ಮಕ್ಕಳ ಬ್ಲೂಫಿಲ್ಮ್ ವಿರುದ್ಧ ಬೃಹತ್ ಆಪರೇಷನ್, ವಿಶ್ವಾದ್ಯಂತ ನೂರಾರು ಜನರ ಸೆರೆ..!

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್, ಅ.17- ವಿವಿಧ ದೇಶಗಳಲ್ಲಿ ಮಕ್ಕಳ ನೀಲಿ ಚಿತ್ರಗಳ ತಯಾರಿಕೆಯಲ್ಲಿ ತೊಡಗಿದ್ದ ವ್ಯವಸ್ಥಿತ ಜಾಲಗಳನ್ನು ನಿಗ್ರಹಿಸುವ ಬೃಹತ್ ಚೈಲ್ಡ್-ಪೊರ್ನ್ ಕಾರ್ಯಾಚರಣೆ ನಡೆಸಲಾಗಿದ್ದು, ಈ ಸಂಬಂಧ ವಿಶ್ವಾದ್ಯಂತ ನೂರಾರು ಜನರನ್ನು ಬಂಧಿಸಲಾಗಿದೆ.  ಆರಂಭಿಕ ಹಂತದ ಕಾರ್ಯಾಚರಣೆ ವೇಳೆ ಅನೇಕ ಅಪ್ರಾಪ್ತರನ್ನು ಈ ಅಶ್ಲೀಲ ಚಿತ್ರ ತಯಾರಿಕೆಯ ಜಾಲದ ಕಪಿಮುಷ್ಟಿಯಿಂದ ಬಿಡುಗಡೆಗೊಳಿಸಲಾಗಿದೆ. ಅಲ್ಲದೇ ಇದಕ್ಕೆ ಸಂಬಂಧಿಸಿದ ಲಕ್ಷಾಂತರ ವಿಡಿಯೋಗಳನ್ನು ವಶಪಡಿಸಿಕೊಳ್ಳಲಾಗಿದೆ.

ಚೈಲ್ಡ್ ಪೊನೊಗ್ರಫಿ ನೆಟ್‍ವರ್ಕ್‍ಗಳು ಇದಕ್ಕಾಗಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸುತ್ತಿದ್ದು, ತನ್ನ ಗ್ರಾಹಕರ ಗುರುತನ್ನು ಗೌಪ್ಯವಾಗಿಡುವ ವ್ಯವಸ್ಥೆಯನ್ನೂ ಮಾಡಿತ್ತು. ಈ ಜಾಲಗಳನ್ನು ಈಗ ಧ್ವಂಸಗೊಳಿಸಿ ನೂರಾರು ಜನರನ್ನು ಬಂಧಿಸಲಾಗಿದೆ. ಅಲ್ಲದೇ ವಿಚಾರಣೆ ನಂತರ ಮತ್ತಷ್ಟು ಮಂದಿ ಸೆರೆಯಾಗುವ ಸಾಧ್ಯತೆ ಇದೆ.ಅಮೆರಿಕ, ಬ್ರಿಟನ್, ಫ್ರಾನ್ಸ್, ಸ್ಪೇನ್ ಮತ್ತು ದಕ್ಷಿಣ ಕೊರಿಯಾದ ತನಿಖಾಧಿಕಾರಿಗಳು ಇದು ಈವರೆಗೆ ನಡೆಸಿದ ಅತ್ಯಂತ ಬೃಹತ್ ಕಾರ್ಯಾಚರಣೆ ಎಂದು ಬಣ್ಣಿಸಿದ್ದಾರೆ.

ಹೈಟೆಕ್ ಜಾಲ: ಮಕ್ಕಳನ್ನು ನೀಲಿಚಿತ್ರಗಳ ತಯಾರಿಕೆಗೆ ಬಳಸುವ ಈ ಜಾಲವು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿ ವಿವಿಧ ದೇಶಗಳ ಗ್ರಾಹಕರನ್ನು ಹೊಂದಿರುವುದು ತನಿಖಾಧಿಕಾರಿಗಳನ್ನೇ ಬೆಚ್ಚಿ ಬೀಳಿಸಿದೆ.  ದಕ್ಷಿಣ ಕೊರಿಯಾ ಮೂಲದ ವೆಲ್‍ಕಂ ಟು ವೀಡಿಯೋ ಎಂಬ ವೆಬ್‍ಸೈಟ್ ಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಳ್ಳಲಾದ 2,50,000 ವಿಡಿಯೋಗಳನ್ನು ಮಾರಾಟ ಮಾಡಲು ಬಿಟ್‍ಕಾಯಿನ್ (ಕ್ರಿಪ್ರೋ ಕರೆನ್ಸಿ)ಗಳನ್ನು ಪಡೆದು ವ್ಯವಹಾರ ನಡೆಸಿರುವುದು ಪತ್ತೆಯಾಗಿದೆ.

ದಕ್ಷಿಣ ಕೊರಿಯಾದಲ್ಲಿ ನಡೆದ ಪ್ರಾಥಮಿಕ ಹಂತದ ಕಾರ್ಯಾಚರಣೆಯಲ್ಲಿ ಸೈಟ್ ಆಪರೇಟರ್ ಜಾಗ್ ವೂ ಸನ್ ಹಾಗೂ 12 ವಿವಿಧ ದೇಶಗಳ ಗ್ರಾಹಕರು ಮತ್ತು ಬಳಕೆದಾರರನ್ನು ಬಂಧಿಸಿದೆ. ಜಾಗ್ ದಕ್ಷಿಣ ಕೊರಿಯಾ ಅಲ್ಲದೆ, ಅಮೆರಿಕ, ಬ್ರಿಟನ್ ಮೊದಲಾದ ದೇಶಗಳಲ್ಲಿ ಮಕ್ಕಳ ಬ್ಲೂಫಿಲಂಗಳನ್ನು ವೀಕ್ಷಿಸುವ ಸಹಸ್ರಾರು ವಿಕೃತ ಗ್ರಾಹಕರನ್ನು ಹೊಂದಿರುವುದು ಪತ್ತೆಯಾಗಿದೆ.

ಅಮೆರಿಕ ಮತ್ತು ಇಂಗ್ಲೆಂಡ್‍ನಲ್ಲೂ ಈ ಜಾಲದಲ್ಲಿ ಸಕ್ರಿಯರಾಗಿದ್ದ ಮಂದಿಯನ್ನು ಬಂಧಿಸಲಾಗಿದ್ದು, ಕಾನೂನು ಕ್ರಮಕ್ಕೆ ಒಳಪಡಿಸಲಾಗಿದೆ. ನೂರಾರು ಮಕ್ಕಳು ಮತ್ತು ಪ್ರಾಯಪೂರ್ವದವರನ್ನು ಈ ಬ್ಲೂಫಿಲ್ಮ್‍ಗಳ ತಯಾರಿಕೆಗಾಗಿ ಬಳಸಿಕೊಂಡಿದ್ದು, ಅವರನ್ನು ಗುರುತಿಸುವ ಕಾರ್ಯ ಸಹ ಮುಂದುವರಿದಿದೆ ಎಂದು ವಿವಿಧ ರಾಜ್ಯಗಳ ತನಿಖಾಧಿಕಾರಿಗಳು ತಿಳಿಸಿದ್ದಾರೆ.

ವೆಲ್‍ಕಂ ಟು ವಿಡಿಯೋ ರೀತಿಯ ಲೆಕ್ಕವಿಲ್ಲದಷ್ಟು ವಿಡಿಯೋ ಸೈಟ್‍ಗಳು ಈ ದಂಧೆಯಲ್ಲಿ ಸಕ್ರಿಯವಾಗಿದ್ದು, ಅವೆಲ್ಲವುಗಳ ಬಗ್ಗೆ ಸಮಗ್ರ ಮಾಹಿತಿ ಕಲೆ ಹಾಕಲಾಗುತ್ತಿದೆ. ಮಕ್ಕಳ ನೀಲಿ ಚಿತ್ರಗಳ ತಯಾರಿಕೆ ಮತ್ತು ಅವುಗಳನ್ನು ಬಿತ್ತರಿಸುವ ಹೈಟೆಕ್ ದಂಧೆಯಲ್ಲಿ ಕೋಟ್ಯಂತರ ಡಾಲರ್‍ಗಳ ವಹಿವಾಟು ನಡೆದಿರುವುದು ತನಿಖೆಯಿಂದ ತಿಳಿದುಬಂದಿದೆ.

ಈ ವೆಬ್‍ಸೈಟ್ ಜಾಲಗಳು ಬಿಟ್‍ಕಾಯಿನ್(ಕ್ರಿಪ್ರೋ ಕಾಯಿನ್)ಗಳ ಮೂಲಕ ವ್ಯವಹಾರ ನಡೆಸುತ್ತಿದ್ದವು. ಹಣಕಾಸು ವಹಿವಾಟುಗಳ ವೇಳೆ ತಮ್ಮ ಗುರುತುಗಳನ್ನು ಬಚ್ಚಿಡಲು ಈ ಸೈಟ್‍ಗಳು ಬಳಕೆದಾರರಿಗೆ ಅವಕಾಶ ನೀಡುತ್ತಿದ್ದವು. ಇದಕ್ಕಾಗಿ ಕೋಡ್‍ವರ್ಡ್‍ಗಳು ಮತ್ತು ಅತ್ಯಾಧುನಿಕ ಅಪ್‍ಲೋಡ್ ಮತ್ತು ಡೌನ್‍ಲೋಡ್ ವ್ಯವಸ್ಥೆಗಳನ್ನು ಹೊಂದಿದ್ದವು.
ಆರಂಭಿಕ ಹಂತದ ಕಾರ್ಯಾಚರಣೆ ಬಳಿಕ ಕಲೆಹಾಕಲಾದ ಮಾಹಿತಿಗಳ ಆಧಾರದ ಮೇಲೆ ಮತ್ತಷ್ಟು ದಾಳಿಗಳು ಮುಂದುವರಿಯಲಿದ್ದು, ಇನ್ನಷ್ಟು ನೆಟ್‍ವರ್ಕ್‍ಗಳು ಬೆಳಕಿಗೆ ಬರಲಿವೆ.

Facebook Comments