ಲಾಕ್ ಡೌನ್ ಮುಗಿದಿದೆಯಷ್ಟೆ, ಕೊರೋನಾ ಹೋಗಿಲ್ಲ : ದೇಶವಾಸಿಗಳನ್ನು ಮತ್ತೊಮ್ಮೆ ಎಚ್ಚರಿಸಿದ ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ : ಕರೊನಾ ಸಂಕಷ್ಟದ ನಡುವೆಯೇ ಆಗಮಿಸಿರುವ ನವರಾತ್ರಿ ಮತ್ತು ದೀಪಾವಳಿ ಹಬ್ಬಗಳ ಸಂದರ್ಭದಲ್ಲಿಯೇ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಭಾರತದಲ್ಲಿ ಎದುರಾಗಿರುವ ಸಾಲು ಸಾಲು ಹಬ್ಬಗಳ ನಡುವೆ ಕೊರೊನಾವೈರಸ್ ಸೋಂಕಿನ ಬಗ್ಗೆ ನಿರ್ಲಕ್ಷ್ಯ ವಹಿಸದಂತೆ ದೇಶದ ಪ್ರಜೆಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಈ ಹಬ್ಬದ ಸಂದರ್ಭದಲ್ಲಿ, ಮಾರುಕಟ್ಟೆಗಳು ಮತ್ತೆ ಚೇತರಿಸಿಕೊಂಡಿವೆ. ಲಾಕ್​ಡೌನ್ ಈಗಷ್ಟೇ ಮುಕ್ತಾಯವಾಗಿದೆ ಎಂಬುದನ್ನು ನಾವು ನೆನಪಿಸಿಕೊಳ್ಳಬೇಕಾಗುತ್ತದೆ. ಆದಾಗ್ಯೂ, ಕೋವಿಡ್ 19 ಇನ್ನೂ ಕೊನೆಗೊಂಡಿಲ್ಲ. ಕಳೆದ 7ರಿಂದ 8 ತಿಂಗಳ ಅವಧಿಯಲ್ಲಿ ಪ್ರತಿಯೊಬ್ಬ ಭಾರತೀಯನ ಪ್ರಯತ್ನದ ಫಲವಾಗಿ ಭಾರತದಲ್ಲಿ ಸ್ಥಿರತೆ ಕಾಯ್ದುಕೊಳ್ಳಲಾಗಿದೆ. ಅದನ್ನು ಹಾಳುಗೆಡಹುವ ಕೆಲಸ ನಮ್ಮಿಂದ ಆಗದಂತೆ ಎಚ್ಚರಿಕೆ ವಹಿಸಬೇಕು.

ಜನತಾ ಕರ್ಫ್ಯೂನಿಂದ ಹಿಡಿದು ಇಂದಿನ ತನಕ ಭಾರತೀಯರಾದ ನಾವು ದೀರ್ಘ ಅವಧಿಯನ್ನು ಕಳೆದಿದ್ದೇವೆ. ಈ ಅವಧಿಯಲ್ಲಿ ಸಾಕಷ್ಟು ಸಂಕಷ್ಟಗಳನ್ನು ಎದುರಿಸಿದ್ದೇವೆ. ಈಗಷ್ಟೇ ಆರ್ಥಿಕ ಚಟುವಟಿಕೆಗಳು ನಿಧಾನವಾಗಿ ಚೇತರಿಸಿಕೊಳ್ಳುತ್ತಿವೆ. ಎಲ್ಲಿಯ ತನಕ ಕರೊನಾಕ್ಕೆ ಲಸಿಕೆ ಅಭಿವೃದ್ಧಿ ಆಗುವುದಿಲ್ಲವೋ ಅಲ್ಲಿಯ ತನಕ ನಾವು ಅದರ ವಿರುದ್ಧದ ಹೋರಾಟವನ್ನು ಮುಂದುವರಿಸಬೇಕಾಗುತ್ತದೆ.

ಇಂದು ದೇಶದಲ್ಲಿ ರಿಕವರಿ ರೇಟ್​ ಚೆನ್ನಾಗಿದೆ. ಮರಣ ಪ್ರಮಾಣ ಕಡಿಮೆ ಇದೆ. ಭಾರತದಲ್ಲಿ 10 ಲಕ್ಷ ಜನಸಂಖ್ಯೆಗೆ 5,500 ಜನರಷ್ಟೇ ಸೋಂಕಿತರಾಗಿದ್ದಾರೆ. ಅಮೆರಿಕ, ಬ್ರೆಜಿಲ್​ ಮುಂತಾದ ರಾಷ್ಟ್ರಗಳಲ್ಲಿ ಇದು 25,000 ಇದೆ. ಮರಣ ಪ್ರಮಾಣ ಪ್ರತಿ 10 ಲಕ್ಷಕ್ಕೆ ಭಾರತದಲ್ಲಿ 83 ಇದ್ದರೆ, ಅಮೆರಿಕ, ಬ್ರೆಜಿಲ್, ಸ್ಪೇನ್​, ಬ್ರಿಟನ್​ಗಳಲ್ಲಿ 600ಕ್ಕೂ ಹೆಚ್ಚಿದೆ.

ಇತ್ತೀಚೆಗೆ, ನಾವು ಹಲವು ಫೋಟೋ ಮತ್ತು ವಿಡಿಯೋಗಳನ್ನು ಗಮನಿಸಿದ್ದೇವೆ. ಅದರಲ್ಲಿ ಜನರ ಬಹಳ ನಿರ್ಲಕ್ಷ್ಯವಹಿಸಿರುವುದನ್ನು ಕಂಡಿದ್ದೇವೆ. ಇದು ಸರಿಯಲ್ಲ. ಒಂದೊಮ್ಮೆ ನೀವು ಮಾಸ್ಕ್ ಧರಿಸದೇ ಹೊರಗೆ ಕಾಲಿಟ್ಟರೆ, ನಿಮ್ಮ ಕುಟುಂಬವನ್ನು ಅಪಾಯಕ್ಕೆ ಒಡ್ಡುತ್ತಿದ್ದೀರಿ ಎಂದೇ ಅರ್ಥ. ಅಮೆರಿಕ ಅಥವಾ ಯುರೋಪ್​ ಇರಲಿ, ಕೇಸ್​ಗಳು ಇಳಿಮುಖವಾಗಿವೆ ಮತ್ತು ಅಲ್ಲಿ ದಿಢೀರ್ ಕೇಸ್​ಗಳ ಹೆಚ್ಚಳವೂ ಆಗಿದೆ. ಯಾಕೆ ಎಂಬ ಪ್ರಶ್ನೆಗೆ ಇದೇ ಉತ್ತರವಾಗಿದ್ದು, ಅದನ್ನು ಯಾವತ್ತೂ ನೆನಪಿನಲ್ಲಿಡಬೇಕು.

ಕೋವಿಡ್ 19 ರೋಗಿಗಳಿಗಾಗಿ ಭಾರತದಲ್ಲಿ 90 ಲಕ್ಷಕ್ಕೂ ಹೆಚ್ಚು ಬೆಡ್​ಗಳ ವ್ಯವಸ್ಥೆ ಮಾಡಲಾಗಿದೆ. 12,000ದಷ್ಟು ಕ್ವಾರಂಟೈನ್ ಕೇಂದ್ರಗಳಿವೆ, 2000ದಷ್ಟು ಕರೊನಾ ಟೆಸ್ಟಿಂಗ್ ಲ್ಯಾಬ್​ಗಳಿವೆ. ದೇಶಾದ್ಯಂತ ಕರೊನಾ ಟೆಸ್ಟ್​ಗಳ ಸಂಖ್ಯೆ ಶೀಘ್ರವೇ 10 ಕೋಟಿಯ ಗಡಿ ದಾಟಲಿದೆ. ಕೋವಿಡ್​ ವಿರುದ್ಧದ ನಮ್ಮ ಹೋರಾಟದಲ್ಲಿ ಟೆಸ್ಟ್​ಗಳ ಸಂಖ್ಯೆ ಹೆಚ್ಚಳ ನಮ್ಮ ಬಲವಾಗಿರಲಿದೆ.

# ಪ್ರತಿಯೊಬ್ಬರಿಗೂ ಲಸಿಕೆ ತಲುಪಿಸುವ ವ್ಯವಸ್ಥೆ :
ಕೋವಿಡ್ -19 ಲಸಿಕೆಗಾಗಿ ಸರ್ಕಾರ ಸಾಕಷ್ಟು ಶ್ರಮಿಸುತ್ತಿದೆ ಮತ್ತು ಲಸಿಕೆ ಲಭ್ಯವಾದ ಕೂಡಲೇ ಎಲ್ಲರಿಗೂ ತಲುಪಿಸಲಾಗುತ್ತದೆ ಎಂದುಪ್ರಧಾನಿ ನರೇಂದ್ರ ಮೋದಿ ಹೇಳಿದರು.ಕೋವಿಡ್ 19 ಲಸಿಕೆಗಾಗಿ ವಿಶ್ವ ಮತ್ತು ಭಾರತ ಕಾಯುತ್ತಿದೆ.ಹಬ್ಬದ ಸಮಯದಲ್ಲಿ ಜನರು ಹೆಚ್ಚು ಜಾಗರೂಕರಾಗಿರಬೇಕು ಎಂದು ಮನವಿ ಮಾಡಿದರು.

ಇದೇ ವೇಳೆ ದೇಶದ ಜನತೆಗೆ ಸರಣಿ ಹಬ್ಬಗಳ ಶುಭ ಕೋರಿದ ಪ್ರಧಾನಿ ಮೋದಿ, ಹಬ್ಬಗಳ ಸಮಯದಲ್ಲಿ ಪ್ರತಿಯೊಂದೂ ಕುಟುಂಬವೂ ಸುರಕ್ಷಿತವಾಗಿರುವುದನ್ನು ನೋಡಲು ನಾನು ಬಯಸುತ್ತೇನೆ ಎಂದರು.

Facebook Comments

Sri Raghav

Admin