ಕೃಷಿ ವಿಧೇಯಕ ಕುರಿತು ವಿಪಕ್ಷಗಳಿಂದ ಅಪಪ್ರಚಾರ, ರೈತರಿಗೆ ಮೋದಿ ಅಭಯ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಸೆ.21- ಸಂಸತ್‍ನಲ್ಲಿ ಅಂಗೀಕಾರವಾಗಿರುವ ಕೃಷಿ ವಲಯಕ್ಕೆ ಸಂಬಂಧಿಸಿದ ಎರಡು ಮಸೂದೆಗಳ ಬಗ್ಗೆ ರೈತರು ಗೊಂದಲಕ್ಕೊಳಗಾಗಿ ಭಯ ಪಡುವ ಅಗತ್ಯವಿಲ್ಲ. ಕೃಷಿಕರ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅಭಯ ನೀಡಿದ್ದಾರೆ.

ಕೃಷಿ ಮಸೂದೆಗಳ ಅನುಮೋದನೆ ಬಗ್ಗೆ ಹರ್ಷ ವ್ಯಕ್ತಪಡಿಸಿ ದೇಶದ ರೈತರನ್ನು ಉದ್ದೇಶಿಸಿ ಮಾತನಾಡಿರುವ ಮೋದಿ, ಈ ಮಸೂದೆಗಳು ಕೃಷಿ ವಲಯದಲ್ಲಿ ಹೊಸ ಕ್ರಾಂತಿಗೆ ಕಾರಣವಾಗಿ ರೈತರನ್ನು ಸಬಲೀಕರಣಗೊಳಿಸುತ್ತದೆ ಎಂದು ಹೇಳಿದರು. ವಿರೋಧ ಪಕ್ಷಗಳು ವಿನಾಃಕಾರಣ ಮಸೂದೆಗಳ ಬಗ್ಗೆ ರೈತರಿಗೆ ತಪ್ಪು ಮಾಹಿತಿ ನೀಡಿ ಅವರ ದಿಕ್ಕು ತಪ್ಪಿಸುತ್ತಿವೆ ಎಂದು ಮೋದಿ ಬೇಸರ ವ್ಯಕ್ತಪಡಿಸಿದರು.

ಹೊಸ ವಿಧೇಯಕಗಳಿಂದಾಗಿ ರೈತರ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆ ಆಧಾರದ ಮೇಲೆ ಖರೀದಿಸುವ ಪ್ರಕ್ರಿಯೆಗೆ ಯಾವುದೇ ರೀತಿಯಲ್ಲೂ ದಕ್ಕೆಯಾಗುವುದಿಲ್ಲ. ಇದು ಮುಂದುವರೆಯುತ್ತದೆ. ರೈತರಿಂದ ನೇರವಾಗಿಯೇ ಅವರ ಉತ್ಪನಗಳನ್ನು ಖರೀದಿಸಿ ಅನ್ನದಾತರ ಆದಾಯವನ್ನು ಹೆಚ್ಚಿಸುವುದಾಗಿ ಪ್ರಧಾನಿ ಪುನರುಚ್ಚರಿಸಿದರು.

ಈ ವಿಧೇಯಕಗಳಿಂದ ರೈತರು ಎಲ್ಲಿ ಬೇಕಾದರೂ ತಮ್ಮ ಉತ್ಪನಗಳನ್ನು ಸೂಕ್ತ ಬೆಲೆಗೆ ಮಾರಾಟ ಮಾಡಬಹುದು. ಮಧ್ಯವರ್ತಿಗಳ ಹಾವಳಿ ಇರುವುದಿಲ್ಲ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಕಾಯ್ದೆಯಲ್ಲೂ ಸಾಕಷ್ಟು ಸುಧಾರಣೆ ಮಾಡಲಾಗುತ್ತಿದೆ. ಇದರಿಂದ ರೈತರ ಆರ್ಥಿಕ ಮಟ್ಟ ಮತ್ತಷ್ಟು ಹೆಚ್ಚಾಗಲಿದೆ ಎಂದು ಮೋದಿ ತಿಳಿಸಿದರು.

Facebook Comments