ಪೊಗರು ಚಿತ್ರದಲ್ಲಿ ಆಕ್ಷೇಪಾರ್ಥ ದೃಶ್ಯಗಳಿಗೆ ಕತ್ತರಿ ಪ್ರಯೋಗ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.24- ಪೊಗರು ಚಿತ್ರದಿಂದ ವಿವಾದಿತ ದೃಶ್ಯಗಳನ್ನು ತೆಗೆದುಹಾಕಲು ಚಿತ್ರತಂಡ ಒಪ್ಪಿದ್ದು, ನಿರ್ದೇಶಕ ನಂದಕಿಶೋರ್ ಕ್ಷಮೆ ಯಾಚಿಸಿದ್ದಾರೆ. ಬ್ರಾಹ್ಮಣ ಸಮುದಾಯದಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಸಭೆಯಲ್ಲಿ ನಿರ್ಮಾಪಕ ಬಿ.ಕೆ.ಗಂಗಾಧರ್ ಮತ್ತು ಚಿತ್ರನಿರ್ದೇಶಕ ನಂದಕಿಶೋರ್ ಅವರು ವಿವಾದಿತ ದೃಶ್ಯಗಳನ್ನು ತೆಗೆದುಹಾಕುವುದಾಗಿ ಭರವಸೆ ನೀಡಿದ್ದಾರೆ.

ಚಿತ್ರದಲ್ಲಿ 12 ರಿಂದ 13 ದೃಶ್ಯಗಳನ್ನು ತೆಗೆಯಬೇಕು ಎಂದು ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಎಸ್.ಸಚ್ಚಿದಾನಂದಮೂರ್ತಿ ಹಾಗೂ ಇತರ ಮುಖಂಡರು ಬೇಡಿಕೆ ಇಟ್ಟಿದ್ದರು. ಚಪ್ಪಲಿ ಕಾಲಿನಿಂದ ಜನಿವಾರ ಹಾಕಿರುವ, ಬ್ರಾಹ್ಮಣನನ್ನು ಒದೆಯುವ ದೃಶ್ಯಗಳು ಸೇರಿದಂತೆ ಅನೇಕ ಆಕ್ಷೇಪಾರ್ಹ ಸಂಗತಿಗಳನ್ನು ತೆಗೆಯುವುದಾಗಿ ಚಿತ್ರತಂಡ ಒಪ್ಪಿದೆ.

ನಿರ್ಮಾಪಕ ಬಿ.ಕೆ.ಗಂಗಾಧರ್ ಪರವಾಗಿ ಮಾತನಾಡಿದ ಸೂರಪ್ಪ ಬಾಬು ಅವರು ಚಿತ್ರ ಸೆನ್ಸಾರ್‍ಗೊಂಡು ಬಿಡುಗಡೆಯಾಗಿದೆ. ಒಮ್ಮೆ ಸೆನ್ಸಾರ್ ಮಂಡಳಿಯಿಂದ ಅಂಗೀಕಾರಗೊಂಡ ಬಳಿಕ ಅದರಲ್ಲಿ ಏನಾದರೂ ಬದಲಾವಣೆ ಮಾಡಬೇಕಾದರೆ ಮತ್ತೆ ಸೆನ್ಸಾರ್‍ನ ಅನುಮತಿ ಪಡೆಯಬೇಕು.

ಇದಕ್ಕೆ ಸುಮಾರು 48 ಗಂಟೆಗಳ ಕಾಲಾವಕಾಶ ಬೇಕಾಗುತ್ತದೆ. ಹಾಗಾಗಿ ನಿರ್ಮಾಪಕರು ಸಮಯ ಕೇಳಿದ್ದಾರೆ. ವಿವಾದಿತ ದೃಶ್ಯಗಳನ್ನು ತೆಗೆದುಹಾಕಲು ಚಿತ್ರತಂಡ ಒಪ್ಪಿದೆ. ಈ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದ್ದಾರೆ.ಸಂಧಾನ ಸಭೆಯಲ್ಲಿ ಚಿತ್ರರಂಗದ ಹಿರಿಯರಾದ ಸಾ.ರಾ.ಗೋವಿಂದು, ಜೈರಾಜ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಇದಕ್ಕೂ ಮುನ್ನ ಮಂತ್ರಾಲಯದ ಪೀಠಾಪತಿ ಶ್ರೀ ಸುಭುದೇಂದ್ರ ತೀರ್ಥ ಸ್ವಾಮೀಜಿ ಅವರು ಮಾಧ್ಯಮ ಪ್ರಕಟಣೆ ನೀಡಿ ಬ್ರಾಹ್ಮಣ ಸಮುದಾಯಕ್ಕೆ ನೋವುಂಟು ಮಾಡುವ ದೃಶ್ಯಗಳು ಖಂಡನಾರ್ಹ. ಹಿರಿತೆರೆ ಅಥವಾ ಕಿರಿತೆರೆ ಎಲ್ಲೇ ಆದರೂ ಈ ರೀತಿಯ ಸಮುದಾಯವನ್ನು ಅವಮಾನಿಸುವಂತಹ ದೃಶ್ಯಗಳು ಇರಬಾರದು. ಸೆನ್ಸಾರ್ ಮಂಡಳಿ ಸಾಮಾಜಿಕ ಕಳಕಳಿಯಿಂದ ಅತಿ ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕು ಎಂದಿದ್ದಾರೆ.

ತಾವು ಈ ಬಗ್ಗೆ ದೂರವಾಣಿಯಲ್ಲಿ ಮಾತನಾಡಿದ್ದು, ಚಲನಚಿತ್ರ ವಾಣಿಜ್ಯ ಮಂಡಳಿಯವರು ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆಯುವುದಾಗಿ ಹೇಳಿದ್ದಾರೆ ಮತ್ತು ಈವರೆಗೂ ಆಗಿರುವ ಅಚಾತುರ್ಯಕ್ಕೆ ಕ್ಷಮೆ ಕೇಳಿದ್ದಾರೆ. ಬ್ರಾಹ್ಮಣ ಸಮುದಾಯ ಯಾವುದೇ ಆವೇಶಕ್ಕೆ ಒಳಗಾಗದೆ ಶಾಂತಿ ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

Facebook Comments

Sri Raghav

Admin