ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿ ಸ್ವಾತಂತ್ರ್ಯೋತ್ಸವ ಭಾಷಣದ ಕಂಪ್ಲೀಟ್ ಹೈಲೈಟ್ಸ್

ಈ ಸುದ್ದಿಯನ್ನು ಶೇರ್ ಮಾಡಿ

Modi-Speech--01
ನವದೆಹಲಿ, ಆ.15- ದೇಶದ 10 ಕೋಟಿ ಕುಟುಂಬಗಳ 50 ಕೋಟಿ ಜನರಿಗೆ ಆರೋಗ್ಯ ವಿಮೆ ಒದಗಿಸುವ ಆಯುಷ್ಮಾನ್ ಭಾರತ್ ಯೋಜನೆ ಪ್ರಧಾನಮಂತ್ರಿ ಜನ ಆರೋಗ್ಯ ಅಭಿಮಾನ, ಸರ್ವರಿಗೂ ಆರೋಗ್ಯ ಸೇವೆಗಳು, ಎಲ್ಲರಿಗೂ ಸೂರು, ಸರ್ವರಿಗೂ ಸಾಮಾಜಿಕ ನ್ಯಾಯ, ಸಮಾಜದ ಎಲ್ಲ ವರ್ಗಗಳ ಸರ್ವಾಂಗೀಣ ಅಭಿವೃದ್ದಿ ಗುರಿ, 2020ರ ವೇಳೆಗೆ ರೈತರ ಆದಾಯ ದ್ವಿಗುಣ, ಮಹಿಳೆಯರು ಮತ್ತು ಮಕ್ಕಳು ರಕ್ಷಣೆಗೆ ಆದ್ಯತೆ-ಇವು ಪ್ರಧಾನಿ ನರೇಂದ್ರ ಮೋದಿ ಅವರು ಇಂದು 72ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಘೋಷಿಸಿದ ಮಹತ್ವದ ಕಾರ್ಯಕ್ರಮಗಳ ಮುಖ್ಯಾಂಶಗಳಾಗಿವೆ.

ರಾಜಧಾನಿ ನವದೆಹಲಿಯ ಐತಿಹಾಸಿಕ ಕೆಂಪುಕೋಟಿಯ ಮೇಲೆ ರಾಷ್ಟ್ರದ ತ್ರಿವರ್ಣ ಧ್ವಜಾರೋಹಣ ನೆರವೇರಿಸಿ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಆಯುಷ್ಮಾನ್ ಭಾರತ್ ಸೇರಿದಂತೆ ಕೆಲವು ಮಹತ್ವದ ಆರೋಗ್ಯ ಕೊಡುಗೆಗಳು ಹಾಗೂ ಯೋಜನೆಗಳನ್ನು ಪ್ರಕಟಿಸಿದ್ದಾರೆ. ಆಯುಷ್ಮಾನ್ ಭಾರತ್-ರಾಷ್ಟ್ರೀಯ ಆರೋಗ್ಯ ರಕ್ಷಣಾ ಯೋಜನೆ(ಎಬಿ-ಎನ್‍ಎಚ್‍ಪಿಎಸ್)ಯನ್ನು ಅಧಿಕೃತವಾಗಿ ಪ್ರಕಟಿಸಿದ ಅವರು, ರಾಷ್ಟ್ರದ 10 ಕೋಟಿ ಕುಟುಂಬಗಳ 50 ಕೋಟಿಗೂ ಅಧಿಕ ಮಂದಿಗೆ ಆರೋಗ್ಯ ವಿಮೆ ಒದಗಿಸುವ ವಿಶ್ವದ ಅತಿದೊಡ್ಡ ಯೋಜನೆ ಇದಾಗಿದೆ. ಈ ಯೋಜನೆಯಡಿ ಕುಟುಂಬವೊಂದಕ್ಕೆ ವಾರ್ಷಿಕ ತಲಾ 5 ಲಕ್ಷ ರೂ. ಮೌಲ್ಯದ ಆರೋಗ್ಯ ವಿಮೆ ಒದಗಿಸಲಾಗುತ್ತದೆ. ಗಂಭೀರ ರೋಗಗಳಿಂದ ಬಳಲುತ್ತಿರುವ ಜನರಿಗೆ ಯಾವುದೇ ಆಸ್ಪತ್ರೆಯಲ್ಲಾದರೂ ಉಚಿತ ಚಿಕಿತ್ಸೆ ದೊರೆಯಲಿದೆ ಎಂದು ಹೇಳಿದರು.

ಪ್ರಧಾನಮಂತ್ರಿ ಜನ ಆರೋಗ್ಯ ಅಭಿಯಾನವನ್ನು ಸೆಪ್ಟೆಂಬರ್ 25ರಿಂದ ಆರಂಭಿಸುತ್ತೇವೆ. ದೇಶದ ಎಲ್ಲ ಜನರು ಆರೋಗ್ಯವಾಗಿರಬೇಕೆಂಬುದು ಇದರ ಉದ್ದೇಶವಾಗಿದೆ ಎಂದು ಪ್ರಧಾನಿ ತಿಳಿಸಿದರು.
ದೇಶದ ಪ್ರಧಾನಿಯಾದ ನಂತರ ನಾಲ್ಕನೇ ಬಾರಿ ಸ್ವಾತಂತ್ರ್ಯೋತ್ಸವ ಭಾಷಣ ಮಾಡಿದ ಮೋದಿ ತಮ್ಮ ಸರ್ಕಾರದ ಸಾಧನೆಗಳು ಮತ್ತು ಕಾರ್ಯಕ್ರಮಗಳನ್ನು ವಿವರಿಸಿದರು. ತಮ್ಮ ನೇತೃತ್ವದ ಆಡಳಿತದಲ್ಲಿ ಭಾರತ ಪ್ರಗತಿ ಪಥದತ್ತ ಸದೃಢ ಹೆಜ್ಜೆ ಹಾಕುತ್ತಿದೆ ಎಂದು ಅವರು ಹೆಮ್ಮೆಯಿಂದ ಹೇಳಿಕೊಂಡರು.
ಭಾರತವು ವಿಶ್ವದ ಅತಿದೊಡ್ಡ ಆರ್ಥಿಕ ಸದೃಢ ದೇಶವಾಗಿ ಹೊರಹೊಮ್ಮಿದೆ. ಭಾರತವು ಎಲ್ಲ ಕ್ಷೇತ್ರಗಳಲ್ಲೂ ಕ್ಷಿಪ್ರವಾಗಿ ಪ್ರಗತಿ ಸಾಧಿಸುತ್ತಿದೆ. ಜನರ ಆಶೋತ್ತರಗಳು ಈಡೇರಲು ಕೇಂದ್ರ ಮತ್ತು ರಾಜ್ಯಗಳ ನಡುವೆ ಸಮನ್ವಯತೆ ಇರಬೇಕು ಎಂದು ಅವರು ಹೇಳಿದರು.

ಭಾರತವನ್ನು ಈ ಹಿಂದೆ ಅಭಿವೃದ್ದಿ ಕುಂಠಿತ ದೇಶವನ್ನಾಗಿ ನೋಡಲಾಗುತ್ತಿತು. ಆದರೆ, ಈಗ ನಮ್ಮ ದೇಶವು ಲಕ್ಷಾಂತರ ಕೋಟಿ ಡಾಲರ್‍ಗಳ ಹೂಡಿಕೆಯ ಪ್ರಮುಖ ತಾಣವಾಗಿದೆ. ಭಾರತವು ಈಗ ಸುಧಾರಣೆ, ಸಾಧನೆ ಮತ್ತು ಪರಿವರ್ತಿನೆಯ ಕೇಂದ್ರವಾಗಿದೆ. ದಾಖಲೆಯ ಆರ್ಥಿಕ ಬೆಳವಣಿಗೆಯತ್ತ ನಾವು ದಾಪುಗಾಲು ಹಾಕುತ್ತಿದ್ದೇವೆ ಎಂದು ಮೋದಿ ಬಣ್ಣಿಸಿದರು.

ನಾವು, ದೇಶವು ಮತ್ತಷ್ಟು ಪ್ರಗತಿ ಪಥದತ್ತ ಸಾಗಬೇಕು ಎಂಬುದನ್ನು ಬಯಸುತ್ತೇವೆ. ಇದನ್ನು ತಡೆಗಟ್ಟಲು ಯಾರಿಂದಲೂ ಸಾಧ್ಯವಾಗದು. ನಮ್ಮ ಸರ್ಕಾರವು ದೇಶದ ಎಲ್ಲ ಭಾಗಗಳು ಮತ್ತು ಸಮಾಜದ ಎಲ್ಲ ವರ್ಗಗಳ ಸರ್ವತೋಮುಖ ಅಭಿವೃದ್ದಿಗೆ ಕಂಕಣಬದ್ಧವಾಗಿದೆ ಎಂದು ಪ್ರಧಾನಿ ಒತ್ತಿ ಹೇಳಿದರು.
ಇತ್ತೀಚೆಗೆ ಮುಕ್ತಾಯಗೊಂಡ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಸಾಮಾಜಿಕ ನ್ಯಾಯದ ಧ್ಯೇಯೋದ್ಧೇಶಗಳನ್ನು ನಾವು ಈಡೇರಿಸಿದ್ದೇವೆ. ದೇಶದ ಎಲ್ಲ ಭಾಗಗಗಳು ಹಾಗೂ ಸರ್ವರಿಗೂ ಸಾಮಾಜಿಕ ನ್ಯಾಯ ಲಭಿಸಬೇಕೆಂಬುದು ಸರ್ಕಾರದ ಧ್ಯೇಯವಾಗಿದ್ದು, ಅದನ್ನು ನಾವು ಸಾಕಾರಗೊಳಿಸಿದ್ದೇವೆ ಎಂದು ಪ್ರಧಾನಿ ತಿಳಿಸಿದರು.

ಬೀಜದಿಂದ ಬಜಾರ್‍ವರೆಗೆ ಎಂಬ ಧೋರಣೆಯನ್ನು ಸಾಕಾರಗೊಳಿಸುವ ಮೂಲಕ ಕೃಷಿ ವಲಯದಲ್ಲಿ ನಾವು ಮಹತ್ವದ ಸುಧಾರಣೆಗಳನ್ನು ಮಾಡಿದ್ದೇವೆ. 2020ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವುದು ನಮ್ಮ ಹೆಗ್ಗುರಿ ಎಂದು ಮೋದಿ ಪುನರುಚ್ಚರಿಸಿದರು. ನುಸಿ ಪೀಡೆಯಂತೆ ದೇಶವನ್ನು ಹಾಳುಗೆಡವುವ ಕಾಳಧನ ಮತ್ತು ಭ್ರಷ್ಟಾಚಾರವನ್ನು ನಾವು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಈ ಪಿಡುಗುಗಳ ನಿವಾರಣೆಗೆ ನಾವು ಕೈಗೊಂಡಿರುವ ಕಠಿಣ ಕ್ರಮಗಳು ಉತ್ತಮ ಫಲಿತಾಂಶಗಳನ್ನು ನೀಡುತ್ತಿದೆ. ಸಮಾಜ ಕಲ್ಯಾಣ ಕಾರ್ಯಕ್ರಮಗಳ ಹಣವು ಅನ್ಯರ ಪಾಲಾಗುವುದನ್ನು ನಾವು ತಡೆಗಟ್ಟಿದ್ದೇವೆ. ದುಷ್ಟರು ಲೂಟಿ ಮಾಡುವಾಗ ನಾವು ಕಣ್ಮುಚ್ಚಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಇಂಥವರ ಕೈ ಸೇರುತ್ತಿದ್ದ 90,000 ಕೋಟಿ ರೂ.ಗಳನ್ನು ನಾವು ತಡೆಗಟ್ಟಿದ್ದೇವೆ ಎಂದು ಪ್ರಧಾನಿ ಹೇಳಿದರು.

ದೇಶದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಮತ್ತು ಹಿಂಸಾಚಾರ ಪ್ರಕರಣಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ವನಿತೆಯರು ಮತ್ತು ಮಕ್ಕಳ ರಕ್ಷಣೆಗಾಗಿ ನಾವು ಆದ್ಯತೆ ನೀಡುತ್ತಿದ್ದೇವೆ. ತ್ರಿವಳಿ ತಲಾಕ್ ನಿಷೇಧಕ್ಕೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವ ಮೂಲಕ ಮುಸ್ಲಿಂ ಮಹಿಳೆಯರ ಹಕ್ಕುಗಳನ್ನು ರಕ್ಷಿಸಿದ್ದೇವೆ. ಕಾನೂನು ಎಲ್ಲರಿಗಿಂತ ದೊಡ್ಡದು ಅದನ್ನು ನಾವೆಲ್ಲರೂ ಪಾಲಿಸಬೇಕು ಎಂದರು ಅವರು ತಿಳಿಸಿದರು.

ಮಹಿಳೆಯರನ್ನು ಪುರುಷರಂತೆ ಸಶಸ್ತ್ರಪಡೆಗಳಿಗೆ ನೇಮಕ ಮಾಡಿಕೊಳ್ಳಲಾಗುವುದು. ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಅವರು ನುಡಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಗಣನೀಯವಾಗಿ ಮಟ್ಟ ಹಾಕಲಾಗಿದೆ. ಅಲ್ಲಿನ ಜನರಿಗೆ ಬುಲೆಟ್‍ಗಿಂತ ಶಕ್ತಿಯುತವಾದ ಅಸ್ತ್ರ ಯಾವುದು ಎಂಬುದನ್ನು ನಾವು ತೋರಿಸಿಕೊಟ್ಟಿದ್ದೇವೆ. ದೇಶದ ವಿವಿಧ ಜಿಲ್ಲೆಗಳಲ್ಲಿ ಎಡ ಪಂಥೀಯ ಉಗ್ರರನ್ನು ಮಟ್ಟ ಹಾಕಿದ್ದೇವೆ. ಈ ಹಿಂದೆ 126 ಜಿಲ್ಲೆಗಳಲ್ಲಿ ಅವರ ಉಪಟಳವಿತ್ತು. ಈಗ ಅದು 90 ಜಿಲ್ಲೆಗಳಿಗೆ ಇಳಿದಿದೆ ಎಂದು ಅವರು ಹೇಳಿದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin