರ್ಕಾರ ಕಂಕಣಬದ್ಧವಾಗಿದೆ ಎಂದು ಮೋದಿ ಅಭಯ ನೀಡಿದ್ದಾರೆ.

ನಿನ್ನೆಯೂ ಕೂಡ ಪ್ರಧಾನಮಂತ್ರಿ ಈ ಮಸೂದೆಯನ್ನು ಬಲವಾಗಿ ಸಮರ್ಥಿಸಿಕೊಂಡು, ಇದೊಂದು ಐತಿಹಾಸಿಕ ನಿರ್ಧಾರ, ಇದನ್ನು ಸುವರ್ಣಾಕ್ಷರಗಳಲ್ಲಿ ಬರೆಯಬೇಕು ಎಂದು ಬಣ್ಣಿಸಿದ್ದರು.  ಅನೇಕ ವರ್ಷಗಳಿಂದ ಆಗದೇ ಇದ್ದ ಕಾರ್ಯವನ್ನು ನಮ್ಮ ಸರ್ಕಾರ ಕೇವಲ ಆರು ತಿಂಗಳಲ್ಲೇ ಸಾಧಿಸಿ ಸಾಬೀತು ಮಾಡಿದೆ ಎಂದು ಮೋದಿ ಪ್ರಶಂಸಿಸಿದ್ದರು.

ಇದೇ ವೇಳೆ ಈ ಮಸೂದೆಗೆ ಭಾರೀ ವಿರೋಧ ವ್ಯಕ್ತಪಡಿಸಿದ್ದ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದ ಮೋದಿ, ವಿಪಕ್ಷಗಳ ಮಾತು ಪಾಕಿಸ್ತಾನಿಯರಂತಿದೆ. ಅವು ಪಾಕಿಸ್ತಾನದ ಭಾಷೆ ಮಾತನಾಡುತ್ತಿವೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

Facebook Comments