100 ಕೋಟಿಗೆ ಲಸಿಕೆ ನೀಡಿ ವಿಶ್ವದಲ್ಲೇ ಹೊಸ ಇತಿಹಾಸ ಬರೆದ ಭಾರತ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಅ.21- ನೂರು ಕೋಟಿ ಮಂದಿಗೆ ಕೊರೊನಾ ಲಸಿಕೆ ಹಾಕುವ ಭಾರತ ಹೊಸ ಇತಿಹಾಸ ಸೃಷ್ಟಿಸಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. 130 ಕೋಟಿ ಭಾರತೀಯರ ಪೈಕಿ ನೂರು ಕೋಟಿ ಮಂದಿಗೆ ಲಸಿಕೆ ಹಾಕಲು ನಾವು ಯಶಸ್ವಿಯಾಗಿರುವುದು ಭಾರತೀಯ ವಿಜ್ಞಾನಿಗಳ ವಿಜಯ ಎಂದು ಮೋದಿ ಟ್ವಿಟರ್‍ನಲ್ಲಿ ಶ್ಲಾಘಿಸಿದ್ದಾರೆ.


ನಾವು 100 ಕೋಟಿ ಲಸಿಕೆ ಸಾಧನೆ ಮಾಡಲು ಸಹಕರಿಸಿರುವ ವಿಜ್ಞಾನಿಗಳು, ವೈದ್ಯರು, ನರ್ಸ್‍ಗಳು ಹಾಗೂ ಈ ನಿಟ್ಟಿನಲ್ಲಿ ಪರಿಶ್ರಮ ಹಾಕಿರುವ ಪ್ರತಿಯೊಬ್ಬರಿಗೂ ನನ್ನ ನಮನಗಳು ಎಂದು ಮೋದಿ ಹೇಳಿದ್ದಾರೆ. ದೇಶದ ನೂರು ಕೋಟಿ ಮಂದಿಗೆ ಲಸಿಕೆ ಹಾಕಿಸಿದ ಸಾಧನೆ ಮುಗಿಯುತ್ತಿದ್ದಂತೆ ಮೋದಿ ಅವರು ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ತೆರಳಿ ಅಲ್ಲಿನ ವೈದ್ಯರೊಂದಿಗೆ ಸಮಾಲೋಚನೆ ನಡೆಸಿದರು.

ಕೇಂದ್ರ ಆರೋಗ್ಯ ಸಚಿವ ಮನ್‍ಸುಖ್ ಮಾಂಡವೀಯಾ ಅವರೊಂದಿಗೆ ಆಸ್ಪತ್ರೆಯ ವೈದ್ಯರು ಮತ್ತು ದಾದಿಯರೊಂದಿಗೆ ಮಾತುಕತೆ ನಡೆಸಿದ ಮೋದಿ ಅವರು ಲಸಿಕಾ ಅಭಿಯಾನ ಯಶಸ್ವಿಯ ರೂವಾರಿಗಳಾದ ಆರೋಗ್ಯ ಕಾರ್ಯಕರ್ತರ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

ತ್ವರಿತಗತಿಯಲ್ಲಿ ದೇಶದ ಪ್ರತಿಯೊಬ್ಬರಿಗೂ ಲಸಿಕೆ ಲಭಿಸಬೇಕು ಎಂಬ ಉದ್ದೇಶದಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅರಂಭಿಸಿದ್ದ ಬೃಹತ್ ಲಸಿಕಾ ಅಭಿಯಾನದಿಂದಾಗಿ ಇಂದಿಗೆ ದೇಶದ 100 ಕೋಟಿ ಮಂದಿ ಕೊರೊನಾ ಲಸಿಕೆ ಪಡೆಯುವಂತಾಗಿದೆ.

Facebook Comments