ಉಗ್ರರು ದಾಳಿ ಮಾಡಿದಾಗ ಕಾಂಗ್ರೆಸ್‍ನವರು ಅತ್ತರು, ನಾವು ನುಗ್ಗಿ ಹೊಡೆದು ಬಂದೆವು : ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

ಪಿಂಪಲ್‍ಗಾಂವ್(ಮಹಾರಾಷ್ಟ್ರ), ಏ.22- ಉಗ್ರರು ದಾಳಿ ಮಾಡಿ ಜನರನ್ನು ಬಲಿ ತೆಗೆದುಕೊಂಡಾಗ ಆಗ ಆಡಳಿತದಲ್ಲಿ ಇದ್ದ ಕಾಂಗ್ರೆಸ್‍ನವರು ಗಳಗಳನೇ ಅತ್ತರು, ಆದರೆ ನಾವು ಉಗ್ರರ ನೆಲೆಗೆ ನುಗ್ಗಿ ಭಯೋತ್ಪಾದಕರನ್ನು ಸದೆಬಡಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಗುಡುಗಿದ್ದಾರೆ.

ಭಯೋತ್ಪಾದಕರನ್ನು ಶಿಕ್ಷಿಸುವ ಕಾಂಗ್ರೆಸ್‍ನ ನೀತಿ ಸರಿ ಇರಲಿಲ್ಲ. ನಾವು ಅದನ್ನು ಪರಿಪೂರ್ಣವಾಗಿ ಬದಲಿಸಿದ್ದೇವೆ ಉಗ್ರರಿಗೆ ಅವರ ಭಾಷೆಯಲ್ಲಿ ತಕ್ಕ ಉತ್ತರ ನೀಡಿದ್ದೇವೆ ಎಂದು ಮೋದಿ ಹೇಳಿದರು.

ನಾಲ್ಕನೇ ಹಂತದ ಲೋಕಸಭಾ ಚುನಾವಣೆಗಾಗಿ ಮಹಾರಾಷ್ಟ್ರದ ಪಿಂಪಲ್ ಗಾಂವ್‍ನಲ್ಲಿ ಬೃಹತ್ ಚುನಾವಣಾ ಪ್ರಚಾರ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಮೋದಿ ನಾವು ಕೈಗೊಂಡ ದಿಟ್ಟ ಕ್ರಮಗಳಿಂದಾಗಿ ಉಗ್ರರು ಈಗ ಬಾಲ ಮುದುರಿಕೊಳ್ಳುವಂತಾಗಿದೆ ಎಂದರು.

ಎಂದಿನಂತೆ ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳ ವಿರುದ್ದ ವಾಗ್ದಾಳಿ ಮುಂದುವರೆಸಿದ ಮೋದಿ ಎರಡು ಹಂತಗಳ ಚುನಾವಣೆ ನಂತರ ಬಿಜೆಪಿ ಪ್ರಾಬಲ್ಯದ ಬಗ್ಗೆ ನಮ್ಮ ವಿರೋಧಿಗಳು ಕಂಗಾಲಾಗಿದ್ದಾರೆ ಎಂದರು.

ವಂಶಾಡಳಿತ, ಕುಟುಂಬ ರಾಜಕಾರಣ ಮಾಡುತ್ತಿರುವ ಕೆಲವು ಮಂದಿ ರಾಷ್ಟ್ರೀಯತೆ ಬಗ್ಗೆ ಮಾತನಾಡಿ ಈಗ ಕರೆಂಟ್ ಹೊಡೆದವರಂತೆ ತೊಂದರೆಗೆ ಸಿಲುಕಿದ್ದಾರೆಂದು ಮೋದಿ ಲೇವಡಿ ಮಾಡಿದರು.

ಯುಪಿಎ ಆಡಳಿತ ಇದ್ದಾಗ ಎಚ್‍ಎಎಲ್ ಒಂದು ರೀತಿ ರೋಗಗ್ರಸ್ತ ಕಾರ್ಖಾನೆಯಾಗಿತ್ತು. ನಾವು ಮೇಕ್ ಇನ್ ಇಂಡಿಯಾ ಮೂಲಕ ಆ ಸಂಸ್ಥೆಯನ್ನು ಉನ್ನತೀಕರಣಗೊಳಿಸಿದ್ದೇವೆ ಎಂದು ಹೇಳಿದರು.

ಕಾಂಗ್ರೆಸ್ ಆಡಳಿತದಲ್ಲಿ ಜಾರಿಗೆ ಬರುತ್ತಿದ್ದ ಯೋಜನೆಗಳ ಫಲಾನುಭವ ಪರಿಪೂರ್ಣವಾಗಿ ಜನರಿಗೆ ಲಭಿಸುತ್ತಿರಲಿಲ್ಲ. 1 ರೂಪಾಯಿನಲ್ಲಿ 85ಪೈಸೆ ಮಧ್ಯವರ್ತಿಗಳ ಪಾಲಾಗುತಿತ್ತು. ಜನರಿಗೆ ಕೇವಲ 15ಪೈಸೆ ಮಾತ್ರ ಲಭಿಸುತ್ತಿತ್ತು. ಆದರೆ ನಾವು ದಲ್ಲಾಳಿಗಳನ್ನು ನಿಯಂತ್ರಿಸಿದ್ದೇವೆ. ತತ್ಪರಿಣಾಮ ಫಲಾನುಭವಿಗಳಿಗೆ ಶ. 100ರಷ್ಟು ಸೌಲಭ್ಯ, ಸವಲತ್ತುಗಳು ಲಭಿಸುತ್ತಿವೆ ಎಂದರು.

ದೇಶದಲ್ಲಿ ಈರುಳ್ಳಿ ಅಭಾವ ಮತ್ತು ದರ ಏರಿಕೆ ತಡೆಗಟ್ಟಲು ಕ್ರಮ ಕೈಗೊಳ್ಳಲಾಗಿದೆ. ದಸ್ತಾನು ಹೆಚ್ಚಿಸಿ ಕೊರತೆ ನೀಗಿಸಲಾಗುವುದು. ಸಮರ್ಪಕ ಸಾಗಣೆ ಮೂಲಕ ಬೆಲೆ ಏರಿಕೆಯನ್ನು ಕಡಿಮೆ ಮಾಡಲಾಗುವುದು ಎಂದು ಪ್ರಧಾನಿ ಮೋದಿ ಹೇಳಿದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ