ಮತಗಳಿಕೆಗೆ ರಾಷ್ಟ್ರೀಯ ಭದ್ರತೆ ಬಳಕೆ ವಿಪಕ್ಷಗಳ ಆರೋಪಕ್ಕೆ ಪ್ರಧಾನಿ ತಿರುಗೇಟು

ಈ ಸುದ್ದಿಯನ್ನು ಶೇರ್ ಮಾಡಿ

ದರ್ಬಾಂಗಾ (ಬಿಹಾರ), ಏ.25- ಮತಗಳನ್ನು ಗಳಿಸಲು ಬಿಜೆಪಿ ರಾಷ್ಟ್ರೀಯ ಭದ್ರತೆ ವಿಷಯವನ್ನು ವ್ಯಾಪಕವಾಗಿ ಬಳಸಿಕೊಳ್ಳುತ್ತಿದೆ ಎಂಬ ವಿರೋಧ ಪಕ್ಷಗಳ ಆರೋಪಗಳನ್ನು ಪ್ರಧಾನಿ ನರೇಂದ್ರ ಮೋದಿ ತಳ್ಳಿಹಾಕಿದ್ದಾರೆ.

ಬಿಹಾರದ ದರ್ಬಾಂಗಾ ನಗರದಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಿದ ಅವರು, ಮತಗಳಿಸುವುದಕ್ಕಾಗಿ ನಾವು ರಾಷ್ಟ್ರೀಯ ಭದ್ರತೆ ವಿಷಯ ಮುಂದಿಟ್ಟುಕೊಂಡಿಲ್ಲ. ಇದು ವಿಪಕ್ಷಗಳು ಮಾಡುತ್ತಿರುವ ಸುಳ್ಳು ಆರೋಪ ಎಂದರು.

ಮೂರು ಹಂತಗಳ ಚುನಾವಣೆ ನಂತರ ಬಿಜೆಪಿ ಪರ ಎದ್ದಿರುವ ಅಲೆಯಿಂದ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಕಂಗೆಟ್ಟು ನಿದ್ರಾಭಂಗಕ್ಕೆ ಒಳಗಾಗಿವೆ ಎಂದು ಮೋದಿ ಟೀಕಿಸಿದರು.

ಪಾಕಿಸ್ತಾನದ ಬಾಲಕೋಟ್‍ನ ಭಯೋತ್ಪಾದಕರ ನೆಲೆಗಳ ಮೇಲೆ ನಡೆಸಿದ ವಾಯುದಾಳಿ ಬಗ್ಗೆ ಪುರಾವೆ ಕೇಳುತ್ತಿದ್ದ ಪ್ರತಿಪಕ್ಷಗಳು ಈಗ ತೆಪ್ಪಗಾಗಿವೆ. ಇಲ್ಲಸಲ್ಲದ ಆರೋಪಗಳನ್ನು ಮಾಡಲು ಈಗ ವಿದ್ಯುನ್ಮಾನ ಮತಯಂತ್ರ (ಇವಿಎಂ)ಗಳ ವಿಷಯವನ್ನು ಮುಂದಿಟ್ಟುಕೊಂಡು ವೃಥಾ ಆಪಾದನೆಗಳನ್ನು ಮಾಡುತ್ತಿವೆ ಎಂದು ಟೀಕಿಸಿದರು.

ನಾವು ಭಯೋತ್ಪಾದಕರನ್ನು ಮಟ್ಟಹಾಕಿ ದೇಶದ ಬಡಜನರಿಗೆ ನೆರವಾಗಲು ಮುಂದಾಗಿದ್ದೇವೆ. ಇದು ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ಮೋದಿ ಬೇಸರದಿಂದ ನುಡಿದರು.

ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ನೇತೃತ್ವದ ಆರ್‍ಜೆಡಿ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ಈ ಹಿಂದೆ ಈ ಸರ್ಕಾರ ಅಧಿಕಾರವಿದ್ದಾಗ ಏನೆಲ್ಲ ಹಗರಣಗಳಾಗಿವೆ ಎಂಬುದು ಬಿಹಾರದ ಜನತೆಗೆ ಚೆನ್ನಾಗಿ ಗೊತ್ತಿದೆ ಎಂದು ಮೋದಿ ಹೇಳಿದರು.

ನಿತೀಶ್‍ಕುಮಾರ್ ನೇತೃತ್ವದ ಸರ್ಕಾರ ಅತ್ಯುತ್ತಮ ಕಾರ್ಯಗಳನ್ನು ಮಾಡುತ್ತ ಜನಮೆಚ್ಚುಗೆಗೆ ಪಾತ್ರವಾಗಿದೆ ಎಂದು ಹೇಳಿದರು.

Facebook Comments