ಕಾಂಗ್ರೆಸ್ ವಿರುದ್ಧ ಪ್ರಧಾನಿ ವಾಗ್ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಆ.5- ಪ್ರತಿಪಕ್ಷಗಳ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾರ್ಥ ರಾಜಕಾರಣದಲ್ಲಿ ಮುಳುಗಿದ್ದಾರೆ ಎಂದು ಆರೋಪಿಸಿದ್ದಾರೆ. ನಮ್ಮ ದೇಶದ ಯುವಕರು ದೇಶಕ್ಕಾಗಿ ಹೊಸ ಸಾಧನೆಗಳನ್ನು ಮಾಡುತ್ತಿದ್ದಾರೆ. ಗೆಲ್ಲುವ ಗುರಿ ಹೊಂದಿದ್ದಾರೆ. ಆದರೆ, ದೇಶದ ಕೆಲವರು ರಾಜಕೀಯ ಸ್ವಾರ್ಥಕ್ಕಾಗಿ ಸ್ವಯಂ ಗುರಿಯನ್ನು ಹೊಂದಿದ್ದು, ಅದನ್ನು ತಲುಪಲು ನಾನಾ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ದೇಶಕ್ಕೆ ಏನು ಬೇಕು, ದೇಶ ಏನನ್ನು ಸಾಧಿಸುತ್ತಿದೆ, ಹೇಗೆ ಬದಲಾಗುತ್ತಿದೆ ಎಂಬ ಅರಿವು ಅವರಿಗೆ ಇಲ್ಲ ಎಂದು ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನಾ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದ್ದಾರೆ. ಆ.5 ನಮ್ಮೆಲ್ಲರಿಗೂ ಉತ್ಸಾಹದ ದಿನ. ಒಲಿಂಪಿಕ್ ಮೈದಾನದಲ್ಲಿ ನಮ್ಮ ದೇಶದ ಯುವಕರು ಪದಕ ಗೆಲ್ಲುವ ಮೂಲಕ ದೊಡ್ಡ ಹಾದಿಯನ್ನು ತಲುಪಿದ್ದಾರೆ.

ಭಾರತೀಯರ ನೂರಾರು ವರ್ಷಗಳ ಕನಸಾದ ಭವ್ಯ ರಾಮ ಮಂದಿರ ನಿರ್ಮಾಣದತ್ತ ಹೆಜ್ಜೆ ಇಟ್ಟಿದ್ದೇವೆ. ಕಳೆದ ಎರಡು ವರ್ಷಗಳ ಹಿಂದೆ ಆ.5ರಂದು ಏಕಭಾರತ ಶ್ರೇಷ್ಠ ಭಾರತ ಎಂಬ ಘೋಷಣೆ ಮೊಳಗಿಸಲಾಗಿತ್ತು. ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿಯನ್ನು ತೆಗೆದು ಹಾಕಲಾಯಿತು ಎಂದು ವಿವರಿಸಿದ್ದಾರೆ. ದೇಶದಲ್ಲಿ ದೊಡ್ಡ ಬಿಕ್ಕಟ್ಟುಗಳು ಆವರಿಸಿದಾಗ ಅವು ಎಲ್ಲಾ ವ್ಯವಸ್ಥೆಗಳನ್ನು ಅಲುಗಾಡಿಸಲು ಪ್ರಯತ್ನಿಸಿದವು. ಈ ಹಿಂದೆ ಇಂತಹ ಅನುಭವಗಳನ್ನು ನೋಡಿದ್ದೇವೆ. ಆದರೆ, ಕೊರೊನಾ ಸಂದರ್ಭದಲ್ಲಿ ಪ್ರತಿಯೊಬ್ಬ ಭಾರತೀಯನ ಸಂಪೂರ್ಣ ಬಲದಿಂದ ಹೋರಾಟ ಮಾಡಿ ಗೆದ್ದಿದ್ದೇವೆ ಎಂದಿದ್ದಾರೆ.

ಕೆಲವರಿಗೆ ತಮ್ಮ ಸ್ಥಾನದ ಬಗ್ಗೆ ಮಾತ್ರ ಚಿಂತೆ ಇದೆ. ಹೊಸ ಭಾರತದ ಮುನ್ನಡೆಯನ್ನು ಒಂದು ಕುಟುಂಬದಿಂದ ನಿರ್ಧರಿಸಲು ಸಾಧ್ಯವಾಗುವುದಿಲ್ಲ. ಅದಕ್ಕೆ ಕಠಿಣ ಪರಿಶ್ರಮ ಅಗತ್ಯ. ಭಾರತ ಮುನ್ನಡೆಯುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಸ್ವಾರ್ಥ, ರಾಷ್ಟ್ರವಿರೋಧಿ ರಾಜಕೀಯಕ್ಕೆ ಎಂದೂ ಒತ್ತೆಯಾಳಾಗುವುದಿಲ್ಲ. ಹಲವಾರು ಕಷ್ಟಗಳ ನಡುವೆಯೂ ಭಾರತ ಎಲ್ಲಾ ರಂಗಗಳಲ್ಲೂ ವೇಗವಾಗಿ ಮುನ್ನಡೆಯುತ್ತಿದೆ ಎಂದು ಮೋದಿ ಹೇಳಿದ್ದಾರೆ.

Facebook Comments