ವಿಶ್ವಸಂಸ್ಥೆ 75ನೇ ಮಹಾಧಿವೇಶನ : ಮೋದಿ ಅವಳಿ ಭಾಷಣಕ್ಕೆ ಭಾರೀ ಮಹತ್ವ

ಈ ಸುದ್ದಿಯನ್ನು ಶೇರ್ ಮಾಡಿ

ನ್ಯೂಯಾರ್ಕ್,ಸೆ.19-ವಿಶ್ವ ಸಂಸ್ಥೆಯ 75ನೇ ಮಹಾಧಿವೇಶನ ಸಂದರ್ಭದಲ್ಲಿ ಮುಂದಿನ ವಾರ ಪ್ರಧಾನಿ ನರೇಂದ್ರಮೋದಿ ಅವರ ಎರಡು ಭಾಷಣಗಳು ಭಾರೀ ಪ್ರಾಮುಖ್ಯತೆ ಪಡೆದುಕೊಂಡಿವೆ.

ಭಾರತವೂ ವಿಶ್ವಸಂಸ್ಥೆಯ ಅತ್ಯಂತ ಪ್ರಬಲ ಭದ್ರತಾ ಮಂಡಳಿಯಲ್ಲಿ ಖಾಯಂ ಅಲ್ಲದ ಸದಸ್ಯತ್ವ ಸ್ಥಾನಕ್ಕೆ ಚುನಾಯಿತವಾಗಿದ್ದು, ಜನವರಿ 1ರಿಂದ ಸಂಯುಕ್ತ ರಾಷ್ಟ್ರಗಳ ಈ ವೇದಿಕೆಗೆ ಸೇರ್ಪಡೆಯಾಗುವ ಹಿನ್ನೆಲೆಯಲ್ಲೂ ಪ್ರಧಾನಿಯವರ ಅವಳಿ ಭಾಷಣಕ್ಕೆ ಭಾರೀ ಮಹತ್ವ ಲಭಿಸಿದೆ ಎಂದು ವಿಶ್ವಸಂಸ್ಥೆಯ ಶಾಶ್ವತ ರಾಯಭಾರಿ ಟಿ.ಎಸ್.ತಿರುಮೂರ್ತಿ ತಿಳಿಸಿದ್ದಾರೆ.

ಸೋಮವಾರದಿಂದ ವಿಶ್ವಸಂಸ್ಥೆಯ ಮಹಾಧಿವೇಶನ(ಯುಎನ್‍ಜಿಎ) ಆರಂಭವಾಗಲಿದ್ದು, 75ನೇ ಸಾಮಾನ್ಯಸಭೆಯ ಉನ್ನತ ಮಟ್ಟದ ಸಭೆಯನ್ನುದ್ದೇಶಿಸಿ ಮೋದಿ ಮಾತನಾಡುವರು.ಅಲ್ಲದೆ ಸೆ.22ರಿಂದ 29ರವರೆಗೆ ನಡೆಯುವ ಸಾಮಾನ್ಯ ಚರ್ಚೆಯಲ್ಲೂ ಪ್ರಧಾನಿ ಭಾಷಣ ಮಾಡುವರು. ಮೋದಿ ಅವರ ಪೂರ್ವ ವಿಡಿಯೋ ಭಾಷಣವನ್ನು ಈ ಎರಡು ಸಭೆಗಳಲ್ಲಿ ಬಿತ್ತರಿಸಲಾಗುತ್ತದೆ.

ಪ್ರಸ್ತುತ ವಿಶ್ವಕ್ಕೆ ಎದುರಾಗಿರುವ ದೊಡ್ಡ ಸವಾಲುಗಳು, ಭಯೋತ್ಪಾದನೆ ನಿಗ್ರಹ ಸೇರಿದಂತೆ ಅಂತಾರಾಷ್ಟ್ರೀಯ ಮಹತ್ವದ ವಿಷಯಗಳ ಬಗ್ಗೆ ತಮ್ಮ ಭಾಷಣಗಳಲ್ಲಿ ಪ್ರಸ್ತಾಪ ಮಾಡಲಿದ್ದು, ಜಗತ್ತಿನ ಕುತೂಹಲ ಕೆರಳಿಸಿದೆ ಎಂದು ತಿರುಮೂರ್ತಿ ಹೇಳಿದ್ದಾರೆ.  193 ಸದಸ್ಯ ರಾಷ್ಟ್ರಗಳು ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಭಾಗವಹಿಸುತ್ತಿದ್ದು, 75ನೇ ವರ್ಷಾಚರಣೆಯು ಭಾರೀ ಪ್ರಾಮುಖ್ಯತೆ ಪಡೆದುಕೊಂಡಿದೆ.

ಇಂಡೋ-ಚೀನಾ ಗಡಿಯಲ್ಲಿ ಅದರಲ್ಲಿಯೂ ಪೂರ್ವ ಲಡಾಕ್, ಅರುಣಾಚಲ ಪ್ರದೇಶಗಳಲ್ಲಿ ಚೀನಾದ ಗಡಿ ಕ್ಯಾತೆ ಕಾಶ್ಮೀರದಲ್ಲಿ ಪಾಕಿಸ್ತಾನದ ನಿರಂತರ ಕದನ ವಿರಾಮ ಒಪ್ಪಂದ ಉಲ್ಲಂಘನೆ, ಭಯೋತ್ಪಾದನೆ ಚಟುವಟಿಕೆಗಳಿಗೆ ಕುಮ್ಮಕ್ಕು, ವಿಶ್ವಕ್ಕೆ ಅತಿದೊಡ್ಡ ಸವಾಲಾಗಿರುವ ಕೋವಿಡ್ ನಿಯಂತ್ರಣ ಸೇರಿದಂತೆ ಪ್ರಮುಖ ವಿಷಯಗಳ ಬಗ್ಗೆ ಮೋದಿ ತಮ್ಮ ಭಾಷಣಗಳಲ್ಲಿ ವಿಶ್ವದ ಗಮನಸೆಳೆಯಲಿದ್ದಾರೆ ಎಂದು ವಿಶ್ವಸಂಸ್ಥೆಯ ಭಾರತದ ಖಾಯಂ ರಾಯಭಾರಿ ತಿರುಮೂರ್ತಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಕೊರೊನಾ ಹಾವಳಿ ಕಾರಣ, ವಿಶ್ವದ ಅಗ್ರ ನಾಯಕರು ವಿವಿಧ ದೇಶಗಳ ಅಧ್ಯಕ್ಷರು, ಪ್ರಧಾನಿಗಳು ವೈಯಕ್ತಿಕವಾಗಿ ಈ ಸಭೆಯಲ್ಲಿ ಹಾಜರಾಗುತ್ತಿಲ್ಲ. ಬದಲಿಗೆ ರೆರ್ಕಾಡೆಡ್ ವಿಡಿಯೋ ಮೂಲಕ ಭಾಷಣವನ್ನು ಮಂಡಿಸಲಿದ್ದಾರೆ.  ವಾಷಿಂಗ್ಟನ್‍ನಲ್ಲಿದ್ದರೂ ಕೂಡ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹ ನ್ಯೂಯಾರ್ಕ್‍ಗೆ ತೆರಳಿ ವಿಶ್ವಸಂಸ್ಥೆಯ 75ನೇ ಸಾಮಾನ್ಯ ಸಭೆಯಲ್ಲಿ ಭಾಗವಹಿಸುತ್ತಿಲ್ಲ. ಅವರು ಸಹ ಪ್ರೀರೆರ್ಕಾಡೆಡ್ ಮೂಲಕ ಭಾಷಣವನ್ನು ಮಂಡಿಸುವರು.

ಭಾರತವು ವಿಶ್ವಸಂಸ್ಥೆಯ ಭದ್ರತಾ ಮಂಡಳಿ( ಯುಎನ್‍ಎಸ್‍ಸಿ)ಗೆ ಶಾಶ್ವತವಲ್ಲದ ಸದಸ್ಯ ರಾಷ್ಟ್ರವಾಗಿ ಈಗಾಗಲೇ ಚುನಾಯಿತವಾಗಿದ್ದು, ಈಗಾಗಲೇ ಜ.1ರಿಂದ ಮಂಡಳಿಗೆ ಸೇರ್ಪಡೆಯಾಗಿ ಎರಡು ವರ್ಷಗಳ ಕಾಲ ಕಾರ್ಯ ನಿರ್ವಹಿಸಲಿದೆ.

Facebook Comments