ಕುಡಿದ ಮತ್ತಿನಲ್ಲಿ ಮಕ್ಕಳಿಗೆ ವಿಷವಿತ್ತು ಕೊಂದ ಪಾಪಿ ತಂದೆ..!

ಈ ಸುದ್ದಿಯನ್ನು ಶೇರ್ ಮಾಡಿ

ಕಲಬುರಗಿ, ಜ.3- ಪತ್ನಿ ಶೀಲ ಶಂಕಿಸಿ ಪತಿ ಕುಡಿದ ಮತ್ತಿನಲ್ಲಿ ತನ್ನ ಇಬ್ಬರು ಮಕ್ಕಳಿಗೆ ವಿಷ ಕುಡಿಸಿ ಕೊಲೆಗೈದಿರುವ ಹೃದಯ ವಿದ್ರಾವಕ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಭೈರಂಪಳ್ಳಿ ತಾಂಡಾದಲ್ಲಿ ನಡೆದಿದೆ. ರೋಹಿತ್(4) ಹಾಗೂ ಪರ್ವಿನ್(3) ತಂದೆಯ ಶಂಕೆಗೆ ಬಲಿಯಾದ ಮಕ್ಕಳು. ಆರೋಪಿಯನ್ನು ಸಂಜೀವ್ ಎಂದು ಗುರುತಿಸಲಾಗಿದೆ.

ಸಂಜೀವ್‍ಗೆ ತನ್ನ ಪತ್ನಿಯ ಶೀಲದ ಮೇಲೆ ಅನುಮಾನವಿತ್ತು. ಆದ್ದರಿಂದ ರೋಹಿತ್ ಹಾಗೂ ಪರ್ವಿನ್ ತನಗೆ ಹುಟ್ಟಿದ ಮಕ್ಕಳಲ್ಲ ಎಂದು ಸಂಜೀವ್ ಭಾವಿಸಿದ್ದನು.  ಇದೇ ಅನುಮಾನದಿಂದ ಗುರುವಾರ ಸಂಜೆ ಕಂಠ ಪೂರ್ತಿ ಕುಡಿದು ಮನೆಗೆ ಬಂದ ಸಂಜೀವ್, ಇಬ್ಬರು ಮಕ್ಕಳನ್ನು ಪತ್ನಿಗೆ ತಿಳಿಯದಂತೆ ಜಮೀನಿಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಇಬ್ಬರಿಗೂ ವಿಷ ಕುಡಿಸಿ ಕೊಲೆ ಮಾಡಿದ್ದಾನೆ.

ಅಲ್ಲದೆ, ತನ್ನನ್ನು ಪೊಲೀಸರು ಬಂಧಿಸುತ್ತಾರೆ ಎಂಬ ಭಯದಲ್ಲಿ ಮಕ್ಕಳಿಗೆ ವಿಷ ಕುಡಿಸಿ ಕೊಲೆ ಮಾಡಿದ ಬಳಿಕ ತಾನೂ ವಿಷ ಕುಡಿಯುವ ರೀತಿ ನಾಟಕವಾಡಿದ್ದಾನೆ. ಜಮೀನಿನಲ್ಲಿ ಸಂಜೀವ್ ನರಳಾಡುತ್ತಿದ್ದನ್ನು ನೋಡಿದ ಗ್ರಾಮಸ್ಥರು ತಕ್ಷಣ ಆತನನ್ನು ಆಸ್ಪತ್ರೆಗೆ ಸೇರಿಸಿದರು. ಆದರೆ ಮಕ್ಕಳು ಮಾತ್ರ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ನಂತರ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದಾಗ, ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದು ಈ ಸಂಬಂಧ ಮಿರಿಯಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಸ್ಪತ್ರೆಯಲ್ಲಿ ಸಂಜೀವ್ ಚಿಕಿತ್ಸೆ ಪಡೆಯುತ್ತಿದ್ದು, ಆತ ಚೇತರಿಸಿಕೊಂಡ ಬಳಿಕ ಪೊಲೀಸರು ಆತನನ್ನು ಬಂಧಿಸಲಿದ್ದಾರೆ ಎನ್ನಲಾಗಿದೆ. ಇತ್ತ ಸಂಜೀವ್ ಅನುಮಾನಕ್ಕೆ ಎರಡು ಮುಗ್ಧ ಜೀವಗಳು ಬಲಿಯಾಗಿದ್ದು, ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ.

Facebook Comments