ಸಿಎಂ ಬಿಎಸ್ವೈ ಕೊರೋನಾ ಕಂಟ್ರೋಲ್ ಕಾರ್ಯಕ್ಕೆ ಶಹಭಾಷ್‍ ಎಂದ ಪಿಎಂ ಮೋದಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.1-ವಿಶ್ವವನ್ನೇ ಕಾಡುತ್ತಿರುವ ಕೊರೊನಾ ವೈರಸ್ ನಿಯಂತ್ರಣ ಮಾಡುವಲ್ಲಿ ಕರ್ನಾಟಕ ಸರ್ಕಾರ ಅತ್ಯುತ್ತಮ ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರಮೋದಿ ರಾಜ್ಯ ಸರ್ಕಾರಕ್ಕೆ ಶಹಭಾಷ್‍ಗಿರಿ ಕೊಟ್ಟಿದ್ದಾರೆ.

ಇತರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕದಲ್ಲಿ ಕೊರೊನಾ ಸೋಂಕು ಒಬ್ಬರಿಂದ ಒಬ್ಬರಿಗೆ ಹಬ್ಬುವುದನ್ನು ತಡೆಗಟ್ಟುವಲ್ಲಿ ಇಲ್ಲಿನ ಸರ್ಕಾರ ಕೈಗೊಂಡಿರುವ ಕ್ರಮಗಳು ಪ್ರಶಂಸನೀಯವಾಗಿವೆ ಎಂದು ಮುಕ್ತಕಂಠದಿಂದ ಹೊಗಳಿದ್ದಾರೆ.

ಬೆಂಗಳೂರಿನ ರಾಜೀವ್‍ಗಾಂ ಆರೋಗ್ಯ ವಿವಿಯ 25ನೇ ಸಂಸ್ಥಾಪನಾ ದಿನಾಚರಣೆ ಮತ್ತು ರಜತಾ ಮಹೋತ್ಸವದ ಅಂಗವಾಗಿ ನಡೆದ ಕಾರ್ಯಕ್ರಮವನ್ನು ನವದೆಹಲಿಯಿಂದಲೇ ಆನ್‍ಲೈನ್ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಕರ್ನಾಟಕ ಇಂದು ಸಮರ್ಥವಾಗಿ ಕೊರೊನಾ ನಿಯಂತ್ರಣ ಮಾಡುತ್ತಿದೆ. ಇದಕ್ಕಾಗಿ ನಾನು ಅಲ್ಲಿನ ಪ್ರತಿಯೊಬ್ಬರನ್ನು ಅಭಿನಂದಿಸುತ್ತೇನೆ. ಇದಕ್ಕೆ ಕಾರಣರಾದ ವೈದ್ಯರು, ನರ್ಸ್‍ಗಳು, ವೈದ್ಯಕೀಯ ಸಿಬ್ಬಂದಿ ಎಲ್ಲರನ್ನೂ ಅಭಿನಂದಿಸುತ್ತೇನೆ. ಮುಂದೆ ಇನ್ನಷ್ಟು ಒಳ್ಳೆಯ ಕೆಲಸ ಮಾಡಬೇಕೆಂದು ಸಲಹೆ ಮಾಡಿದರು.

ಕೊರೊನಾ ನಮ್ಮ ಕಣ್ಣಿಗೆ ಕಾಣದ ಶತ್ರು. ಅದರ ವಿರುದ್ಧ ಇಡೀ ವಿಶ್ವವೇ ಒಂದಾಗಿ ಹೋರಾಟ ಮಾಡುತ್ತಿದೆ. ನಮಗೆ ಇಂದು ಜಯ ಸಿಗದಿರಬಹುದು. ಆದರೆ ಮುಂದೊಂದು ದಿನ ಖಂಡಿತವಾಗಿಯೂ ಜಯ ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ತಮ್ಮ ಮಾತಿನುದ್ದಕ್ಕೂ ವೈದ್ಯರು, ನರ್ಸ್ ಮತ್ತು ಸಿಬ್ಬಂದಿಗಳನ್ನು ಮುಕ್ತ ಕಂಠದಿಂದ ಹೊಗಳಿದ ಮೋದಿ ಅವರು ಇಂದು ಅವರೆಲ್ಲರೂ ತಮ್ಮ ಜೀವದ ಹಂಗು ತೊರೆದು ಕೊರೊನಾ ನಿಯಂತ್ರಿಸುವಲ್ಲಿ ತೊಡಗಿದ್ದಾರೆ. ಅವರು ನನ್ನ ಪಾಲಿಗೆ ಜೀವ ರಕ್ಷಣೆ ಮಾಡುವ ಯೋಧರು ಎಂದು ಪ್ರಶಂಸಿಸಿದರು.

2ನೇ ಮಹಾಯುದ್ಧದ ನಂತರ ಇಂದು ವಿಶ್ವ ಅತ್ಯಂತ ದೊಡ್ಡ ಸಮಸ್ಯೆಯನ್ನು ಎದುರಿಸುತ್ತಿದೆ. ಇದಕ್ಕಾಗಿ ಎಲ್ಲ ರಾಷ್ಟ್ರಗಳು ಒಂದಾಗಿ ಈ ಕೊರೊನಾ ವಿರುದ್ಧ ಹೋರಾಟ ನಡೆಸಬೇಕು. ಕೊರೊನಾದಿಂದ ಆರ್ಥಿಕತೆಗೆ ದೊಡ್ಡ ಹೊಡೆತ ಬಿದ್ದಿದೆ. ಎಲ್ಲ ರಾಷ್ಟ್ರಗಳು ಒಂದಾಗಿ ಕುಸಿದುಬಿದ್ದಿರುವ ವ್ಯವಸ್ಥೆಯನ್ನು ಸರಿಪಡಿಸಲು ಮುಂದಾಗಬೇಕು ಎಂದು ಕರೆ ಕೊಟ್ಟರು.

ಇನ್ನು ಭಾರತ ವೈದ್ಯಕೀಯ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ ಮೋದಿ, ಕಳೆದ 5 ವರ್ಷಗಳಲ್ಲಿ ನಾವು 30 ಸಾವಿರ ವೈದ್ಯಕೀಯ ಸೀಟುಗಳನ್ನು ಹಂಚಿದ್ದೇವೆ. ನೂತನ ವೈದ್ಯಕೀಯ ಆಯೋಗವನ್ನು ರಚನೆ ಮಾಡಿದ್ದೇವೆ. ಆದರೂ ನಾವು ಇನ್ನು ಸಾಸಬೇಕಿರುವುದು ಸಾಕಷ್ಟಿದೆ ಎಂದರು.

ಮೊದಲು ಪಿಪಿಇ ಕಿಟ್‍ಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳಬೇಕಾದಂತಹ ಪರಿಸ್ಥಿತಿ ಇತ್ತು. ಭಾರತ ಇಂದು 1.25 ಕೋಟಿ ಮಾಸ್ಕ್‍ಗಳನ್ನು ಉತ್ಪಾದನೆ ಮಾಡುತ್ತಿದೆ. ಸ್ಥಳೀಯವಾಗಿ ಎಲ್ಲವನ್ನು ನಾವೇ ಉತ್ಪಾದನೆ ಮಾಡುವ ಹಂತಕ್ಕೆ ಬಂದಿದ್ದೇವೆ. ಇದಕ್ಕೆ ಕಾರಣ ವೈದ್ಯಕೀಯ ಕ್ಷೇತ್ರದಲ್ಲಿ ನೀವು ಮಾಡಿರುವ ಸಾಧನೆ ಮೆಚ್ಚುಗೆ ವ್ಯಕ್ತಪಡಿಸಿದರು.

2025ಕ್ಕೆ ಭಾರತ ಸಂಪೂರ್ಣವಾಗಿ ಕ್ಷಯದಿಂದ ಮುಕ್ತವಾಗಬೇಕು. ಇಂತಹ ಮಾರಕ ರೋಗಗಳು ಯಾವುದೇ ದೇಶಕ್ಕೆ ಅಪಾಯಕಾರಿ. ಇದಕ್ಕಾಗಿ ಎಲ್ಲ ರಾಷ್ಟ್ರಗಳು ಕೈ ಜೋಡಿಸಬೇಕಾದ ಅಗತ್ಯವಿದೆ. ಸದ್ಯ ಮಾನವೀಯತೆ ಮಾತ್ರ ನಮ್ಮನ್ನು ರಕ್ಷಣೆ ಮಾಡಬಹುದು ಎಂದು ಹೇಳಿದರು.

ಸ್ವಚ್ಛ ಭಾರತ್ ಅಭಿಯಾನದಿಂದ ದೇಶದಲ್ಲಿ ಕೆಲವು ಮಾರಣಾಂತಿಕ ಕಾಯಿಲೆಗಳನ್ನು ತಡೆಗಟ್ಟಲು ಸಾಧ್ಯವಾಗಿದೆ. ಆಯುಷ್ಮಾನ್ ಭಾರತದಿಂದ ಕೋಟ್ಯಂತರ ಜನರು ಲಾಭ ಪಡೆದುಕೊಂಡಿದ್ದಾರೆ. ಹೊಸ ಹೊಸ ಆವಿಷ್ಕಾರಗಳನ್ನು ನಡೆಸಬೇಕಾದ ಅಗತ್ಯವಿದೆ ಎಂದು ಮೋದಿ ಅಭಿಪ್ರಾಯಪಟ್ಟರು.

ರಾಜೀವ್ ಗಾಂ ವಿವಿ ಕುರಿತಂತೆ ಮಾತನಾಡಿದ ಅವರು, ಕಳೆದ 25 ವರ್ಷಗಳಲ್ಲಿ ಈ ವಿಶ್ವವಿದ್ಯಾನಿಲಯ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆದಿದೆ. ಇಂದು ನಾನು ಅತ್ಯಂತ ಹೆಮ್ಮೆಯಿಂದ ಈ ಕಾರ್ಯಕ್ರಮವನ್ನು ಉದ್ಘಾಟಿಸುತ್ತಿದ್ದೇನೆ ಎಂದು ಹೇಳಿದರು.

ಕೊರೊನಾ ಇಲ್ಲದಿದ್ದರೆ ಬೆಂಗಳೂರಿಗೆ ಬರುತ್ತಿದೆ. ಅನಿವಾರ್ಯ ಕಾರಣಗಳಿಂದ ಬರಲು ಸಾದ್ಯವಾಗುತ್ತಿಲ್ಲ. ಇಲ್ಲಿ ಕಲಿತಿರುವ, ಕಲಿಯುತ್ತಿರುವ ವಿದ್ಯಾರ್ಥಿಗಳು ರಾಷ್ಟ್ರದ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ವೈದ್ಯಕೀಯ ಕ್ಷೇತ್ರದಲ್ಲಿ ಇನ್ನಷ್ಟು ಪ್ರಗತಿ ಸಾಸಿ ಭಾರತ ವಿಶ್ವದಲ್ಲಿ ಖ್ಯಾತಿ ಪಡೆಯುವ ಕೆಲಸ ಮಾಡಿ ಎಂದು ವಿದ್ಯಾರ್ಥಿಗಳಿಗೆ ಕರೆ ಕೊಟ್ಟರು.

ಕಾರ್ಯಕ್ರಮದಲ್ಲಿ ರಾಜ್ಯಪಾಲ ವಿ.ಆರ್.ವಾಲಾ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್‍ನಾರಾಯಣ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ವಿವಿ ಉಪಕುಲಪತಿ ಡಾ.ಸಚ್ಚಿದಾನಂದ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Facebook Comments

Sri Raghav

Admin