ಪ್ರಧಾನಿ ಮೋದಿ ಅಮೇರಿಕ ಪ್ರವಾಸ ಆರಂಭ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ: ಸೆ 22, ಮೂರು ದಿನಗಳ ಅಮೆರಿಕ ಪ್ರವಾಸಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ದೆಹಲಿ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ಹೊರಟಿದ್ದಾರೆ. ಇಂದು ರಾತ್ರಿ ಅವರು ಅಮೆರಿಕ ತಲುಪಲಿದ್ದಾರೆ. ಅಮೆರಿಕಾ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಬಳಿಕ ಅಮೆರಿಕಾದ ಅಧ್ಯಕ್ಷ ಜೋ ಬೈಡೆನ್ ಹಾಗೂ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಜೊತೆಗೆ ಮಾತುಕತೆ ನಡೆಸಲಿದ್ದಾರೆ. ಕ್ವಾಡ್ ರಾಷ್ಟ್ರಗಳ ನಾಯಕರ ಶೃಂಗ ಸಭೆಯಲ್ಲಿ ಕೂಡ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ.

ಭಾರತದಲ್ಲಿ ಕೊವಿಡ್ ಅಟ್ಟಹಾಸ ಶುರುವಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ತೆರಳುತ್ತಿರುವ ಮೊದಲ ಪ್ರಮುಖ ವಿದೇಶಿ ಪ್ರವಾಸ ಇದಾಗಿದೆ. ಇನ್ನು, ಅಮೆರಿಕಕ್ಕೆ ತೆರಳುವ ಮುನ್ನ ಟ್ವೀಟ್ ಮಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಜೋ ಬೈಡನ್ ಅವರ ಆಹ್ವಾನದ ಮೇರೆಗೆ ನಾನು ಅಮೆರಿಕಕ್ಕೆ ತೆರಳುತ್ತಿದ್ದೇನೆ. ನಮ್ಮ ಸಮಾನ ಆಸಕ್ತಿ, ಆಲೋಚನೆಗಳನ್ನು ಈ ವೇಳೆ ವಿನಿಮಯ ಮಾಡಿಕೊಳ್ಳಲಿದ್ದೇವೆ. ಹಾಗೇ, ಜಾಗತಿಕ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ಕಮಲಾ ಹ್ಯಾರಿಸ್ ಅವರನ್ನು ಭೇಟಿಯಾಗಲು ನಾನು ಕಾತುರನಾಗಿದ್ದೇನೆ ಎಂದು ಹೇಳಿದ್ದಾರೆ.

ನಾಳೆ ಬೆಳಿಗ್ಗೆ ನರೇಂದ್ರ ಮೋದಿ ಅಮೆರಿಕದ ಕಂಪನಿಗಳ ಸಿಇಓ ಜೊತೆಗೆ ಸಭೆ ನಡೆಸಲ್ಲಿದು, ಪ್ರಮುಖ ಕಂಪನಿಗಳ ಸಿಇಓ ಜೊತೆಗೆ ಸಭೆ ನಡೆಸಿ ಭಾರತದಲ್ಲಿ ಬಂಡವಾಳ ಹೂಡಿಕೆಗೆ ಇರುವ ಅವಕಾಶಗಳ ಬಗ್ಗೆ ಮನವರಿಕೆ ಮಾಡಿಕೊಟ್ಟು ಆಹ್ವಾನ ನೀಡುವರು.

ಬಳಿಕ ಅಮೆರಿಕಾದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ರನ್ನು ಭೇಟಿಯಾಗಿ ಮಾತುಕತೆ ನಡೆಸುವರು. ಕಮಲಾ ಹ್ಯಾರಿಸ್, ಭಾರತ ಮೂಲದವರು. ಹೀಗಾಗಿ ತಮ್ಮ ಆಡಳಿತಾವಧಿಯಲ್ಲಿ ಭಾರತಕ್ಕೆ ಅನುಕೂಲವಾಗುವ ನೀತಿ, ನಿಯಮಗಳನ್ನು ಜಾರಿಗೆ ತರಬೇಕೆಂದು ಕಮಲಾ ಹ್ಯಾರಿಸ್ ಜೊತೆಗೆ ನರೇಂದ್ರ ಮೋದಿ ಚರ್ಚೆ ನಡೆಸುವರು

ಸೆಪ್ಟೆಂಬರ್ 24ರಂದು ಪ್ರಧಾನಿ ನರೇಂದ್ರ ಮೋದಿ ಅಮೆರಿಕದ ಶ್ವೇತ ಭವನಕ್ಕೆ ಭೇಟಿ ನೀಡುವರು. ಶ್ವೇತ ಭವನದಲ್ಲಿ ನಡೆಯುವ ಕ್ವಾಡ್ ರಾಷ್ಟ್ರಗಳ ನಾಯಕರ ಮೊದಲ ಮುಖಾಮುಖಿ ಸಭೆಯಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳುವರು. ಈ ಸಭೆಯಲ್ಲೇ ಕ್ವಾಡ್ ಸದಸ್ಯ ರಾಷ್ಟ್ರವಾಗಿರುವ ಅಮೆರಿಕಾದ ಅಧ್ಯಕ್ಷ ಜೋ ಬೈಡೆನ್, ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮ್ಯಾರಿಸನ್, ಜಪಾನ್ ಪ್ರಧಾನಿ ಯೋಗಶಿಧೆ ಸುಗಾ ಪಾಲ್ಗೊಳ್ಳುವರು. ಏಷ್ಯಾ ಹಾಗೂ ಇಂಡೋ-ಫೆಸಿಫಿಕ್​ನಲ್ಲಿ ಚೀನಾದ ಪ್ರಾಬಲ್ಯ ತಡೆಯುವ ಉದ್ದೇಶದಿಂದ ನಾಲ್ಕು ರಾಷ್ಟ್ರಗಳು ಸೇರಿ ಕ್ವಾಡ್ ಒಕ್ಕೂಟ ರಚಿಸಿಕೊಂಡಿವೆ.

ಇದರಲ್ಲಿ ಭದ್ರತೆ ಮಾತ್ರವಲ್ಲದೆ, ಉಳಿದ ವಿಷಯಗಳ ಬಗ್ಗೆ ಪರಸ್ಪರ ಸಹಕಾರದ ಬಗ್ಗೆಯೂ ಚರ್ಚೆ ನಡೆಯಲಿದೆ. ಕ್ವಾಡ್ ರಾಷ್ಟ್ರಗಳ ಸಭೆಯ ಬಳಿಕ ಪ್ರಧಾನಿ ಮೋದಿ, ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಜೊತೆಗೆ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಯ ಬಗ್ಗೆ ಚರ್ಚೆ ನಡೆಸುವರು. ಜೋ ಬೈಡೆನ್ ಅಮೆರಿಕಾ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಮುಖಾಮುಖಿಯಾಗಿ ಮೋದಿ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಯ ಬಗ್ಗೆ ಮಾತುಕತೆ ನಡೆಸಲಿದ್ದಾರೆ. ಸೆಪ್ಟೆಂಬರ್ 24ರ ರಾತ್ರಿಯೇ ಶ್ವೇತ ಭವನದಲ್ಲಿ ಕ್ವಾಡ್ ರಾಷ್ಟ್ರಗಳ ನಾಯಕರಿಗೆ ಜೋ ಬೈಡೆನ್ ಔತಣ ಕೂಟ ಏರ್ಪಡಿಸಿದ್ದಾರೆ.

ಸೆಪ್ಟಂಬರ್ 25ರಂದು ಭಾರತೀಯ ಕಾಲಮಾನ ಸಂಜೆ 6.30ಕ್ಕೆ ಪ್ರಧಾನಿ ನರೇಂದ್ರ ಮೋದಿ, ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಉದ್ದೇಶಿಸಿ ಮಾತನಾಡುವರು. ಸೆೆಪ್ಟೆಂಬರ್ 25ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೋದಿಯೇ ಮೊದಲ ಭಾಷಣಕಾರರು. 2019ರಲ್ಲಿ ಮೋದಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಗೆ ಖುದ್ದಾಗಿ ಹೋಗಿ ಭಾಗವಹಿಸಿದ್ದರು. 2020ರಲ್ಲಿ ಕೊರೊನಾದ ಕಾರಣದಿಂದ ವರ್ಚುವಲ್ ಆಗಿ ನಡೆದ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಭಾರತದಿಂದಲೇ ಮಾತನಾಡಿದ್ದರು. ಈಗ ಖುದ್ದಾಗಿ ಹೋಗಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡುವರು.

Facebook Comments

Sri Raghav

Admin