ಲಂಕಾ ಅಧ್ಯಕ್ಷರ ಜೊತೆ ಮೋದಿ ಮಹತ್ವದ ಚರ್ಚೆ, ಭಯೋತ್ಪಾದನೆ ನಿಗ್ರಹಕ್ಕೆ ಬೆಂಬಲ

ಈ ಸುದ್ದಿಯನ್ನು ಶೇರ್ ಮಾಡಿ

ಕೊಲಂಬೋ, ಜೂ.9- ಶ್ರೀಲಂಕಾಕ್ಕೆ ಭೇಟಿ ನೀಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ದ್ವೀಪ ರಾಷ್ಟ್ರದ ಅಧ್ಯಕ್ಷ ಸಿರಿಸೇನಾ ಮೈತ್ರಿ ಪಾಲ ಮತ್ತು ಪ್ರಧಾನಿ ರಾನಿಲ್ ವಿಕ್ರಮ ಸಿಂಘೆ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಿದರು.

ಭಾರತ- ಶ್ರೀಲಂಕಾ ನಡುವಣ ದ್ವಿಪಕ್ಷೀಯ ಬಾಂಧವ್ಯ ಬಲವರ್ಧನೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಕಾರ ಸಂಬಂಧ ಮುಂದುವರೆಸುವ ಕುರಿತು ಈ ನಾಯಕರೊಂದಿಗೆ ಮೋದಿ ಗಹನ ಸಮಾಲೋಚನೆ ನಡೆಸಿದರು.

ಭಯೋತ್ಪಾದನೆ ವಿರುದ್ಧ ಶ್ರೀಲಂಕಾದ ಹೋರಾಟಕ್ಕೆ ಭಾರತ ಸಂಪೂರ್ಣ ಸಹಕಾರ , ಬೆಂಬಲ ನೀಡಲಿದೆ ಎಂದು ಮೋದಿ ಪುನರುಚ್ಚರಿಸಿದರು. ದಕ್ಷಿಣ ಏಷ್ಯಾದ ದ್ವೀಪ ಸಮೂಹಗಳ ರಾಷ್ಟ್ರ ಮಾಲ್ಡೀವ್ಸ್‍ಗೆ ಎರಡು ದಿನಗಳ ಭೇಟಿ ನಂತರ ಇಂದು ಬೆಳಗ್ಗೆ ರಾಜಧಾನಿ ಮಾಲೆಯಿಂದ ಶ್ರೀಲಂಕಾಗೆ ಆಗಮಿಸಿದ ಮೋದಿಯವರನ್ನು ಕೊಲಂಬೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲಂಕಾ ಪ್ರಧಾನಿ ರಾನಿಲ್ ವಿಕ್ರಮ ಸಿಂಘೆ ಆತ್ಮೀಯವಾಗಿ ಸ್ವಾಗತಿಸಿದರು.

ನಂತರ ಮೋದಿಯವರು ರಾಷ್ಟ್ರಾಧ್ಯಕ್ಷ ಸಿರಿಸೇನಾ ಮೈತ್ರಿ ಪಾಲ ಮತ್ತು ಪ್ರಧಾನಿ ವಿಕ್ರಮ ಸಿಂಘೆ ಅವರೊಂದಿಗೆ ದ್ವಿಪಕ್ಷೀಯ ಬಾಂಧವ್ಯ ಬಲವರ್ಧನೆ ಕುರಿತು ಸಮಾಲೋಚನೆ ನಡೆಸಿದರು.

ಈಸ್ಟರ್ ಸಂಡೇ ಬಾಂಬ್ ದಾಳಿ ನಂತರ ತತ್ತರಿಸಿರುವ ದ್ವೀಪ ರಾಷ್ಟ್ರದಲ್ಲಿ ಭಯೋತ್ಪಾದನೆ ನಿಗ್ರಹಕ್ಕೆ ಭಾರತ ಅಗತ್ಯವಾದ ಎಲ್ಲಾ ಬೆಂಬಲ ಮತ್ತು ಸಹಕಾರ ನೀಡಲಿದೆ ಎಂದು ಇದೇ ಸಂದರ್ಭದಲ್ಲಿ ಮೋದಿ ದ್ವೀಪ ರಾಷ್ಟ್ರದ ನಾಯಕರಿಗೆ ಭರವಸೆ ನೀಡಿದರು.

ನಂತರ ಶ್ರೀಲಂಕಾ ವಿರೋಧ ಪಕ್ಷದ ನಾಯಕ ಮಹೀಂದ್ರಾ ರಾಜಪಕ್ಸೆ ಅವರನ್ನು ಸಹ ಮೋದಿ ಭೇಟಿ ಮಾಡಿದರು. ದ್ವೀಪ ರಾಷ್ಟ್ರದ ತಮಿಳು ರಾಜಕೀಯ ಪಕ್ಷಗಳ ನಿಯೋಗವೂ ಸಹ ಮೋದಿ ಅವರನ್ನು ಭೇಟಿ ಮಾಡಿತು.

ಈ ಕುರಿತು ಟ್ವೀಟ್ ಮಾಡಿರುವ ಮೋದಿ ಇದು ಐದು ವರ್ಷಗಳಲ್ಲಿ ಸುಂದರ ದ್ವೀಪ ಶ್ರೀಲಂಕಾಕ್ಕೆ ನೀಡುತ್ತಿರುವ ಮೂರನೆ ಭೇಟಿಯಾಗಿದೆ. ಈ ದೇಶದೊಂದಿಗೆ ಭಾರತ ಉತ್ತಮ ಸಂಬಂಧ ಹೊಂದಿದೆ. ಅದನ್ನು ಮತ್ತಷ್ಟು ಬಲೊಗೊಳಿಸುವುದು ತಮ್ಮ ಭೇಟಿಯ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.

ಈಸ್ಟರ್ ಸಂಡೇ ದಿನದಂದು ಭಾರತೀಯರು ಸೇರಿದಂತೆ 250ಕ್ಕೂ ಜನರು ಬಲಿಯಾದ ಶ್ರೀಲಂಕಾಕ್ಕೆ ಭೇಟಿ ನೀಡಿದ ಪ್ರಥಮ ವಿದೇಶಿ ನಾಯಕರು ಎಂದು ಮೋದಿ ಗುರುತಿಸಿಕೊಂಡಿದ್ದಾರೆ. ಮೋದಿ 2015 ಮತ್ತು 2017ರಲ್ಲಿ ಶ್ರೀಲಂಕಾಕ್ಕೆ ಭೇಟಿ ನೀಡಿದ್ದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin