ಕಾರಿನ ಚಕ್ರಗಳ ಗಾಳಿ ತೆಗೆದ ತಹಸೀಲ್ದಾರ್, ರಸ್ತೆಯಲ್ಲೇ ಧರಣಿ ಕೂತ ಕಾನ್‍ಸ್ಟೆಬಲ್..!

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ, ಆ.19- ಪೊಲೀಸ್ ಪೇದೆಯೊಬ್ಬರು ನ್ಯಾಯ ಬೇಕೆಂದು ನಡುರಸ್ತೆಯಲ್ಲಿ ಪ್ರತಿಭಟನೆ ಮಾಡಿರುವ ಘಟನೆ ಜಿಲ್ಲೆಯ ಸಕಲೇಶಪುರ ಪಟ್ಟಣದಲ್ಲಿ ನಡೆದಿದ್ದು, ಇದೀಗ ಈ ವೀಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.

ದಯಾನಂದ್ ಪ್ರತಿಭಟನೆಗೆ ಕುಳಿತ ಗ್ರಾಮಾಂತರ ಠಾಣೆಯ ಪೊಲಿಸ್ ಕಾನ್‍ಸ್ಟೆಬಲ್. ರಾಷ್ಟ್ರೀಯ ಹೆದ್ದಾರಿ 75ರ ಅಪೋಲೋ ಮೆಡಿಕಲ್‍ನ ಮುಂಭಾಗ ಕಾರು ನಿಲ್ಲಿಸಿ ಔಷ ತರಲು ಹೋಗಿದ್ದರು. ಈ ವೇಳೆ ರಸ್ತೆಯಲ್ಲಿ ಹಾದು ಹೋಗುವಾಗ ತಹಶೀಲ್ದಾರ್ ಮಂಜುನಾಥ್ ನೋ ಪಾರ್ಕಿಂಗ್ ಜಾಗದಲ್ಲಿ ವಾಹನ ನಿಲುಗಡೆಯನ್ನು ಗಮನಿಸಿದ್ದಾರೆ.

ತಮ್ಮ ಕಾರು ಚಾಲಕನಿಗೆ ಪೇದೆ ಕಾರಿನ ಚಕ್ರದ ಗಾಳಿ ಬಿಡಲು ಹೇಳಿದ್ದಾರೆ. ತಹಶೀಲ್ದಾರ್ ವಾಹನದ ಚಾಲಕ ಕಾರಿನ ನಾಲ್ಕು ಚಕ್ರದ ಗಾಳಿ ಬಿಟ್ಟಿದ್ದಾರೆ. ಈ ವೇಳೆ ಮೆಡಿಕಲ್ ಶಾಪ್‍ನಿಂದ ಪೇದೆ ಹೊರ ಬಂದಿದ್ದು ತಹಶೀಲ್ದಾರ್ ಮಂಜುನಾಥ್ ಜೊತೆ ಮಾತಿನ ಚಕಮಕಿ ನಡೆಸಿದ್ದಾರೆ. ನಂತರ ಸ್ಥಳದಿಂದ ತಹಶೀಲ್ದಾರ್ ಬೇರೆಡೆಗೆ ತೆರಳಿದ್ದಾರೆ.

ಈ ವೇಳೆ ಪೇದೆ ದಯಾನಂದ್ ಮಹಾತ್ಮ ಗಾಂೀಜಿಯವರ ಫೋಟೋ ಹಿಡಿದುಕೊಂಡು ಕಾರಿನ ಮುಂಭಾಗ ಕುಳಿತು ಪ್ರತಿಭಟನೆ ನಡೆಸಿದ್ದಾರೆ. ಸಕಲೇಶಪುರದಲ್ಲಿ ಮುಖ್ಯರಸ್ತೆ ಬಹಳ ಕಿರಿದಾದ ಜಾಗವಿದ್ದು ಕೇವಲ 2 ನಿಮಿಷದಲ್ಲಿ ಮೆಡಿಕಲ್ ಶಾಪ್ ನಿಂದ ಹೊರ ಬರುವಷ್ಟರಲ್ಲಿ ಕಾರಿನ ನಾಲ್ಕು ಚಕ್ರದ ಗಾಳಿ ತೆಗೆದಿದ್ದು ಸರಿಯಲ್ಲ.

ತಹಶೀಲ್ದಾರ್ ಬೇಕಿದಲ್ಲಿ ದಂಡ ಹಾಕಲಿ ಅಥವಾ ನೋಟಿಸ್ ನೀಡಲಿ, ಇಲ್ಲವೆ ಕಾರಿನ ಚಕ್ರಕ್ಕೆ ಬೀಗ ಜಡಿಯಬೇಕಿತ್ತು . ನನಗೆ ನ್ಯಾಯ ಬೇಕು ಎಂದು ಆಗ್ರಹಿಸಿ ಧರಣಿ ಕುಳಿತು ಆಕ್ರೋಶ ಹೊರ ಹಾಕಿದ್ದಾರೆ.

ಇದರಿಂದ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಕೆಲವು ಸಮಯ ವಾಹನಗಳ ಸಂಚಾರಕ್ಕೆ ಅಡ್ಡಿಯುಂಟಾಯಿತು ಅಲ್ಲದೆ ರಸ್ತೆಯಲ್ಲಿ ಹೋಗುವವರು ಪೇದೆಯ ಈ ವರಸೆ ಕಂಡು ಏನೆಂದು ಅರ್ಥವಾಗದೆ ಫೋಟೋ ತೆಗೆದುಕೊಳ್ಳಲು ಮುಗಿ ಬಿದ್ದರು.

ಕೆಲವರಿಗೆ ಪೇದೆಯ ಈ ವರಸೆ ಮೋಜು ತಂದರೆ ಪೊಲಿಸರು ಈತನ ಮನವೊಲಿಸಲು ಪರದಾಡಬೇಕಾಯಿತು. ಅಂತಿಮವಾಗಿ ನಗರ ಠಾಣೆ ಪಿಎಸ್‍ಐ ರಾಘವೇಂದ್ರ ಹಾಗೂ ಗ್ರಾಮಾಂತರ ಠಾಣೆಯ ಪಿಎಸ್‍ಐ ಚಂದ್ರಶೇಖರ್ ಬಂದು ಇತರ ಪೊಲಿಸರ ಸಹಾಯದಿಂದ ಪೇದೆಯನ್ನು ಎತ್ತಿಕೊಂಡು ನಗರ ಠಾಣೆಗೆ ಕರೆದೊಯ್ದರು. ಕಾರನ್ನು ಪಿಕಪ್ ಮೂಲಕ ತೆಗೆದುಕೊಂಡು ಹೋಗಲಾಯಿತು.

Facebook Comments

Sri Raghav

Admin