ಒಡಿಶಾದಲ್ಲಿ ಪ್ರಧಾನಿ ಮೋದಿ ವೈಮಾನಿಕ ಸಮೀಕ್ಷೆ, 1000 ಕೋಟಿ ಪರಿಹಾರ ಘೋಷಣೆ

ಈ ಸುದ್ದಿಯನ್ನು ಶೇರ್ ಮಾಡಿ

ಭುವನೇಶ್ವರ್, ಮೇ 6- ವಿನಾಶಕಾರಿ ಫೋನಿ ಚಂಡಮಾರುತದಿಂದ 35ಕ್ಕೂ ಹೆಚ್ಚು ಮಂದಿ ಬಲಿಯಾಗಿ ಅಪಾರ ಹಾನಿಗೆ ಒಳಗಾದ ಓಡಿಶಾದ ಪ್ರಕೃತಿ ವಿಕೋಪ ಸಂತ್ರಸ್ತ ಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ವೈಮಾನಿಕ ಸಮೀಕ್ಷೆ ನಡೆಸಿದರು. ಸಮೀಕ್ಷೆ ನಂತರ ಕರಾವಳಿ ರಾಜ್ಯಕ್ಕೆ 1000ಕೋಟಿ ರೂ. ಪರಿಹಾರಗಳನ್ನು ಘೋಷಿಸಿದರು.

ರಾಜಧಾನಿ ಭುವನೇಶ್ವರಕ್ಕೆ ಆಗಮಿಸಿದ ಪ್ರಧಾನಿ ಓಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಮತ್ತು ಉನ್ನತ ಅಧಿಕಾರಿಗಳೊಂದಿಗೆ ಫೋನಿ ಚಂಡಮಾರುತ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿ ವಾಸ್ತವ ಪರಸ್ಥಿತಿಯನ್ನು ಖುದ್ದಾಗಿ ಅವಲೋಕಿಸಿದರು.

ವೈಮಾನಿಕ ಸಮೀಕ್ಷೆ ವೇಳೆ ಪ್ರಧಾನಿ ಜತೆಯಲ್ಲಿದ್ದ ಪಟ್ನಾಯಕ್ ಮತ್ತು ಹಿರಿಯ ಅಧಿಕಾರಿಗಳು ನೈಸರ್ಗಿಕ ಪ್ರಕೋಪದ ತೀವ್ರತೆಯಿಂದ ಉಂಟಾದ ಆಸ್ತಿ-ಪಾಸ್ತಿ ನಷ್ಟ ಮತ್ತು ವ್ಯಾಪಕ ಬೆಳೆ ಹಾನಿ ಕುರಿತು ಮಾಹಿತಿ ಒದಗಿಸಿದರು.  ವೈಮಾನಿಕ ಸಮೀಕ್ಷೆ ನಡೆಸಿದ ನಂತರ ಪ್ರಧಾನಿ ಭುವನೇಶ್ವರದಲ್ಲಿ ಉನ್ನತ ಮಟ್ಟದ ಸಭೆಯಲ್ಲಿ ಪಾಲ್ಗೊಂಡರು.

ಮುಖ್ಯಮಂತ್ರಿ ಪಟ್ನಾಯಕ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗು ವಿವಿಧ ಇಲಾಖೆಯ ಉನ್ನತ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು. ಇದೇ ಸಂದರ್ಭದಲ್ಲಿ ಒಡಿಶಾ ಫೋನಿ ಚಂಡಮಾರುತದ ಹಾನಿಗಾಗಿ 1000ಕೋಟಿ ರೂ. ಪರಿಹಾರ ಘೋಷಣೆ ಮಾಡಿದರು.

ಕಳೆದ ಶುಕ್ರವಾರ ಬೆಳಿಗ್ಗೆ 8ಗಂಟೆಗೆ ದೇಗುಲ ನಗರಿ ಪುರಿಗೆ ಗಂಟೆಗೆ 180ಕಿ.ಮೀ ವೇಗದಲ್ಲಿ ಅಪ್ಪಳಿಸಿದ ಫೋನಿ ಸಾವು-ನೋವಿಗೆ ಕಾರಣವಾಗಿ ಭಾರೀ ಹಾನಿ ಉಂಟು ಮಾಡಿತ್ತು. ಉಪಗ್ರಹಗಳು ಮತ್ತು ಭಾರತೀಯ ಹವಾಮಾನ ಇಲಾಖೆಯ ಅಗತ್ಯ ಮುನ್ನೆಚ್ಚರಿಕೆ ಕ್ರಮವಾಗಿ ಭಾರೀ ಅನಾಹುತ ತಪ್ಪಿದಂತಾಗಿದೆ.  ಆದಾಗ್ಯೂ ಫೋನಿ ಆರ್ಭಟಕ್ಕೆ ಓಡಿಶಾದ 14ಜಿಲ್ಲೆಗಳ 52ನಗರ ಪಟ್ಟಣಗಳು ಮತ್ತು 10ಸಾವಿರಕ್ಕೂ ಹೆಚ್ಚು ಬಾಧಿತವಾಗಿವೆ.

Facebook Comments