ಸಂಸತ್ ಕರ್ತವ್ಯಕ್ಕೆ ಗೈರು ಆಗುವ ಸಚಿವರ ಪಟ್ಟಿ ಕೇಳಿದ ಪ್ರಧಾನಿ ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಜು.16- ಸಂಸತ್ ಕರ್ತವ್ಯಕ್ಕೆ ಗೈರು ಹಾಜರಾಗುವ ತಮ್ಮ ಮಂತ್ರಿಮಂಡಳ ಸಹದ್ಯೋಗಿಗಳ ವಿರುದ್ಧ ಚಾಟಿ ಬೀಸಲು ಪ್ರಧಾನಿ ನರೇಂದ್ರ ಮೋದಿ ಸಜ್ಜಾಗಿದ್ದಾರೆ. ಪಾರ್ಲಿಮೆಂಟ್ ಡ್ಯೂಟಿಗೆ ಅನುಪಸ್ಥಿತರಾಗುವ ಮಂತ್ರಿಮಹೋದಯರ ಪಟ್ಟಿಯನ್ನು ತಮಗೆ ಪ್ರತಿಸಂಜೆ ನೀಡಬೇಕೆಂದು ಪ್ರಧಾನಿ ಹುಕುಂ ಹೊರಡಿಸಿದ್ದಾರೆ.

ಕರ್ತವ್ಯಕ್ಕೆ ಗೈರಾಗುವ ಸಂಸದರ ಪಟ್ಟಿಯನ್ನು ಪ್ರತಿದಿನ ತಮಗೆ ನೀಡುವ ಜವಾಬ್ದಾರಿಯನ್ನು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಅವರಿಗೆ ಒಪ್ಪಿಸಿದ್ದಾರೆ. ಜೋಷಿ ಅವರು ಸಂಸತ್ ಕರ್ತವ್ಯಕ್ಕೆ ಯಾವ ಯಾವ ಸಚಿವರು ಚಕ್ಕರ್ ಹಾಕುತ್ತಾರೆ ಎಂದು ಗಮನಿಸಿ ಪ್ರಧಾನಿ ಅವರಿಗೆ ವರದಿ ಒಪ್ಪಿಸಬೇಕು.

ಇತ್ತೀಚೆಗೆ ನಡೆದ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಮೋದಿ ಸಂಸದರಿಗೆ ಗಂಟೆಗಳ ಕಡೆಗೆ ಗಮನಹರಿಸದೆ ಜನರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಬೇಕೆಂದು ಸ್ಪಷ್ಟ ಸೂಚನೆ ನೀಡಿರುವುದಾಗಿ ಪ್ರಹ್ಲಾದ್ ಜೋಷಿ ಇತ್ತೀಚಿಗಷ್ಟೆ ತಿಳಿಸಿದ್ದರು. ಸಂಸದರು ಅತ್ಯಂತ ನಿಷ್ಠೆ, ಪ್ರಾಮಾಣಿಕತೆ ಮತ್ತು ದಕ್ಷತೆಯಿಂದ ಕಾರ್ಯನಿರ್ವಹಿಸಬೇಕು.

ತಮ್ಮ ತಮ್ಮ ಕ್ಷೇತ್ರಗಳಲ್ಲಿ ಆಗಾಗ ಸಂಚಾರ ನಡೆಸಿ ಜನರ ಸಮಸ್ಯೆಗಳನ್ನು ಆಲಿಸಿ ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ಸಭೆಯಲ್ಲಿ ಸೂಚಿಸಿದ್ದಾರೆ. ಲೋಕಸಭಾ ಕ್ಷೇತ್ರದ ವಿಧಾನಸಭಾ ಸದಸ್ಯರುಗಳು, ವಿಧಾನಸಭಾ ಕ್ಷೇತ್ರದ ವಾರ್ಡ್‍ಗಳ ಜನಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕೆಂದು ಸಲಹೆ ನೀಡಿದ್ದಾರೆ.

ಸಂಸತ್ತಿನ ಕಲಾಪಗಳಿಗೆ ಅನಗತ್ಯವಾಗಿ ಗೈರಾಗುವ ಸಂಸದರು ಮತ್ತು ಪಾರ್ಲಿಮೆಂಟ್ ಕರ್ತವ್ಯಕ್ಕೆ ಹಾಜರಾಗದೆ ಇರುವ ಸಚಿವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಗುಡುಗಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಶಿಸ್ತು ಮತ್ತು ಸಮಯಪಾಲನೆಗೆ ಹೆಸರಾದ ಮೋದಿಯವರು ಪಕ್ಷದ ಕಾರ್ಯಕರ್ತರಿಂದ ಹಿಡಿದು ಮಂತ್ರಿಮಹೋದಯದವರಿಗೆ ಕಡ್ಡಾಯವಾಗಿ ಪಾಲಿಸಬೇಕೆಂದು ಹುಕುಂ ಹೊರಡಿಸಿದ್ದಾರೆ.

Facebook Comments