ಕೊರೋನಾ ಹೋರಾಟದಲ್ಲಿ ವಿವಿಧ ದೇಶಗಳಿಗೆ ಭಾರತ ನೆರವು ನೀಡಲಿದೆ : ಪ್ರಧಾನಿ ಪುನರುಚ್ಚಾರ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಏ.10-ವಿಶ್ವವನ್ನು ಭಾರೀ ಆತಂಕಕ್ಕೆ ದೂಡಿರುವ ವಿನಾಶಕಾರಿ ಕೊರೊನಾ ಪಿಡುಗಿನ ವಿರುದ್ಧದ ಹೋರಾಟದಲ್ಲಿ ವಿವಿಧ ದೇಶಗಳಿಗೆ ಅಗತ್ಯವಾದ ಎಲ್ಲ ಸಹಾಯ ಮತ್ತು ಸಹಕಾರವನ್ನು ಭಾರತ ನೀಡಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಪುನರುಚ್ಚರಿಸಿದ್ದಾರೆ. ಕೊರೊನಾ ವಿರುದ್ಧ ಇಡೀ ವಿಶ್ವವೇ ಹೋರಾಟಕ್ಕೆ ನಿಂತಿದೆ.

ಈ ಸಂದರ್ಭದಲ್ಲಿ ಭಾರತವೂ ಸಹ ಮನುಕುಲದ ರಕ್ಷಣೆಗಾಗಿ ಅಗತ್ಯವಾದ ಎಲ್ಲ ನೆರವು ನೀಡಲಿದೆ ಏಂದು ಮೋದಿ ಇಂದು ಕೂಡ ಟ್ವೀಟ್ ಮಾಡಿದ್ದಾರೆ.  ಕೊರೊನಾ ವಿರುದ್ಧ ಹೋರಾಡುತ್ತಿರುವ ಇಸ್ರೇಲ್ ಮತ್ತು ಬ್ರೆಜಿಲ್‍ಗೆ ಭಾರತದ ಎಲ್ಲ ರೀತಿಯ ನೆರುವ ನೀಡಲಿದೆ ಅವರು ಭರವಸೆ ನೀಡಿದ್ದಾರೆ.

ಜೀವರಕ್ಷಕ ಹೈಡ್ರಾಕ್ಸಿಕ್ಲೋರೊಕ್ವಿನ್(ಎಚ್‍ಸಿಕ್ಯೂ) ಮಾತ್ರೆಗಳನ್ನು ಪೂರೈಸಲು ರಫ್ತು ನಿರ್ಬಂಧ ತೆರವುಗೊಳಿಸಿದ ಭಾರತದ ನಿರ್ಧಾರವನ್ನು ಸ್ವಾಗತಿಸಿ ಅಮೆರಿಕ ಸಲ್ಲಿಸಿರುವ ಕೃತಜ್ಞತೆಗೆ ಮೋದಿ ನಿನ್ನೆಯಷ್ಟೇ ಪ್ರತಿಕ್ರಿಯಿಸಿದ್ದರು.. ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹೈಡ್ರಾಕ್ಸಿಕ್ಲೋರೊಕ್ವಿನ್ ಸೇರಿದಂತೆ 24 ಇತರ ಲೈಫ್ ಸೇವಿಂಗ್ ಡ್ರಗ್ಸ್‍ಗಳ ಮೇಲಿನ ರಫ್ತು ನಿರ್ಬಂಧವನ್ನು ತೆರವುಗೊಳಿಸಿತ್ತು.

ಅಮೆರಿಕ ಅಲ್ಲದೇ ವಿಶ್ವದ ಇತರ 30ಕ್ಕೂ ಹೆಚ್ಚು ದೇಶಗಳೂ ಕೂಡ ಭಾರತದಿಂದ ಜೀವರಕ್ಷಕ ಔಷಧಿಗಳ ಮೇಲಿನ ರಫ್ತು ನಿರ್ಬಂಧವನ್ನು ತೆರೆವುಗೊಳಿಸಬೇಕೆಂದು ಕೋರಿದ್ದರು. ಭಾರತದ ರಫ್ತು ತೆರವು ನಿರ್ಧಾರವನ್ನು ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು, ಬ್ರೆಜಿಲ್ ಅಧ್ಯಕ್ಷ ಜೈರ್ ಬೊಲ್ಸೊನಾರ್ ಸೇರಿದಂತೆ ಅನೇಕ ದೇಶಗಳ ಮುಖ್ಯಸ್ಥರು ಸ್ವಾಗತಿಸಿ ಮೋದಿ ಅವರಿಗೆ ಕೃತಜ್ಞತೆ ಮತ್ತು ಧನ್ಯವಾದಗಳನ್ನು ಸಮರ್ಪಿಸಿದ್ದಾರೆ.

Facebook Comments