ಕೋವಿಡ್ ಸಂಕಷ್ಟದ ವೇಳೆ ಪೊಲೀಸರ ಮಾನವೀಯತೆ ಅನಾವರಣ : ಪ್ರಧಾನಿ ಪ್ರಶಂಸೆ

ಈ ಸುದ್ದಿಯನ್ನು ಶೇರ್ ಮಾಡಿ

ಹೈದರಾಬಾದ್,ಸೆ.4- ದೇಶದಲ್ಲಿ ಕೊರೊನಾ ವೈರಸ್ ಪಿಡುಗಿನ ಸಂದರ್ಭದಲ್ಲಿ ನಮ್ಮ ಪೊಲೀಸರ ಮಾನವೀಯ ಮುಖ ಅನಾವರಣಗೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೋವಿಡ್ ಹಾವಳಿ ಸಂದರ್ಭದಲ್ಲಿ ಪೊಲೀಸರು ತಮ್ಮ ಕರ್ತವ್ಯವನ್ನು ನಿಭಾಯಿಸುವ ಜತೆಗೆ ಕೊರೊನಾ ವಾರಿಯರ್ಸ್ ಆಗಿ ಕೆಲಸ ಮಾಡಿದ್ದಾರೆ.

ಬಡವರಿಗೆ ಅನ್ನ, ಆಹಾರ ನೀಡಿದ್ದಾರೆ. ನೊಂದವರ ಕಷ್ಟಕ್ಕೆ ಸ್ಪಂದಿಸಿದ್ದಾರೆ. ಹೀಗಾಗಿ ಈ ಅವಧಿಯಲ್ಲಿ ಅವರ ಮಾನವೀಯತೆಯ ಮತ್ತೊಂದು ಗುಣದ ದರ್ಶನವಾಗಿದೆ ಎಂದು ಪ್ರಧಾನಿ ಸಂತೋಷ ವ್ಯಕ್ತಪಡಿಸಿದ್ದಾರೆ. ಹೈದರಾಬಾದ್‍ನ ಸರ್ದಾರ್ ವಲಭ ಬಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿ ಪೂರ್ಣಗೊಳಿಸಿದ ಐಪಿಎಸ್ ಅಧಿಕಾರಿಗಳ ಹೊಸ ತಂಡಕ್ಕೆ ವಿಡಿಯೋ ಲಿಂಕ್ ಮೂಲಕ ಶುಭ ಕೋರಿ ಅವರು ಮಾತನಾಡಿದರು.

ಜಮ್ಮು-ಕಾಶ್ಮೀರದಲ್ಲಿ ಯುವಕರು ಭಯೋತ್ಪಾದನೆಯ ಹಾದಿ ಹಿಡಿಯದಂತೆ ತಡೆಗಟ್ಟಲು ಅಲ್ಲಿನ ಮಹಿಳೆಯರಿಗೆ ನೆರವಾಗುವಂತೆ ನೂತನ ಮಹಿಳಾ ಐಪಿಎಸ್ ಅಧಿಕಾರಿಗಳಿಗೆ ಅವರು ಸಲಹೆ ಮಾಡಿದರು. ಕೇಂದ್ರಾಡಳಿತ ಪ್ರದೇಶವಾದ ಕಾಶ್ಮೀರದ ಜನತೆ ತುಂಬಾ ಸೌಮ್ಯ ಸ್ವಭಾವದವರು.

ಆದರೆ, ಕೆಲವು ಯುವಕರು ಭಯೋತ್ಪಾದಕರ ಪ್ರಲೋಭನೆಗೆ ಒಳಗಾಗಿ ಅಡ್ಡದಾರಿ ಹಿಡಿಯುತ್ತಿದ್ದಾರೆ. ಇದನ್ನು ತಡೆಗಟ್ಟಲು ಅಲ್ಲಿನ ಮಹಿಳಾ ಮಾತೆಯರು ಶ್ರಮಿಸುತ್ತಿದ್ದಾರೆ. ಇವರಿಗೆ ಮಹಿಳಾ ಐಪಿಎಸ್ ಅಧಿಕಾರಿಗಳು ನೆರವಾಗಬೇಕೆಂದು ಮೋದಿ ಮನವಿ ಮಾಡಿದರು.

ಯೋಗ, ಧ್ಯಾನ ಮತ್ತು ಪ್ರಾಣಾಯಮದಿಂದ ಕೊರೊನಾ ಪಿಡುಗನ್ನು ನಿವಾರಿಸಬಹುದು. ಇದನ್ನು ಪ್ರತಿಯೊಬ್ಬರು ತಮ್ಮ ನಿತ್ಯ ಬದುಕಿನಲ್ಲಿ ಅಳವಡಿಸಿಕೊಳ್ಳುವಂತೆ ಪ್ರಧಾನಿ ಮೋದಿ ಪುರುಚ್ಚರಿಸಿದರು.

Facebook Comments