ನಾಳೆ ಮೋದಿ-ಜಿನ್‍ಪಿಂಗ್ ಶೃಂಗಸಭೆಗೆ ಭಾರಿ ಬಂದೋಬಸ್ತ್

ಈ ಸುದ್ದಿಯನ್ನು ಶೇರ್ ಮಾಡಿ

ಮಾಮಲ್ಲಪುರಂ(ತಮಿಳುನಾಡು), ಅ.10- ಚೆನ್ನೈ ಸಮೀಪದ ಇತಿಹಾಸ ಪ್ರಸಿದ್ಧ ಪ್ರವಾಸಿ ಕರಾವಳಿ ಪಟ್ಟಣ ಮಾಮಲ್ಲಪುರಂನಲ್ಲಿ ನಾಳೆ ಮತ್ತು ನಾಡಿದ್ದು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಚೀನಾ ರಾಷ್ಟ್ರಾಧ್ಯಕ್ಷ ಕ್ಸಿ ಜಿನ್‍ಪಿಂಗ್ ನಡುವೆ ಶೃಂಗಸಭೆ ನಡೆಯಲಿದ್ದು, ಅಭೂತಪೂರ್ವ ಬಂದೋಬಸ್ತ್ ಮಾಡಲಾಗಿದೆ.

ಭಾರತ-ಚೀನಾ ಮಹತ್ವದ ಶೃಂಗಸಭೆಗಾಗಿ ಮಾಮಲ್ಲಪುರಂ ನವವಧುವಿನಂತೆ ಕಂಗೊಳಿಸುತ್ತಿದ್ದು, ಅಂತಿಮ ಹಂತದ ಸಿದ್ಧತೆಗಳು ನಡೆದಿವೆ. ಇದೇ ವೇಳೆ ಪ್ರಾಚೀನ ಕರಾವಳಿ ಕಿನಾರೆ ನಗರದಲ್ಲಿ ಹಿಂದೆಂದೂ ಕಂಡು ಕೇಳರಿಯದಂಥ ಬಿಗಿ ಭದ್ರತಾ ಏರ್ಪಾಡುಗಳನ್ನು ಮಾಡಲಾಗಿದೆ.

ಕರಾವಳಿ ತೀರದಲ್ಲಿ ಅತ್ಯಾಧುನಿ ಶಸ್ತ್ರಸಜ್ಜಿತ ಕರಾವಳಿ ರಕ್ಷಣಾ ನೌಕೆ ಗಸ್ತು ತಿರುಗುತ್ತಿದೆ. ಮತ್ತೊಂದು ರಕ್ಷಣಾ ಹಡುಗು ಪಟ್ಟಣದ ಸಮೀಪ ಲಂಗರು ಹಾಕಿದೆ. ಮಾಮಲ್ಲಪುರಂನಲ್ಲಿ 5,000ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ತಮಿಳುನಾಡಿನ ವಿವಿಧ ಭಾಗಗಳಲ್ಲೂ ವ್ಯಾಪಕ ಬಂದೋಬಸ್ತ್ ಮಾಡಲಾಗಿದೆ. ಹಳೆ ಮಹಾಬಲಿಪುರಂ ರಸ್ತೆ ಮತ್ತು ಈಸ್ಟ್ ಕೋಸ್ಟ್ ರೋಡ್‍ನಲ್ಲಿ ಪಹರೆಯನ್ನು ಹೆಚ್ಚಿಸಲಾಗಿದೆ.

ಪಟ್ಟಣದ ದೇವಾಲಯಗಳಿಗೆ ವಿಶೇಷ ಭದ್ರತೆ ಒದಗಿಸಲಾಗಿದೆ. ಪಟ್ಟಣ ಮತ್ತು ಸುತ್ತಮುತ್ತ 800ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಸೂಕ್ಷ್ಮ ಸ್ಥಳಗಳಲ್ಲಿ ಲೋಹ ಶೋಧಕ ವ್ಯವಸ್ಥೆ ಮಾಡಲಾಗಿದ್ದು, ಪಟ್ಟಣದಲ್ಲಿ ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ಪಡೆಗಳನ್ನು ಈಗಿನಿಂದಲೇ ನಿಯೋಜಿಸಲಾಗಿದೆ.

Facebook Comments