ಫೋಕ್ಸೋ ಕಾಯ್ದೆಯಡಿ ಅತ್ಯಾಚಾರಿಗೆ ಜೀವಾವಧಿ, ಲೈಂಗಿಕ ಕಿರುಕುಳ ನೀಡಿದಾತನಿಗೆ 10 ವರ್ಷ ಸಜೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, – ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರವೆಸಗಿ ಇಬ್ಬರು ಕಾಮುಕರಿಗೆ ಫೋಕ್ಸೋ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 10 ವರ್ಷಗಳ ಕಠಿಣ ಶಿಕ್ಷೆ ಆದೇಶ ಹೊರಡಿಸಿದೆ.  ಮಾಗಡಿ ರಸ್ತೆ ನಿವಾಸಿ ಸುನೀಲ್‍ಕುಮಾರ್ ಸಿಂಗ್ (30) ಜೀವಾವಧಿ ಶಿಕ್ಷೆಗೊಳಗಾಗಿರುವ ಆರೋಪಿ. ಎನ್.ಆರ್.ನಗರ ನಿವಾಸಿ ರವಿ.ಎಂ 10 ವರ್ಷಗಳ ಕಠಿಣ ಶಿಕ್ಷೆಗೆ ಒಳಗಾದ ಆರೋಪಿ.

ಮೊದಲನೆ ಆರೋಪಿ ಸುನಿಲ್‍ಕುಮಾರ್ ಸಿಂಗ್ ಕಳೆದ 27.8.2017ರಂದು ಹೈಗ್ರೌಂಡ್ಸ್ ಪೊಲೀಸ್ ಠಾಣಾ ವ್ಯಾಪ್ತಿಯ ಕ್ರಸೆಂಟ್ ರಸ್ತೆಯಲ್ಲಿ ವಾಸವಾಗಿರುವ ಅಪ್ರಾಪ್ತ ಬಾಲಕಿ ಶಾಲೆಯಿಂದ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಸದರಿ ಆರೋಪಿ ಅಪಾರ್ಟ್‍ಮೆಂಟ್‍ನಲ್ಲಿ ನಿಮ್ಮ ತಾಯಿ ಇದ್ದಾರೆ. ಅವರಿಗೆ ಫೋನ್ ಕೊಟ್ಟು ಬಾ ಎಂದು ಒತ್ತಾಯಿಸಿದ್ದ.

ಆದರೆ ಅಪ್ರಾಪ್ತ ಬಾಲಕಿ ಒಪ್ಪದಿದ್ದಾಗ ಆಕೆಗೆ ಚಾಕು ತೋರಿಸಿ ನೀನು ಫೋನ್ ಕೊಟ್ಟು ಬರದಿದ್ದರೆ ಚುಚ್ಚಿ ಸಾಯಿಸುತ್ತೇನೆ ಎಂದು ಬೆದರಿಕೆಯೊಡ್ಡಿ ಆಕೆಯನ್ನು ಬಲವಂತವಾಗಿ ಟೆರೆಸ್ ಮೇಲೆ ಕರೆದುಕೊಂಡು ಹೋಗಿ ಲೈಂಗಿಕ ಕಿರುಕುಳ ನೀಡಿ ಬಲವಂತ ಅತ್ಯಾಚಾರ ನಡೆಸಿದ್ದ ಆರೋಪಕ್ಕೆ ಗುರಿಯಾಗಿದ್ದ.

ಅದೇ ರೀತಿ ಅಪ್ರಾಪ್ತ ಬಾಲಕಿಗೆ ಜೀವ ಬೆದರಿಕೆಯೊಡ್ಡಿದ್ದು ತನಿಖೆಯಿಂದ ದೃಢಪಟ್ಟಿರುವುದರಿಂದ ಫೋಕ್ಸೋ ಕಾಯ್ದೆಯಡಿ ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆಸಿದ್ದ ಆರೋಪದ ಮೇಲೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಅದೇ ರೀತಿ ವಿವೇಕ್‍ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರವಿ ಎಂಬಾತ ಪಾರ್ಕ್‍ನಲ್ಲಿ ಆಟವಾಡುತ್ತಿದ್ದ ಅಪ್ರಾಪ್ತ ಬಾಲಕಿಯನ್ನು ಮನೆಗೆ ಕರೆದುಕೊಂಡು ಹೋಗಿ ಆಸೆ ತೋರಿಸಿ ಖಾಲಿ ಇರುವ ವಸತಿಗೃಹಕ್ಕೆ ಕರೆದೊಯ್ದು ಬಲವಂತವಾಗಿ ಅತ್ಯಾಚಾರ ನಡೆಸಲು ಯತ್ನಿಸಿದಾಗ ರಕ್ಷಣೆಗಾಗಿ ಕೂಗಿಕೊಂಡ ಅಪ್ರಾಪ್ತೆಗೆ ಕಪಾಳಕ್ಕೆ ಹೊಡೆದು ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಸದರಿ ಆರೋಪಿಗೆ 10 ವರ್ಷಗಳ ಕಠಿಣ ಶಿಕ್ಷೆಗೆ ಗುರಿಯಾಗಿದ್ದಾನೆ.

50ನೆ ಹೆಚ್ಚುವರಿ ನಗರ ಸಿವಿಲ್ ಮತ್ತು ಸೆಷನ್ ನ್ಯಾಯಾಧೀಶರಾದ ಸುಶೀಲಾ ಅವರು ಈ ಎರಡು ಪ್ರಕರಣಗಳಲ್ಲಿ ಮಹತ್ವದ ತೀರ್ಪು ನೀಡಿದ್ದಾರೆ. ಫೋಕ್ಸೋ ವಿಶೇಷ ಸರ್ಕಾರಿ ಅಭಿಯೋಜಕರಾಗಿ ಕೆ.ಆರ್. ಸುಭಾಷ್ ವಾದ ಮಂಡಿಸಿದ್ದರು.

Facebook Comments