ಮೋದಿ@69 : ಗಣ್ಯರಿಂದ ಶುಭಾಶಯ, ತಾಯಿ ಆಶೀರ್ವಾದ ಪಡೆದ ಪ್ರಧಾನಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಸೆ.17- ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಇಂದು 69ನೆ ಜನ್ಮ ದಿನದ ಸಂಭ್ರಮ. ಅವರ ಹುಟ್ಟುಹಬ್ಬವನ್ನು ದೇಶಾದ್ಯಂತ ಬಿಜೆಪಿ ಕಾರ್ಯಕರ್ತರು ಸಡಗರದಿಂದ ಆಚರಿಸುತ್ತಿದ್ದು, ವಿವಿಧ ಕಾರ್ಯಕ್ರಮಗಳು ನಡೆಯುತ್ತಿವೆ.

ಮೋದಿಯವರ ಜನ್ಮ ದಿನದ ಪ್ರಯುಕ್ತ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು , ಬಿಜೆಪಿ ಅಧ್ಯಕ್ಷರೂ ಆದ ಕೇಂದ್ರ ಸಚಿವ ಅಮಿತ್ ಶಾ, ಸಂಪುಟ ಸಹೋದ್ಯೋಗಿಗಳು , ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಬಿಜೆಪಿ ಮುಖಂಡರು ಸೇರಿದಂತೆ ಅನೇಕ ಗಣ್ಯಾತಿಗಣ್ಯರು ಶುಭ ಕೋರಿದ್ದಾರೆ.

69ನೇ ವಸಂತಕ್ಕೆ ಕಾಲಿಟ್ಟಿರುವ ನರೇಂದ್ರ ಮೋದಿಯವರು ಇಂದು ಗುಜರಾತ್‍ನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.ನಿನ್ನೆ ರಾತ್ರಿ ಆಗಮಿಸಿದ ಮೋದಿ ಇಂದು ಬೆಳಗ್ಗೆ ಕೆವೇಡಿಯಾಗೆ ತೆರಳಿ ನರ್ಮದಾ ನದಿ ತಟದಲ್ಲಿ ನಿರ್ಮಾಣಗೊಂಡಿರುವ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರ ವಿಶ್ವದ ಅತಿ ಎತ್ತರದ ಪ್ರತಿಮೆಗೆ ನಮನ ಸಲ್ಲಿಸಿದರು.ತಾವು ಅಲ್ಲಿಗೆ ಭೇಟಿ ನೀಡಿದ ವೀಡಿಯೋವನ್ನು ಪ್ರಧಾನಿ ಸಾಮಾಜಿಕ ಜಾಲ ತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.

ಬಳಿಕ ಅವರು ತಾಯಿ ಹೀರಾ ಬೇನ್ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದು ಕೆಲ ಕಾಲ ಮಾತೆಯ ಸಾಮಿಪ್ಯದಲ್ಲಿದ್ದರು. ದೇಶಕ್ಕೆ ಪ್ರಧಾನಿಯಾದರೂ ತಾಯಿಗೆ ಮಗ. ಹೀರಾ ಬೇನ್ ಅವರು ಮಗನಿಗೆ ಆರತಿ ಬೆಳಗಿ ಸಿಹಿ ತಿನಿಸಿದರು.ಬಳಿಕ ಸರ್ದಾರ್ ಸರೋವರ್ ಅಣೆಕಟ್ಟಿಗೆ ಭೇಟಿ ನೀಡಿ ತುಂಬಿ ತುಳುಕುತ್ತಿರುವ ನರ್ಮದಾ ನದಿಗೆ ವಿಶೇಷ ಪೂಜೆ ಸಮರ್ಪಿಸಿದರು.

ಸದಾರ್ರ ಸರೋವರ್ ಡ್ಯಾಂ ಮುಂಗಾರಿನಿಂದ ಮೈದುಂಬಿ ಹರಿಯುತ್ತಿದೆ. ಪ್ರಧಾನಿ ಮೋದಿ ಭೇಟಿ ಹಿನ್ನೆಲೆಯಲ್ಲಿ ಇದೀಗ ಡ್ಯಾಂ ಸುತ್ತಮುತ್ತಲೂ ವಿದ್ಯುತ್ ದೀಪಾಲಂಕಾರವನ್ನು ಮಾಡಲಾಗಿದೆ.
ಮೋದಿ ಹುಟ್ಟುಹಬ್ಬ ಹಿನ್ನಲೆಯಲ್ಲಿ ನರೇಂದ್ರ ಮೋದಿ ಆ್ಯಪ್‍ನ್ನು ಹೊಸ ಆವೃತ್ತಿಯಲ್ಲಿ ಬಿಡುಗಡೆ ಮಾಡಲಾಗಿದೆ.

2019ರ ಚುನಾವಣೆ ವೇಳೆ ಬಿಡುಗಡೆಯಾಗಿದ್ದ ಈ ಆ್ಯಪ್‍ನಲ್ಲಿ ಹಲವು ಮಾರ್ಪಾಡು ಮಾಡಲಾಗಿದೆ. ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ವಿಶ್ ಮಾಡಲು ಅವಕಾಶ ನೀಡುವ ಫೀಚರ್‍ಗಳನ್ನು ಸೇರ್ಪಡೆಗೊಳಿಸಲಾಗಿದೆ. ಸರ್ಕಾರದ ಅಭಿವೃದ್ಧಿ ಕೆಲಸಗಳನ್ನೂ ಈ ಆ್ಯಪ್ ನಲ್ಲಿ ಅಪ್ ಟು ಡೇಟ್ ಮಾಡಲಾಗಿದೆ.

ಈ ನಡುವೆ ಮೋದಿ ಹುಟ್ಟುಹಬ್ಬ ಹಿನ್ನಲೆಯಲ್ಲಿ ಮಂಗಳವಾರ ಬೆಳಗ್ಗಿನಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಹರಿವು ಜೋರಾಗಿಯೇ ಇದ್ದು, ಟ್ವಿಟರ್‍ನಲ್ಲಿ ಟ್ರೆಂಜ್ ತುಂಬಾ ನರೇಂದ್ರ ಮೋದಿಯವರೇ ಕಾಣುತ್ತಿದ್ದಾರೆ.  ಕಳೆದ ವರ್ಷ ಮೋದಿಯವರು ತಮ್ಮ ಲೋಕಸಭಾ ಕ್ಷೇತ್ರ ವಾರಣಾಸಿಯಲ್ಲಿ ಶಾಲಾ ಮಕ್ಕಳೊಂದಿಗೆ ಬೆರೆತು ಜನ್ಮ ದಿನ ಸಂಭ್ರಮ ಆಚರಿಸಿಕೊಂಡರು.

Facebook Comments

Sri Raghav

Admin