7 ತಿಂಗಳ ಬಳಿಕ ತವರಿಗೆ ಮೋದಿ ಭೇಟಿ, ಇಲ್ಲಿದೆ ಅವರ ಕಾರ್ಯಕ್ರಮಗಳ ಪಟ್ಟಿ

ಈ ಸುದ್ದಿಯನ್ನು ಶೇರ್ ಮಾಡಿ

ಅಹಮದಾಬಾದ್, ಅ.30- ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಎರಡು ದಿನಗಳ ಗುಜರಾತ್ ಪ್ರವಾಸ ಇಂದಿನಿಂದ ಆರಂಭವಾಗಿದ್ದು, ಪ್ರವಾಸೋದ್ಯಮ ಮತ್ತು ಸಾಗರ ವಿಮಾನ ಆರಂಭ ಸೇರಿದಂತೆ ಅನೇಕ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ದೆಹಲಿಯಿಂದ ಇಂದು ಬೆಳಗ್ಗೆ ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ಅವರನ್ನ ಗುಜರಾತ್ ರಾಜ್ಯಪಾಲ ಆಚಾರ್ಯ ದೇವವ್ರತ ಮತ್ತು ಮುಖ್ಯಮಂತ್ರಿ ವಿಜಯರೂಪಾಣಿ ಸ್ವಾಗತಿಸಿದರು.

ನಂತರ ಪ್ರಧಾನಿಯವರು ಅಹಮದಾಬಾದ್‍ನಿಂದ ಗಾಂಧಿನಗರಕ್ಕೆ ತೆರಳಿ ನಿನ್ನೆ ನಿಧನರಾದ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ಕೇಶುಭಾಯಿ ಪಟೇಲ್ ಅವರ ಕುಟುಂಬ ವರ್ಗದವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ನಂತರ ಅವರು ಇತ್ತೀಚಿಗೆ ನಿಧನರಾದ ಗುಜರಾತ್‍ನ ಖ್ಯಾತ ನಟ ನರೇಶ್ ಖನೋಡಿಯಾ ಮತ್ತು ಅವರ ಸಹೋದರ- ಸಂಗೀತ ನಿರ್ದೇಶಕ ಮಹೇಶ್ ಖನೋಡಿಯಾ ಆವರ ಕುಟುಂಬಗಳನ್ನು ಭೇಟಿ ಮಾಡಿದರು.

ನರೇಶ್ ಮತ್ತು ಮಹೇಶ್ ಬಿಜೆಪಿ ನಾಯಕರಾಗಿದ್ದು, ಶಾಸಕ ಮತ್ತು ಸಂಸದರಾಗಿ ಸೇವೆ ಸಲ್ಲಿಸಿದ್ದರು. ತರುವಾಯ ಪ್ರಧಾನಿಯವರು ಗಾಂಧಿನಗರ ಹೊರವಲಯದಲ್ಲಿ ವಾಸವಾಗಿರುವ ತಮ್ಮ ತಾಯಿ 90 ವರ್ಷದ ಹೀರಾಬ ಅವರನ್ನು ಭೇಟಿ ಮಾಡಿ ಕೆಲವೊತ್ತು ಅಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ತಮ್ಮ ಸಹೋದರ ಪಂಕಜ್‍ಮೋದಿ ಅವರನ್ನು ಸಹ ಅವರು ಭೇಟಿ ಮಾಡುವರು. ಬಳಿಕ ಅಲ್ಲಿಂದ ನರ್ಮದಾ ಜಿಲ್ಲೆಯ ಖೇವಾಡಿಯಾಗೆ ತೆರಳಿ ಸರ್ದಾರ್ ವಲಭಬಾಯಿ ಪಟೇಲ್ ಅವರ 145ನೇ ಜನ್ಮ ಜಯಂತಿ ಪ್ರಯುಕ್ತ ಏಕತಾ ದಿವಸದಂದು ಪ್ರವಾಸೋದ್ಯಮ ಕಾರ್ಯಗಳಿಗೆ ಚಾಲನೆ ನೀಡುವರು.

ನಾಳೆ ಬೆಳಗ್ಗೆ ಪ್ರಧಾನಿಯವರು ಖೇವಾಡಿಯ ಮತ್ತು ಅಹಮದಾಬಾದ್ ನಡುವೆ ಸಂಪರ್ಕ ಕಲ್ಪಿಸುವ ಭಾರತದ ಪ್ರಥಮ ಸಾಗರ ವಿಮಾನ(ಸೀಪ್ಲೇನ್)ಕ್ಕೆ ಚಾಲನೆ ನೀಡುವರು. ಕೊರೊನಾ ಹಾವಳಿಯ ನಂತರ 7 ತಿಂಗಳ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ತವರು ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಮೋದಿ ಅವರ ಭೇಟಿ ಹಿನ್ನೆಲೆಯಲ್ಲಿ ವ್ಯಾಪಕ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ.

Facebook Comments