ಕೊರೋನಾ ನಿರ್ಮೂಲನೆ ಜೊತೆಗೆ ದೇಶದ ಆರ್ಥಿಕ ಅಭಿವೃದ್ಧಿಗೆ ಮೋದಿ ದೃಢ ಸಂಕಲ್ಪ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜೂ.2-ಡೆಡ್ಲಿ ಕೊರೊನಾ ವೈರಸ್ ಹಾವಳಿಯನ್ನು ಭಾರತದಿಂದ ನಿರ್ಮೂಲನೆ ಮಾಡುವ ಜತೆಗೆ ದೇಶದ ಆರ್ಥಿಕ ಅಭಿವೃದ್ಧಿಗೆ ದಿಟ್ಟ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ದೇಶದ ಪ್ರಗತಿಯನ್ನು ಸಹಿ ದಾರಿಗೆ ತರುವ ದೃಢ ಸಂಕಲ್ಪ ಮಾಡಿದ್ದಾರೆ.

ದೆಹಲಿಯಲ್ಲಿಂದು ನಡೆದ ಭಾರತೀಯ ಕೈಗಾರಿಕೆಗಳ ಒಕ್ಕೂಟ (ಸಿಐಐ) ಅಧಿವೇಶನದಲ್ಲಿ ಮಾತನಾಡಿದ ಮೋದಿ ನಾನು ಪ್ರಧಾನಿಮಂತ್ರಿಯಾಗಿ ನಿಮ್ಮೊಂದಿಗೆ ಇದ್ದೇನೆ. ನಿಮ್ಮೆಲ್ಲರ ಬೆಂಬಲ ಮತ್ತು ಸಹಕಾರದಿಂದ ಆರ್ಥಿಕಾಭಿವೃದ್ಧಿ ಮತ್ತು ದೇಶದ ಪ್ರಗತಿಯನ್ನು ಸರಿ ದಾರಿಗೆ ತರುವುದು ಕಷ್ಟವಾಗುವುದಿಲ್ಲ ಎಂದು ಕೈಗಾರಿಕೋದ್ಯಮಗಳಿಗೆ ಕರೆ ನೀಡಿದರು.

ಕೋವಿಡ್-19 ವೈರಸ್ ದಾಳಿಯಿಂದ ದೇಶದ ಆರ್ಥಿಕತೆ ಅತ್ಯಂತ ಶೋಚನೀಯ ಪ್ರಮಾಣದಲ್ಲಿ ಕುಸಿದಿದೆ ನಿಜ. ಆದರೆ ಪ್ರಗತಿಯನ್ನು ಸರಿ ದಾರಿಗೆ ತರಲು ಕಷ್ಟವಾಗುವುದಿಲ್ಲ. ಇದಕ್ಕಾಗಿ ಪ್ರತಿಯೊಬ್ಬರ ಸಹಕಾರವು ಅಗತ್ಯ ಎಂದು ಮೋದಿ ದೇಶವಾಸಿಗಳ ಬೆಂಬಲ ಕೋರಿದರು. ದೇಶದ ಪ್ರಗತಿ ನಮ್ಮ ಸರ್ಕಾರದ ಪ್ರಥಮ ಆದ್ಯತೆಯಾಗಿದೆ.

ಆರ್ಥಿಕತೆ ಸುಧಾರಣೆಗಾಗಿ ಕೇಂದ್ರ ಸರ್ಕಾರ ಕೈಗೊಂಡಿರುವ ದಿಟ್ಟ ಕ್ರಮಗಳು ದೀರ್ಘ ಕಾಲ ಭಾರತದ ನೆರವಿಗೆ ಆಧಾರ ನೀಡಲಿದೆ ಎಂದು ಪ್ರಧಾನಿ ಹೇಳಿದರು. ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿಯಲ್ಲಿ ಕೊರೊನಾ ಸಂಕಷ್ಟದಿಂದ ಪಾರು ಮಾಡಲು ಬಡವರು ಮತ್ತು ವಲಸೆ ಕಾರ್ಮಿಕರಿಗಾಗಿ ಈವರೆಗೆ 53 ಸಾವಿರ ಕೋಟಿ ರೂ.ಗಳ ನೆರವು ನೀಡಲಾಗಿದೆ ಎಂದು ಮೋದಿ ತಿಳಿಸಿದರು.

ವಿಶ್ವದ ಆರ್ಥಿಕತೆಗೂ ನೆರವು: ಕೊರೊನಾ ದಾಳಿಯಿಂದ ಕಂಗೆಟ್ಟಿರುವ ಈ ವಿಷವು ವಿಶ್ವಾಸಾರ್ಹ, ಸಮರ್ಥ ಮತ್ತು ಸದೃಢ ಪಾಲುದಾರ ರಾಷ್ಟ್ರಕ್ಕಾಗಿ ಹಾತೊರೆಯುತ್ತಿದೆ. ಭಾರತವು ವಿಶ್ವದ ಪ್ರಗತಿಗೂ ಬೆಂಬಲ ನೀಡುವ ಅಗಾಧ ಶಕ್ತಿ ಮತ್ತು ಸಾಮಥ್ರ್ಯ ಹೊಂದಿದೆ ಎಂದು ಇದೇ ಸಂದರ್ಭದಲ್ಲಿ ಘೋಷಿಸಿದರು.

ಕೊರೊನಾ ಪಿಡುಗನ್ನು ಮೂಲೋತ್ಪಾಟನೆ ಮಾಡಲು ಸರ್ಕಾರ ಈಗಾಗಲೇ ಅನೇಕ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿದೆ. ಇದೇ ವೇಳೆ ಈ ಹೆಮ್ಮಾರಿಯ ನಿಗ್ರಹಕ್ಕಾಗಿ ದೇಶಾದ್ಯಂತ ಜಾರಿಗೊಳಿಸಲಾದ ಲಾಕ್‍ಡೌನ್‍ನಿಂದಾಗಿ ಕುಸಿದಿರುವ ಆರ್ಥಿಕತೆಗೆ ಆಧಾರ ನೀಡಲು ಈಗಾಗಲೇ ಕೆಲವು ಮಹತ್ವದ ವಿಶೇಷ ಆರ್ಥಿಕ ನೆರವನ್ನು ಸಹ ಕೇಂದ್ರ ಸರ್ಕಾರ ಪ್ರಕಟಿಸಿದೆ.

ಭಾರತವು ಆರ್ಥಿಕಾಭಿವೃದ್ಧಿಯ ಸರಿ ದಾರಿಗೆ ಬಂದರೂ ವಿಶ್ವದ ಆರ್ಥಿಕ ಬೆಳವಣಿಗೆಗೂ ಆಧಾರವಾಗಲಿದೆ. ಮೊದಲಿನಿಂದಲೂ ನಮ್ಮ ದೇಶವು ಜಾಗತಿಕ ಪ್ರಗತಿ ಮತ್ತು ವಿಶ್ವದ ಆರ್ಥಿಕ ಬೆಳವಣಿಗೆಗೆ ಸಾಕಷ್ಟು ಕೊಡುಗೆ ನೀಡಿದೆ ಎಂದು ಮೋದಿ ಇದೇ ಸಂದರ್ಭದಲ್ಲಿ ಪುನರುಚ್ಚರಿಸಿದರು.

Facebook Comments