3 ದಶಕಗಳ ನಂತರ ಅಯೋಧ್ಯೆಗೆ ಕಾಲಿಟ್ಟು ಹೊಸ ಭಾಷ್ಯ ಬರೆದ ಮೋದಿ..!

ಈ ಸುದ್ದಿಯನ್ನು ಶೇರ್ ಮಾಡಿ

ಅಯೋಧ್ಯೆ,ಆ.5-ಸುಮಾರು ಮೂರು ದಶಕಗಳ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀರಾಮನ ಜನ್ಮಸ್ಥಳ ಅಯೋಧ್ಯೆಗೆ ಆಗಮಿಸುವ ಮೂಲಕ ಹೊಸ ಭಾಷ್ಯ ಬರೆದರು.

ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರು ಗುಜರಾತ್‍ನ ಸೋಮನಾಥದಿಂದ ಅಯೋಧ್ಯೆವರೆಗೂ ದೇಶಾದ್ಯಂತ ರಾಮ ರಥಯಾತ್ರೆ ಕೈಗೊಂಡಾಗ ಅವರಿಗೆ ಸಾರಥಿಯಾಗಿ ನಿಂತಿದ್ದು ಇದೇ ಮೋದಿ.

90ರ ದಶಕದಲ್ಲಿ ಒಂದು ಬಾರಿ ಅಯೋಧ್ಯೆಗೆ ಭೇಟಿ ನೀಡಿದ್ದನ್ನು ಹೊರತುಪಡಿಸಿದರೆ ಪ್ರಧಾನಿಯಾದ ನಂತರವೂ ಈ ಸ್ಥಳಕ್ಕೆ ಭೇಟಿ ಕೊಟ್ಟಿರಲಿಲ್ಲ.

ಈ ಹಿಂದೆ 1990ರಲ್ಲಿ ಮಾತ್ರ ಮೋದಿ ಅವರು ಅಯೋಧ್ಯೆಗೆ ಆಗಮಸಿದ್ದರು. 1992 ಡಿಸೆಂಬರ್ 6ರಂದು ಬಾಬ್ರಿಮಸೀದಿಯನ್ನು ಕರಸೇವಕರು ನೆಲಸಮಗೊಳಿಸಿದ ಸಂದರ್ಭದಲ್ಲಿ ಮೋದಿ ಅವರು ಇರಲಿಲ್ಲ.

ನಾನು ಪುನಃ ಅಯೋಧ್ಯೆಗೆ ಭೇಟಿ ನೀಡುವುದಾದರೆ ಶ್ರೀರಾಮನ ಮಂದಿರ ನಿರ್ಮಾಣಕ್ಕಾಗಿಯೇ ಎಂದು ಸಂಕಲ್ಪ ಮಾಡಿದ್ದರು. ಸುಪ್ರೀಂಕೋರ್ಟ್ ತೀರ್ಪು ನೀಡಿದ ಬಳಿಕ ಅಯೋಧ್ಯೆಗೆ ಆಗಮಿಸಬೇಕೆಂದು ಮೋದಿ ಅವರನ್ನು ಅನೇಕ ಬಾರಿ ಆಹ್ವಾನಿಸಲಾಗಿತ್ತು.

ಉತ್ತರಪ್ರದೇಶದಲ್ಲಿ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆ ವೇಳೆ ಪಕ್ಕದ ಕ್ಷೇತ್ರಗಳಲ್ಲೇ ಬಿಜೆಪಿ ಪರ ಪ್ರಚಾರ ನಡೆಸಿದ್ದರೂ ಮೋದಿ ಅಪ್ಪಿತಪ್ಪಿಯೂ ಅಯೋಧ್ಯೆಯತ್ತ ಮುಖ ಮಾಡಿರಲಿಲ್ಲ.

ಇಂದು ಬೆಳಗ್ಗೆ ದೆಹಲಿಯಿಂದ ಲಖ್ನೋಗೆ ವಿಶೇಷ ವಿಮಾನದಲ್ಲಿ ಆಗಮಿಸಿ ಅಲ್ಲಿಂದ ಹೆಲಿಕಾಪ್ಟರ್‍ನಲ್ಲಿ ಅಯೋಧ್ಯೆ ಹೊರಭಾಗದಲ್ಲಿ ನಿರ್ಮಾಣವಾಗಿರುವ ಹೆಲಿಪ್ಯಾಡ್‍ಗೆ ಆಗಮಿಸಿದರು.

ಹೆಲಿಪ್ಯಾಡ್‍ನಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಸಂಪುಟದ ಸಹೋದ್ಯೋಗಿಗಳು ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಅಲ್ಲಿಂದ ನೇರವಾಗಿ ಹನುಮಾನ್‍ಗಡಿಗೆ ಭೇಟಿ ಕೊಟ್ಟು ದೇವರ ದರ್ಶನ ಪಡೆದರು.

ಪ್ರಧಾನಿ ಚಿನ್ನದ ಬಣ್ಣದ ಕುರ್ತಾ, ಕೇಸರಿ ಬಣ್ಣದ ಶಾಲು ಹಾಗೂ ರೇಷ್ಮೆ ಪಂಚೆ ಧರಿಸಿದ್ದರು. ಹನುಮಾನ್‍ಗುಡಿ ದರ್ಶನದ ನಂತರ ನೇರವಾಗಿ ಶಿಲಾನ್ಯಾಸ ನಡೆಯುವ ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಜೈ ಶ್ರೀರಾಮ್ ಘೋಷ ಮೊಳಗಿದವು.

Facebook Comments

Sri Raghav

Admin