ರಾಜ್ಯದ ಪ್ರವಾಹ ಸಂತ್ರಸ್ತರಿಗೆ ಪ್ರಧಾನಿ ಮೋದಿ ನೆರವಿನ ಅಭಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.19- ಕರ್ನಾಟಕದಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಹಾಮಳೆಗೆ ಭಾರೀ ಪ್ರಮಾಣದ ನಷ್ಟ ಉಂಟಾಗಿದ್ದು, ನೆರೆಬಾಧಿತ ಕುಟುಂಬಗಳಿಗೆ ಪರಿಹಾರ ಒದಗಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಪ್ರಯತ್ನ ಮಾಡಲಾಗುತ್ತಿದೆ. ರಾಜ್ಯಕ್ಕೆ ಕೇಂದ್ರದಿಂದ ಸಾಧ್ಯವಾದಷ್ಟು ನೆರವು ನೀಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಸಂತ್ರಸ್ಥರಿಗೆ ಅಭಯ ನೀಡಿದ್ದಾರೆ.

100ನೇ ಘಟಿಕೋತ್ಸವ ಸಂಭ್ರಮದಲ್ಲಿರುವ ಮೈಸೂರು ವಿಶ್ವವಿದ್ಯಾಲಯ ಹಾಗೂ ಎಲ್ಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಮತ್ತು ಮೈಸೂರು ಜನತೆಗೆ ಕನ್ನಡದಲ್ಲೇ ದಸರಾ ಹಬ್ಬದ ಶುಭಾಶಯ ತಿಳಿಸಿದ ಮೋದಿ, ಕೋವಿಡ್‍ನಿಂದಾಗಿ ವಿಜೃಂಭಣೆಯಿಂದ ಕಾರ್ಯಕ್ರಮ ಆಚರಿಸಲು ನಿರ್ಬಂಧಗಳು ಇರಬಹುದು. ಅದರಲ್ಲೂ ಮಳೆ ಕೂಡ ಸ್ವಲ್ಪ ನಿರ್ಬಂಧ ಹೇರಿದೆ.
ಆದರೆ ಆಚರಣೆಯ ಉತ್ಸಾಹ ಮಾತ್ರ ಕುಂದಿಲ್ಲ. ಪ್ರವಾಹ ಪೀಡಿತ ಕುಟುಂಬಗಳಿಗೆ ಸಾಂತ್ವನ ತಿಳಿಸುತ್ತೇನೆ. ರಾಜ್ಯಕ್ಕೆ ಕೇಂದ್ರದಿಂದ ಸಾಧ್ಯವಾದಷ್ಟು ನೆರವು ನೀಡುತ್ತೇವೆ ಎಂದು ಹೇಳಿದರು.

ಮಳೆಯಿಂದ ಹಾನಿಪೀಡಿತ ಕುಟುಂಬಗಳಿಗೆ ನನ್ನ ಸಹಾನುಭೂತಿ ಇದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಪರಿಹಾರ ಕಾರ್ಯ ನಡೆಸಲಾಗುತ್ತಿದೆ. ಈ ಬಗ್ಗೆ ಯಾರೊಬ್ಬರೂ ಆತಂಕಕ್ಕೆ ಒಳಗಾಗಬಾರದೆಂದು ಮನವಿ ಮಾಡಿದರು. ಶಿಕ್ಷಣದ ಮೂಲಭೂತ ವ್ಯವಸ್ಥೆಯ ಬದಲಾವಣೆಗೆ ರಾಷ್ಟ್ರೀಯ ಶಿಕ್ಷಣ ನೀತಿ ಮೊದಲ ಹೆಜ್ಜೆಯಾಗಿದೆ. ನಮ್ಮ ದೇಶದಲ್ಲಿ ಈಗ ಆಗುತ್ತಿರುವ ಸುಧಾರಣೆಗಳು ಈ ಹಿಂದೆ ಆಗಿಲ್ಲ. ಕಳೆದ 6 ವರ್ಷಗಳಲ್ಲಿ ಅನೇಕ ಕ್ಷೇತ್ರಗಳಲ್ಲಿ ಮಹತ್ತರ ಬದಲಾವಣೆಗಳಾಗಿವೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಎಲ್‍ಕೆಜಿಯಿಂದ ಉನ್ನತ ಶಿಕ್ಷಣದವರೆಗೂ ಸಾಕಷ್ಟು ಬದಲಾವಣೆ ತರಲಿದೆ. ಮೈಸೂರು ವಿಶ್ವವಿದ್ಯಾಲಯವು ಶೀಘ್ರದಲ್ಲೇ ಇದನ್ನು ಅಳವಡಿಸಿಕೊಳ್ಳಲಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ಇಂದು ನಿಮಗೆ ಬಹಳ ಮಹತ್ತರವಾದ ದಿನವಾಗಿದೆ. ಶಿಕ್ಷಣ ಕ್ಷೇತ್ರಕ್ಕೆ ನಿಮ್ಮ ಕೊಡುಗೆ ಅಪಾರ. ಪ್ರಾಚೀನ ಭಾರತದ ಶಿಕ್ಷಣದ ಮಹತ್ವದ ಸ್ಥಳ ಮೈಸೂರು. ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ವಿಶ್ವೇಶ್ವರಯ್ಯನವರ ಕನಸು ಮೈಸೂರು. ಶಿಕ್ಷಣ ಜೀವನದ ಬೆಳಕಾಗಿದೆ ಎಂದು ಕನ್ನಡದ ಮಹಾನ್ ಲೇಖಕ ಗೋರೂರು ರಾಮಸ್ವಾಮಿ ಅಯ್ಯಂಗಾರ್ ಹೇಳಿದ್ದರು. ವಿವಿಯ ಪದವಿ ಪಡೆದು ನಿಜ ಜೀವನಕ್ಕೆ ಕಾಲಿಡುತ್ತೀದ್ದೀರಿ. ಪದವಿ ಜೊತೆ ರಾಷ್ಟ್ರ ನಿರ್ಮಾಣದ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ ಎಂದರು.

ದೇಶಕ್ಕೆ ಹೆಣ್ಣು ಮಕ್ಕಳ ಕೊಡುಗೆ ಅಪಾರವಿದೆ. ನಿಮ್ಮ ಸಾಮಥ್ರ್ಯದ ಆಧಾರದ ಮೇಲೆ ಸಾಧನೆ ಮಾಡಿ. ನಿಮ್ಮ ಪ್ರತಿಭೆಯ ಮೂಲಕ ದೇಶಕ್ಕೆ ಕೊಡುಗೆ ನೀಡಿ. ಉಜ್ವಲ ಭವಿಷ್ಯ ನಿಮ್ಮದಾಗಿರಲಿ ಎಂದು ಹಾರೈಸಿದರು. ಮೈಸೂರು ವಿವಿ ಪ್ರಾಚೀನ ಭಾರತದ ಸಮೃದ್ಧ ಶಿಕ್ಷಣ ವ್ಯವಸ್ಥೆಯ ಹಾಗೂ ಭವಿಷ್ಯ ಶಿಕ್ಷಣಕ್ಕೆ ಮಾರ್ಗದರ್ಶನ ಮಾಡಬಲ್ಲ ಒಂದು ಪ್ರಮುಖ ಕೇಂದ್ರವಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಎಂ.ವಿಶ್ವೇಶ್ವರಯ್ಯ ಅವರ ದೂರದೃಷ್ಟಿ ಮತ್ತು ಸಂಕಲ್ಪಗಳನ್ನು ಸಾಕಾರಗೊಳಿಸಿರುವ ವಿಶ್ವವಿದ್ಯಾಲಯವಿದು.

ಇಂದಿನ ಈ ದಿನಕ್ಕೆ ಸರಿಯಾಗಿ 102 ವರ್ಷ ಹಿಂದೆ ಇದೇ ದಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ವಿವಿಯ ಮೊದಲ ಘಟಿಕೋತ್ಸವ ಭಾಷಣ ಮಾಡಿದ್ದರು. ಅಂದಿನಿಂದ ಇಂದಿನ ತನಕ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಿದ ಅನೇಕ ರತ್ನಗಳು ಪದವಿ ದೀಕ್ಷೆ ಪಡೆದ ಸಂದರ್ಭಕ್ಕೆ ಈ ರತ್ನಗರ್ಭ ಪ್ರಾಂಗಣವು ಸಾಕ್ಷಿಯಾಗಿದೆ ಎಂದು ಪ್ರಧಾನಿ ಸ್ಮರಿಸಿದರು.
ಭಾರತ ರತ್ನ ಡಾ.ಸರ್ವಪ್ಪಲ್ಲಿ ರಾಧಾಕೃಷ್ಣನ್ ಅವರು ಈ ವಿಶ್ವವಿದ್ಯಾಲಯದಲ್ಲಿ ಅನೇಕ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದ್ದಾರೆ.

ಅದೇ ರೀತಿ ಇಂದು ಇಲ್ಲಿ ನೆರೆದಿರುವ ಎಲ್ಲರ ಬಗ್ಗೆಯೂ ನಮಗೆ ವಿಶ್ವಾಸವಿದೆ. ನಿರೀಕ್ಷೆಯೂ ಹೆಚ್ಚಾಗಿದೆ. ಇಂದು ನಿಮ್ಮ ಪದವಿ ಪ್ರಮಾಣದೊಂದಿಗೆ ವಿಶ್ವವಿದ್ಯಾಲಯ, ಇಲ್ಲಿನ ಪ್ರಾಧ್ಯಾಪಕರು ನಿಮ್ಮ ಮೇಲೆ ಸಮಾಜದ ಹೊಣೆಗಾರಿಕೆಯನ್ನೂ ಹೊರಿಸಿದ್ದಾರೆ ಎಂದು ಕಿವಿಮಾತು ಹೇಳಿದರು.

ಶಿಕ್ಷಣ ಮತ್ತು ದೀಕ್ಷೆಗಳೆರಡು ವಿದ್ಯಾರ್ಥಿ ಜೀವನದ ಎರಡು ಪ್ರಮುಖ ಘಟ್ಟಗಳು. ಸಾವಿರಾರು ವರ್ಷಗಳನ್ನು ಗಮನಿಸಿದೆ ನಮ್ಮಲ್ಲೊಂದು ಪರಂಪರೆ ಇದೆ. ನಾವು ಯಾವಾಗ ದೀಕ್ಷೆಯ ಮಾತುಗಳನ್ನಾಡುತ್ತೇವೆಯೋ ಅದು ಕೇವಲ ಪದವಿ ಪಡೆಯುತ್ತಿರುವ ಸಂದರ್ಭವಷ್ಟೇ ಅಲ್ಲ. ಈ ದಿನ ಜೀವನದ ಭವಿಷ್ಯದ ಶಿಕ್ಷಣಕ್ಕಾಗಿ ಹೊಸ ಸಂಕಲ್ಪ ತೆಗೆದುಕೊಳ್ಳಲು ಪ್ರೇರಣೆ ಕೊಡುತ್ತದೆ. ಇಂದು ನೀವು ಒಂದು ಔಪಚಾರಿಕ ವಿಶ್ವವಿದ್ಯಾಲಯದ ಕ್ಯಾಂಪಸ್‍ನಿಂದ ಹೊರಬಂದು, ಬದುಕೆಂಬ ವಿರಾಟ ವಿಶ್ವವಿದ್ಯಾಲಯದ ಕ್ಯಾಂಪಸ್‍ಗೆ ತೆರಳುತ್ತಿದ್ದೀರಿ ಎಂದು ಹೇಳಿದರು.

ಕಳೆದ ಆರು ವರ್ಷಗಳ ಅವಧಿಯಲ್ಲಿ ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತರುವ ಪ್ರಯತ್ನ ಹೆಚ್ಚಾಗಿ ನಡೆದಿದೆ. ವಿದ್ಯಾರ್ಥಿಗಳಿಗೆ ಈಗಿನ ಅಗತ್ಯವನ್ನು ಪೂರೈಸುವುದಲ್ಲದೆ, ಅವರ ಭವಿಷ್ಯಕ್ಕೆ ಸಂಬಂಧಿಸಿದ ಎಲ್ಲ ರೀತಿ ನೆರವನ್ನು ಒದಗಿಸುವುದಕ್ಕೂ ಪ್ರಯತ್ನ ನಡೆದಿದೆ. ಮೂಲಸೌಕರ್ಯದಿಂದ ಹಿಡಿದು, ರಚನಾತ್ಮಕ ವಿನ್ಯಾಸ ಪರಿಷ್ಕರಿಸುವ ತನಕ ಹಲವು ರೀತಿಯ ಬದಲಾವಣೆ ತರುವ ಪ್ರಯತ್ನ ಮುಂದುವರಿದಿದೆ.

ಭಾರತವನ್ನು ಉನ್ನತ ಶಿಕ್ಷಣದ ಗ್ಲೋಬಲ್ ಹಬ್ ಮಾಡುವುದಕ್ಕಾಗಿ, ನಮ್ಮ ಯುವಜನರನ್ನ ಸ್ಪರ್ಧಾತ್ಮಕರನ್ನಾಗಿಸುವುದಕ್ಕೆ ಗುಣಾತ್ಮಕ, ಸಂಖ್ಯಾತ್ಮಕ ವೃದ್ಧಿಗೆ ಪ್ರಯತ್ನ ನಡೆದಿದೆ. ಸ್ವಾತಂತ್ರ್ಯೋತ್ತರ ಭಾರತದಲ್ಲಿ 2014ರ ತನಕ 16 ಐಐಟಿಗಳಷ್ಟೇ ಇದ್ದವು. ಈಗ ಕಳೆದ ಆರು ವರ್ಷಗಳ ಅವಧಿಯಲ್ಲಿ ಅವಶ್ಯವಾಗಿ ಪ್ರತಿವರ್ಷ ಒಂದು ಹೊಸ ಐಐಟಿ ಸ್ಥಾಪನೆಯಾಗಿದೆ. ಇದರಲ್ಲಿ ಕರ್ನಾಟಕದ ಧಾರವಾಡದಲ್ಲೂ ಒಂದು ಸ್ಥಾಪನೆಯಾಗಿದೆ ಎಂದು ಹೇಳಿದರು.

ಸುಧಾಮೂರ್ತಿಗೆ ಗೌರವ ಡಾಕ್ಟರೇಟ್ ಪ್ರದಾನ: ಘಟಿಕೋತ್ಸವದಲ್ಲಿ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಮತ್ತು ಡಿಸಿಎಂ ಅಶ್ವತ್ಥ್ ನಾರಾಯಣ ಭಾಗಿಯಾಗಿದ್ದರು.

Facebook Comments