ಕುಡಿಯುವ ನೀರಿನ ಟ್ಯಾಂಕ್‍ಗೆ ವಿಷ ಬೆರೆಸಿದ ಪಾಪಿಗಳು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಳ್ತಂಗಡಿ, ಡಿ.14- ತಾಲೂಕಿನ ಶಿಬಾಜೆಯ ಪೆರ್ಲ ಸರ್ಕಾರಿ ಶಾಲೆಯ ಬಾವಿಗೆ ವಿಷ ಹಾಕಿದ ಪ್ರಕರಣದ ಬೆನ್ನಲ್ಲೆ ಶಿಬಾಜೆ ಗ್ರಾಪಂನ ಕುಡಿಯುವ ನೀರಿನ ಟ್ಯಾಂಕ್‍ಗೂ ವಿಷ ಬೆರೆಸಿರುವ ಹೇಯ ಪ್ರಕರಣ ಬೆಳಕಿಗೆ ಬಂದಿದ್ದು, ಸ್ಥಳೀಯರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಪೆರ್ಲ ಸಮೀಪದ ಕಪಿಲಾ ನದಿ ದಡದಲ್ಲಿರುವ ಈ ಟ್ಯಾಂಕ್‍ನಿಂದ ಪಂಪ್ ಮೂಲಕ ನೀರು  ಮಾಡಿ ಪೆರ್ಲದಲ್ಲಿರುವ ಇನ್ನೊಂದು ಟ್ಯಾಂಕ್‍ಗೆ ತುಂಬಿಸಿ ಹಿ.ಪ್ರಾ.ಶಾಲೆ ಸೇರಿದಂತೆ ಸುತ್ತಲಿನ 70 ಮನೆಗಳಿಗೆ ನೀರು ಪೂರೈಸಲಾಗುತ್ತದೆ.

ನಿನ್ನೆ ಬೆಳಗ್ಗೆ ಟ್ಯಾಂಕ್‍ನಿಂದ ಪೂರೈಕೆಯಾದ ನೀರು ದುರ್ವಾಸನೆಯಿಂದ ಕೂಡಿರುವುದು ಪಂಪ್ ನಿರ್ವಾಹಕ ನಾರಾಯಣ ಪೂಜಾರಿ ಗಮನಕ್ಕೆ ಬಂದಿದ್ದು, ಪರಿಶೀಲಿಸಿದಾಗ ನೀರು ವಾಸನೆ ಬರುತ್ತಿದ್ದುದಲ್ಲದೆ ನೊಣಗಳು ಸತ್ತಿರುವುದು ಕಾಣಿಸಿದೆ. ತಕ್ಷಣ ಅವರು ಕಪಿಲಾ ನದಿ ದಡದಲ್ಲಿ ಪಂಪ್ ಅಳವಡಿಸಿದ ಟ್ಯಾಂಕ್ ಪರಿಶೀಲಿಸಿದಾಗ ಅದರೊಳಗೆ ಮೀನುಗಳು ಸತ್ತಿರುವುದು ಕಂಡುಬಂದಿದೆ. ಅಲ್ಲದೆ, ಟ್ಯಾಂಕ್‍ನ ನೀರು ಬಣ್ಣ ಕಳೆದುಕೊಂಡಿದ್ದು, ನೊಣಗಳು ಹಾರಾಡುತ್ತಿದ್ದವು.

ಟ್ಯಾಂಕ್‍ಗೆ ನೀರು ಪೂರೈಸುವ ಪೈಪನ್ನು ನದಿಯಿಂದ ಮೇಲೆತ್ತಿರುವುದು ಹಾಗೂ ನದಿ ದಂಡೆಯಲ್ಲಿ ಹೆಜ್ಜೆ ಗುರುತುಗಳು ಕಾಣಿಸಿವೆ. ಪೆರ್ಲ ಶಾಲಾ ಘಟನೆ ಬೆನ್ನಲ್ಲೇ ಈ ಪ್ರಕರಣ ನಡೆದಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.  ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ವೃತ್ತ ನಿರೀಕ್ಷಕ ಸಂದೇಶ್, ಧರ್ಮಸ್ಥಳ ಠಾಣಾ ಎಸ್‍ಐ ಓಡಿಯಪ್ಪಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಪ್ರತಿಭಟನೆ: ಪೆರ್ಲ ಸರ್ಕಾರಿ ಶಾಲೆಯ ಕುಡಿಯುವ ನೀರಿನ ಬಾವಿಗೆ ವಿಷ ಹಾಕಿದ ಪ್ರಕರಣದ ಆರೋಪಿಗಳನ್ನು ಶೀಘ್ರ ಪತ್ತೆ ಹಚ್ಚಿ ಬಂಧಿಸುವಂತೆ ಆಗ್ರಹಿಸಿ ಶಾಲೆಯ ವಿದ್ಯಾರ್ಥಿಗಳು ಮತ್ತು ಪೋಷಕರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಪೊಲೀಸರು, ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಿರುದ್ಧ ಧಿಕ್ಕಾರ ಕೂಗಿದರು. ಸ್ಥಳಕ್ಕೆ ಆಗಮಿಸಿದ ಬೆಳ್ತಂಗಡಿ ಉಪ ತಹಸೀಲ್ದಾರ್ ಪ್ರತೀಷ್ ಕುಮಾರ್ ಮತ್ತು ವೃತ್ತ ನಿರೀಕ್ಷಕ ಸಂದೇಶ್ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ ಆರೋಪಿಗಳ ಪತ್ತೆಗೆ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

Facebook Comments