ಕರ್ತವ್ಯದ ಜೊತೆ ಬಡವರ ಕಷ್ಟಕ್ಕೆ ಸ್ಪಂದಿಸಿದ ಕಾನ್‌ಸ್ಟೇಬಲ್‌ಗೆ ಆಯುಕ್ತರಿಂದ ಸನ್ಮಾನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.2- ಲಾಕ್‍ಡೌನ್‍ನಿಂದ ಸಂಕಷ್ಟಕ್ಕೊಳಗಾಗಿದ್ದ ನೂರಾರು ವಲಸೆ ಕಾರ್ಮಿಕರು ಹಾಗೂ ಬಡವರಿಗೆ ಸಹಾಯ ಮಾಡಿದ ಅಮೃತಹಳ್ಳಿ ಠಾಣೆಯ ಕಾನ್‌ಸ್ಟೇಬಲ್‌ ಚಂದ್ರಪ್ಪ ಚಿಕ್ಕಬಿದರಿ ಅವರ ಕಾರ್ಯವನ್ನು ಪ್ರಶಂಸಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್‍ರಾವ್ ಅವರು ನಗದು ಬಹುಮಾನ ನೀಡಿ ಗೌರವಿಸಿದ್ದಾರೆ.

ಚಂದ್ರಪ್ಪ ಚಿಕ್ಕಬಿದರಿ ಅವರು ಮೂಲತಃ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನವರಾಗಿದ್ದು, ಎಂಎ (ಇಂಗ್ಲಿಷ್) ಸ್ನಾತಕೋತ್ತರ ಪದವಿ ಮಾಡಿದ್ದಾರೆ. ವಿದೇಶದಿಂದ ಬಂದ ಕನ್ನಡಿಗರನ್ನು ಹೋಂ ಕ್ವಾರಂಟೈನ್ ಮಾಡಲಾಗಿದ್ದು, ಅವರನ್ನು ನೋಡಿಕೊಳ್ಳುವ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿದ್ದು, ಚಂದ್ರಪ್ಪ ಅವರು ಆ ಕೆಲಸ ನಿರ್ವಹಿಸುತ್ತಿದ್ದರು.

ತಮ್ಮದೇ ಆದ ಗ್ರೂಪ್ ಮಾಡಿಕೊಂಡಿದ್ದ ಚಂದ್ರಪ್ಪ ಅವರು ವಲಸೆ ಕಾರ್ಮಿಕರು, ಬಡವರಿಗೆ ನೆರವಾಗುವಂತೆ ಹೋಂ ಕ್ವಾರಂಟೈನ್‍ನಲ್ಲಿದ್ದವರಿಗೆ ಮನವಿ ಮಾಡಿದ್ದರು. ಉಳ್ಳವರು ಅವರ ಮನವಿಗೆ ಸ್ಪಂದಿಸಿದ್ದಾರೆ. ಎಲ್ಲರ ನೆರವಿನಲ್ಲಿ ಚಂದ್ರಪ್ಪ ಅವರು ಸುಮಾರು 900 ಮಂದಿಗೆ ಆಹಾರ ಧಾನ್ಯಗಳ ಕಿಟ್‍ಗಳನ್ನು ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಹಳಷ್ಟು ಮಂದಿ ತಮ್ಮ ಕರ್ತವ್ಯವನ್ನು ಮಾಡುವುದೇ ಹೆಚ್ಚು. ಅಂಥದ್ದರಲ್ಲಿ ಚಂದ್ರಪ್ಪ ಅವರು ತಮ್ಮ ಕರ್ತವ್ಯದ ಜತೆ ಜನರ ಸೇವೆಯನ್ನೂ ಕೂಡ ಮಾಡಿದ್ದಾರೆ. ಅದರಲ್ಲೂ ಸಂಕಷ್ಟದ ಸಂದರ್ಭದಲ್ಲಿ ಹಸಿವು ನೀಗಿಸುವ ಕೆಲಸವನ್ನು ಮಾಡಿರುವುದು ಪ್ರಶಂಸೆಗೆ ಪಾತ್ರವಾಗಿದೆ.

ಪೊಲೀಸರ ಕೆಲಸವೆಂದರೆ ಮೂಗು ಮುರಿಯುವವರೇ ಹೆಚ್ಚು. ಅಂಥದ್ದರಲ್ಲಿ ಮಾನವೀಯತೆಯ ಅಂತಃಕರಣದ ಇಂತಹ ಕೆಲಸವನ್ನು ಮಾಡಿ ಇಲಾಖೆಗೆ ಗೌರವ ತಂದಿರುವ ಚಂದ್ರಪ್ಪ ಅವರ ಈ ಕಾರ್ಯವನ್ನು ನಗರ ಪೊಲೀಸ್ ಆಯುಕ್ತ ಭಾಸ್ಕರ್‍ರಾವ್ ಅವರು ಗುರುತಿಸಿ ಮೆಚ್ಚುಗೆ ವ್ಯಕ್ತಪಡಿಸಿ ಠಾಣೆಯಲ್ಲಿ ನಗದು ಬಹುಮಾನ ನೀಡಿ ಸನ್ಮಾನಿಸಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸ್ ಹಿರಿಯ-ಕಿರಿಯ ಅಧಿಕಾರಿಗಳು ಹಾಜರಿದ್ದರು.

ಇತ್ತೀಚೆಗಷ್ಟೆ ಅರಮನೆ ಮೈದಾನದಲ್ಲಿ ಭಾರೀ ಮಳೆ ಸುರಿದು ಮೇಲ್ಚಾವಣಿ ಕುಸಿದು ಬಿದ್ದಾಗ ಶಿವಾಜಿನಗರ ಠಾಣೆ ಕಾನ್ಸ್‍ಟೆಬಲ್ ರವಿಕುಮಾರ್ ಅವರು ಪ್ರಾಣದ ಹಂಗು ತೊರೆದು ಸುಮಾರು 400 ಮಂದಿಯನ್ನು ರಕ್ಷಿಸಿದ್ದರು. ಆ ಸಂದರ್ಭದಲ್ಲೂ ಕೂಡ ನಗರ ಪೊಲೀಸ್ ಆಯುಕ್ತ ಭಾಸ್ಕರ್‍ರಾವ್ ಅವರು ರವಿಕುಮಾರ್ ಅವರನ್ನು ಶ್ಲಾಘಿಸಿ ಸನ್ಮಾನಿಸಿದ್ದನ್ನು ಸ್ಮರಿಸಬಹುದು.

Facebook Comments