ಕಳಪೆ ಸಾಧನೆಗೆ ಇವಿಎಂ ಮೇಲೆ ಆರೋಪ : ವಿಪಕ್ಷಗಳಿಗೆ ಮೋದಿ ತಿರುಗೇಟು

ಈ ಸುದ್ದಿಯನ್ನು ಶೇರ್ ಮಾಡಿ

ಲೋಹರ್‍ದಾಗ(ಜಾರ್ಖಂಡ್),ಏ.24-ಲೋಕಸಭೆಯ ಮೂರು ಹಂತಗಳ ಚುನಾವಣೆಯ ಪ್ರತಿಕ್ರಿಯೆಯನ್ನು ಗಮನಿಸಿರುವ ವಿರೋಧ ಪಕ್ಷಗಳಿಗೆ ಸೋಲು ಒಪ್ಪಿಕೊಳ್ಳದೆ ಅನ್ಯಮಾರ್ಗವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಖಡಕ್ ಮಾತುಗಳಲ್ಲಿ ಹೇಳಿದ್ದಾರೆ.

ಪರೀಕ್ಷೆಯಲ್ಲಿ ಅತ್ಯಂತ ಕಡಿಮೆ ಅಂಕಗಳಿಸಿ ಪೋಷಕರ ಮುಂದೆ ಅಳುತ್ತಾ ಕ್ಷಮೆ ಕೋರುವ ಮಕ್ಕಳಂತೆ ಕಳಪೆ ಸಾಧನೆ ಮಾಡಿರುವ ಕಾಂಗ್ರೆಸ್ ವಿದ್ಯುನ್ಮಾನ ಮತಯಂತ್ರ(ಇವಿಎಂ)ಗಳ ಮೇಲೆ ವೃಥಾ ಆರೋಪ ಮಾಡುತ್ತಿದೆ ಎಂದು ಟೀಕಿಸಿದರು.

ಜಾರ್ಖಂಡ್‍ನಲ್ಲಿ 4ನೇ ಹಂತದ ಮಹಾ ಚುನಾವಣೆಗಾಗಿ ಬಿರುಸಿನ ಪ್ರಚಾರ ಕೈಗೊಂಡಿರುವ ಮೋದಿ ಲೋಹರ್‍ದಾಗದಲ್ಲಿ ಚುನಾವಣಾ ರ‍್ಯಾಲಿ ಉದ್ದೇಶಿಸಿ ಮಾತನಾಡಿದರು. ಈ ಚುನಾವಣೆಯಲ್ಲಿ ಸೋಲನ್ನು ಒಪ್ಪಿಕೊಳ್ಳದೆ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳಿಗೆ ಬೇರೆ ಮಾರ್ಗವೇ ಇಲ್ಲ ಎಂದು ಹೇಳಿದರು.

ಪಾಕಿಸ್ತಾನ ಭಾರತಕ್ಕೆ ಬೆದರಿಕೆ ಹಾಕಿದಾಗಲೆಲ್ಲ ಆಗಿನ ಕಾಂಗ್ರೆಸ್ ಸರ್ಕಾರ ಹೆದರಿ ಕಂಗಾಲಾಗಿ ಕಣ್ಣೀರು ಹಾಕುತಿತ್ತು. ಆದರೆ ನಾವು ನೀಡುವ ಒಂದೇ ಒಂದು ಹೇಳಿಕೆಗೆ ಪಾಕಿಸ್ತಾನ ಬೆದರುವಂತಾಗಿದೆ ಎಂದು ಮೋದಿ ತಿಳಿಸಿದರು.

ನಮ್ಮ ಸಶಸ್ತ್ರ ಪಡೆಗಳ ಬಗ್ಗೆ ಕರ್ನಾಟಕದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅತ್ಯಂತ ಹಗುರವಾಗಿ ಮಾತನಾಡಿದ್ದಾರೆ. ಇದು ಅವರ ಸ್ಥಾನಕ್ಕೆ ಶೋಭೆ ತರುವಂತದಲ್ಲ ಎಂದು ಪ್ರಧಾನಿ ಪುನರುಚ್ಚರಿಸಿದರು.

ಇರಾಕ್‍ನಲ್ಲಿ 46 ಭಾರತೀಯ ನರ್ಸ್‍ಗಳು ಸೆರೆಯಲ್ಲಿದ್ದಾಗ ನಮ್ಮ ಮಣ್ಣಿನ ಹೆಣ್ಣುಮಕ್ಕಳನ್ನು ಸುರಕ್ಷಿತವಾಗಿ ಬಿಡುಗಡೆಗೊಳಿಸಿದೆವು ಎಂದು ಹೇಳಿದ ಮೋದಿ, ನಮ್ಮ ನೆಲದ ಜನರ ರಕ್ಷಣೆ ಮತ್ತು ಸುರಕ್ಷತೆಗೆ ಈ ಚೌಕಿದಾರ ಸದಾಸಿದ್ಧ ಎಂದು ಹೇಳಿದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ