ಕ್ರಿಪ್ಟೋ ಕರೆನ್ಸಿ ಯುವಕರನ್ನು ಹಾಳು ಮಾಡಬಹುದು : ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ನ.18- ಕ್ರಿಪ್ಟೋ ಕರೆನ್ಸಿ ಕೆಟ್ಟವರ ಕೈಗೆ ಹೋಗದಂತೆ ಖಚಿತಪಡಿಸಿಕೊಳ್ಳಬೇಕು ಎಂದು ಪ್ರಜಾತಾಂತ್ರಿಕ ರಾಷ್ಟ್ರಗಳನ್ನು ಒತ್ತಾಯಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಕ್ರಿಪ್ಟೋ ಕರೆನ್ಸಿ ಯುವಕರನ್ನು ಹಾಳು ಮಾಡಬಹುದು ಎಂದು ಎಚ್ಚರಿಸಿದ್ದಾರೆ.

ಸಿಡ್ನಿ ಮಾತುಕತೆಯಲ್ಲಿ ವರ್ಚುವಲ್ ಭಾಷಣ ಮಾಡಿದ ಮೋದಿ ಡಿಜಿಟಲ್ ಯುಗವು ಪ್ರತಿಯೊಂದನ್ನೂ ಬದಲಾಯಿಸುತ್ತಿದೆ. ಇದು ರಾಜಕಾರಣ, ಆರ್ಥಿಕತೆಗಳು ಮತ್ತು ಸಮಾಜಗಳನ್ನು ಮರು ವ್ಯಾಖ್ಯಾನಿಸಿದೆ ಮತ್ತು ಸಾರ್ವಭೌಮತ್ವ, ಆಡಳಿತ, ನೈತಿಕತೆ, ಹಕ್ಕುಗಳು ಮತ್ತು ಭದ್ರತೆ ಕುರಿತಂತೆ ಹೊಸ ಪ್ರಶ್ನೆಗಳು ಉದ್ಭವವಾಗಲು ಕಾರಣವಾಗಿದೆ ಎಂದು ಹೇಳಿದರು.

ಟೆಲಿಕಾಂ (ದೂರ ಸಂಪರ್ಕ) ಕ್ಷೇತ್ರಕ್ಕಾಗಿನ 5ಜಿ ಮತ್ತು 6ಜಿ ಸೇರಿದಂತೆ ದೇಶವು ವಿವಿಧ ಕ್ಷೇತ್ರಗಳಲ್ಲಿ ಆಂತರಿಕ ಸಾಮಥ್ರ್ಯಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಹೂಡಿಕೆ ಮಾಡುತ್ತಿದೆ ಎಂದ ಅವರು, ನೂತನ ತಂತ್ರಜ್ಞಾನಗಳಿಗೆ ಭಾರತದ ಅನುಸಂಧಾನದ ಪಕ್ಷಿನೋಟ ನೀಡಿದರು.

ಭಾರತವು ದತ್ತಾಂಶವನ್ನು ಜನತೆಯ ಸಬಲೀಕರಣಕ್ಕಾಗಿ ಬಳಸುತ್ತದೆ ಮತ್ತು ದೇಶವು ಇದನ್ನು ಒಂದು ಪ್ರಜಾತಾಂತ್ರಿಕ ಚೌಕಟ್ಟಿನಲ್ಲಿ ಮಾಡುವ ನಿಟ್ಟಿನಲ್ಲಿ ಸಾಟಿಯಿಲ್ಲದ ಅನುಭವ ಹೊಂದಿದೆ. ಜತೆಗೆ ವ್ಯಕ್ತಿಗತ ಹಕ್ಕುಗಳನ್ನೂ ಖಾತರಿಪಡಿಸಿದೆ ಎಂದು ಪ್ರಧಾನಿ ಪ್ರತಿಪಾದಿಸಿದರು.

ಭಾರತವು ಪ್ರಪಂಚದ ಅತ್ಯಂತ ವಿಸ್ತೃತ ಸಾರ್ವಜನಿಕ ಮಾಹಿತಿ ಮೂಲ ಸೌಕರ್ಯವನ್ನು ನಿರ್ಮಿಸುತ್ತಿದೆ. 1.3 ಶತಕೋಟಿಗೂ ಅಧಿಕ ಭಾರತೀಯರು ವಿಶಿಷ್ಟ ಡಿಜಿಟಲ್ ಗುರುತನ್ನು ಹೊಂದಿದ್ದಾರೆ ಎಂದು ಮೋದಿ ನುಡಿದರು.

ಇಂದಿನ ತಂತ್ರಜ್ಞಾನದ ಅತಿ ಮಹತ್ವದ ಉತ್ಪನ್ನ ಎಂದರೆ ದತ್ತಾಂಶ. ಭಾರತದಲ್ಲಿ ನಾವು ದತ್ತಾಂಶ ರಕ್ಷಣೆಯ ಪ್ರಬಲ ಕಾರ್ಯ ಚೌಕಟ್ಟನ್ನು ಸೃಷ್ಟಿಸಿದ್ದೇವೆ. ಅದೇ ವೇಳೆ ದತ್ತಾಂಶವನ್ನು ಜನತೆಯ ಸಬಲೀಕರಣಕ್ಕಾಗಿ ಬಳಸುತ್ತಿದ್ದೇವೆ ಎಂದು ಅವರು ವಿವರಿಸಿದರು.

ಭಾರತವು ಬ್ರಾಂಡ್‍ಬ್ಯಾಂಡ್‍ನೊಂದಿಗೆ 600,000 ಗ್ರಾಮಗಳನ್ನು ಸಂಪರ್ಕಿಸುವ ಹಾದಿಯಲ್ಲಿ ಮುನ್ನಡೆಯುತ್ತಿದೆ ಎಂದು ಪ್ರಧಾನಿ ತಿಳಿಸಿದರು.
ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಕಾರ್ಯತಂತ್ರ ಸಹಕಾರವನ್ನು ಪ್ರಸ್ತಾಪಿಸಿದ ಪ್ರಧಾನಿ ಈ ಸಹಕಾರವು ಈ ಪ್ರದೇಶ ಮತ್ತು ಪ್ರಪಂಚದ ಒಳಿತಿನ ಶಕ್ತಿಯಾಗಿದೆ ಎಂದು ಅಭಿಪ್ರಾಯಪಟ್ಟರು.

Facebook Comments