ಮತ್ತೆ ಲಾಕ್‍ಡೌನ್ ಮಾಡಲು ಸಿದ್ಧತೆ ನಡೆಸಿದ್ದಾರಾ ಪ್ರಧಾನಿ ಮೋದಿ..?!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಜೂ.13- ದೇಶದಲ್ಲಿ ಕಿಲ್ಲರ್ ಕೊರೊನಾ ದಾಳಿ ಮತ್ತಷ್ಟು ತೀವ್ರವಾಗಿದ್ದು ಈವರೆಗೆ ಸುಮಾರು 9 ಸಾವಿರ ಮಂದಿಯನ್ನು ಬಲಿ ತೆಗೆದುಕೊಂಡು 3.09 ಲಕ್ಷ ಜನರು ರೋಗಗ್ರಸ್ಥರಾಗಿದ್ದಾರೆ.

ದಿನೇ ದಿನೇ ಸೋಂಕು ಮತ್ತು ಮರಣ ಪ್ರಮಾಣ ಆತಂಕಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೆಲವು ಗಂಭೀರ ಮಾರ್ಗೋಪಾಯಗಳನ್ನು ಅನುಸರಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ.

ಜೂ.16 ಮತ್ತು 17ರಂದು ಪ್ರಧಾನಿ ಎರಡು ಹಂತಗಳಲ್ಲಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿ ಒಟ್ಟಾರೆ ಪರಿಸ್ಥಿತಿಯನ್ನು ಅವಲೋಕಿಸಲಿದ್ದಾರೆ.

ಇದಕ್ಕೂ ಮುನ್ನ ಸೋಮವಾರ(ಜೂ.16)ದಂದು ಮತ್ತೊಂದು ಮಹತ್ವದ ಸಭೆಯನ್ನು ಪ್ರಧಾನಿ ಆಯೋಜಿಸಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ಕಠಿಣ ಲಾಕ್‍ಡೌನ್ ಮತ್ತೆ ಜಾರಿಗೊಳಿಸಬೇಕೆ ಬೇಡವೇ ಎಂಬ ಬಗ್ಗೆ ಚರ್ಚಿಸಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಆಯಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಂವಾದದ ವೇಳೆ ಪ್ರಧಾನಿ ವಾಸ್ತವ ಪರಿಸ್ಥಿತಿ, ಆಸ್ಪತ್ರೆಗಳಲ್ಲಿ ಲಭಿಸುತ್ತಿರುವ ಚಿಕಿತ್ಸೆ, ವೈದ್ಯಕೀಯ ಸಿಬ್ಬಂದಿಯ ಸಂಖ್ಯೆ, ಮತ್ತು ಇತರ ಸ್ಥಳಗಳಲ್ಲಿ ಚಿಕಿತ್ಸಾ ಸೌಲಭ್ಯಗಳನ್ನು ವಿಸ್ತರಿಸುವ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ. ಜೊತೆಗೆ 6ನೇ ಬಾರಿ ಲಾಕ್‍ಡೌನ್ ವಿಸ್ತರಿಸುವ ಸಾಧ್ಯತೆ ಬಗ್ಗೆಯೂ ಗಹನ ಚರ್ಚೆ ನಡೆಸಲಿದ್ದಾರೆ.

ಕಳೆದವಾರವಷ್ಟೇ ದೇಶ ಸಹಜಸ್ಥಿತಿಯತ್ತ ಮರಳಿರುವಾಗಲೇ ಕೊರೊನಾ ಆಘಾತಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿದೆ. ಈಗಷ್ಟೇ ಆರ್ಥಿಕ ಚಟುವಟಿಕೆ ಕುದುರುತ್ತಿರುವ ಸಂದರ್ಭದಲ್ಲೇ ಸೋಂಕು ಮತ್ತು ಸಾವಿನ ಸಂಖ್ಯೆ ಹೆಚ್ಚಾಗಿರುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ದೊಡ್ಡ ತಲೆನೋವಾಗಿ ಪರಿಣಿಮಿಸಿದೆ.

ಈ ಸನ್ನಿವೇಶದಲ್ಲಿ ಲಾಕ್‍ಡೌನ್‍ನ್ನು ವಿಸ್ತರಿಸುವ ಅಥವಾ ಮುಂದುವರೆಸದೆ ಇರುವ ಜಿಜ್ಞಾಸೆಯಲ್ಲಿರುವ ಸರ್ಕಾರಗಳು ಒಂದು ರೀತಿಯ ಅಡ್ಡ ಕತ್ತರಿಯಲ್ಲಿ ಸಿಲುಕಿವೆ.

ಮಂಗಳವಾರ ಮತ್ತು ಬುಧವಾರ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನ ಸಂವಾದ ನಡೆಸಿದ ನಂತರ ಜೂ.18ರಂದು ಕೊರೊನಾ ಹಾವಳಿ ನಿಯಂತ್ರಣಕ್ಕಾಗಿ ಹೊಸ ಮಾರ್ಗೋಪಾಯಗಳ ಬಗ್ಗೆ ನಿರ್ಧಾರ ಪ್ರಕಟವಾಗಲಿದೆ.

ಜುಲೈ ಮತ್ತು ಆಗಸ್ಟ್‍ನಲ್ಲಿ ಕೊರೊನಾ ಹಾವಳಿ ಮತ್ತಷ್ಟು ಹೆಚ್ಚಾಗುವ ಆತಂಕ ಇರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕೈಗೊಳ್ಳುವ ತೀರ್ಮಾನ ಅತ್ಯಂತ ಪ್ರಮುಖವಾಗಿದೆ.

Facebook Comments