‘ಒಗ್ಗೂಡಿ ಹೋರಾಡಿ, ಕೊರೋನಾ ಮಟ್ಟ ಹಾಕೋಣ’ : ವಿಡಿಯೋ ಕಾನ್ಫರೆನ್ಸ್ ಮೂಲಕ ಮೋದಿ ಸಂದೇಶ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮೇ 7-ನಾವೆಲ್ಲರೂ ಒಗ್ಗೂಡಿ ಮಾರಕ ಕೊರೊನಾ ವೈರಸ್ ವಿರುದ್ಧ ಹೋರಾಡಿ ಹೆಮ್ಮಾರಿಯನ್ನು ಮಟ್ಟ ಹಾಕೋಣ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಪುನರುಚ್ಚರಿಸಿದ್ದಾರೆ.

ಇಡೀ ವಿಶ್ವದ ಹಿತಾಸಕ್ತಿಗಾಗಿ ಭಾರತ ಕಾರ್ಯನಿರ್ವಹಿಸುತ್ತಿದ್ದು, ಅದನ್ನು ಮುಂದುವರಿಸಲಿದೆ. ಜನಸೇವೆ ಮಾಡಿ ಸಾಕಾಯಿತು, ದಣಿವಾಗಿದೆ ಎಂದು ಕುಳಿತುಕೊಳ್ಳುವ ಸಮಯ ಇದಲ್ಲ. ನಾವು ಒಗ್ಗಟ್ಟಾಗಿ ಹೋರಾಡಿ, ಕೊರೊನಾ ವೈರಸ್‍ಅನ್ನು ಮೂಲೋತ್ಪಾಟನೆ ಮಾಡೋಣ ಎಂದು ಅವರ ಭಾರತದ ಪ್ರಜೆಗಳಿಗೆ ಕರೆ ನೀಡಿದ್ದಾರೆ.

ಬುದ್ಧ ಪೌರ್ಣಿಮೆ ನಿಮಿತ್ತ ದೇಶದ ಜನತೆಗೆ ಶುಭ ಕೋರಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದರು. ಇಂದಿನ ಸಂಕಷ್ಟ ಪರಿಸ್ಥಿತಿಯಲ್ಲಿ ಭಾರತ ನಿಸ್ವಾರ್ಥವಾಗಿ ವಿಶ್ವದ ಜತೆ ಹೋರಾಟ ನಡೆಸುತ್ತಿದೆ. ಇಡೀ ಪ್ರಪಂಚ ತೀವ್ರ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿರುವ ಸಂದರ್ಭದಲ್ಲಿ ಭಗವಾನ್ ಬುದ್ದನ ತತ್ತ್ವಾದರ್ಶನಗಳು, ದಿವ್ಯ ಸಂದೇಶಗಳು ಮತ್ತು ಉದಾತ್ತ ಬೋಧನೆಗಳು ಪ್ರಸ್ತುತವಾಗಿವೆ. ಇದನ್ನು ಎಲ್ಲರೂ ಅನುಸರಿಸಬೇಕು ಎಂದು ಸಲಹೆ ಮಾಡಿದರು.

ದೇಶದ ಮತ್ತು ಪ್ರಜೆಗಳ ಹಿತರಕ್ಷಣೆಗೆ ನಿಸ್ವಾರ್ಥ ಸೇವೆಗೆ ತಾವು ಸದಾ ಸಿದ್ದ ಎಂದು ಘೋಷಿಸಿದ ಮೋದಿ, ಕೊರೊನಾ ವಿರುದ್ಧ ಹೋರಾಡುತ್ತಿರುವವರೆಲ್ಲೂ ಸ್ತುತ್ಯಾರ್ಹರು ಎಂದು ಬಣ್ಣಿಸಿದರು.

ಭಾರತದ ಅಭಿವೃದ್ಧಿಯೂ ಯಾವಾಗಲೂ ಜಾಗತಿಕ ಪ್ರಗತಿಗೆ ನೆರವಾಗುತ್ತದೆ. ವಿಶ್ವದ ಹಿತಾಸಕ್ತಿ ರಕ್ಷಣೆ ವಿಷಯದಲ್ಲಿ ಭಾರತ ಸದಾ ಒಂದು ಹೆಜ್ಜೆ ಮುಂದಿದೆ ಎಂದು ಅವರು ಹೆಮ್ಮೆಯಿಂದ ಹೇಳಿಕೊಂಡರು.

ಭಗವಾನ್ ಬುದ್ಧ ಬಾರತದ ಸಾಕ್ಷಾತ್ಕಾರದ ಸಂಕೇತ. ಸ್ವಯಂ ಸಾಕ್ಷಾತ್ಕಾರದ ಮೂಲಕ ಭಾರತವು ಮನುಕುಲ ಮತ್ತು ವಿಶ್ವದ ಹಿತಾಸಕ್ತಿಗಾಗಿ ನಿಸ್ವಾರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದು, ಅದನ್ನು ಮುಂದುವರಿಸಲಿದೆ ಎಂದು ಪ್ರಧಾನಿ ಹೇಳಿದರು.

ನಮ್ಮ ದೇಶವು ಇಂದು ಯಾವುದೇ ಜಾತಿ, ಧರ್ಮ, ಮತ, ಪಂಥ, ಭಾಷೆ ಅಥವಾ ರಾಷ್ಟ್ರ ಎಂದು ತಾರತಮ್ಯ ಮಾಡದೆ ಎಲ್ಲರ ಸಹಕಾರ ಮತ್ತು ಸಹಾಯಕ್ಕೆ ಕೈ ಚಾಚಿದೆ ಎಂದು ಅವರು ಹೇಳಿದರು.

ಈ ಸಂಕಷ್ಟ ಸಮಯದಲ್ಲಿ ಕೊರೊನಾ ಹೋರಾಟಗಾರರು ಜನರ ಆರೋಗ್ಯ ರಕ್ಷಣೆ ಮತ್ತು ಸುರಕ್ಷತೆ-ಭದ್ರತೆಗಾಗಿ ಶ್ರಮಿಸುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡಾಲು, ಸೋಂಕಿತ ವ್ಯಕ್ತಿಗಳನ್ನು ಗುಣಪಡಿಸಲು, ನಮ್ಮ ಪರಿಸರದ ಸ್ವಚ್ಛತೆ ಕಾಪಾಡಲು ಇವರೆಲ್ಲರೂ ತಮ್ಮ ಸುಖವನ್ನು ತ್ಯಾಗ ಮಾಡಿ ನಿಸ್ವಾರ್ಥವಾಗಿ ದಿನದ 24 ಗಂಟೆಗಳ ಕಾಲ ಶ್ರಮಿಸುತ್ತಿದ್ದಾರೆ. ಇವರೆಲ್ಲರೂ ಈ ಸಮಯದಲ್ಲಿ ಸ್ತುತ್ಯಾರ್ಹರು ಎಂದು ಮೋದಿ ವ್ಯಾಖ್ಯಾನಿಸಿದರು.

Facebook Comments

Sri Raghav

Admin