ಪೊಲೀಸ್ ಪೇದೆಗೆ ಕೊರೊನಾ : ಹನೂರಿನಲ್ಲಿ ಆತಂಕ, 18 ಮಂದಿ ಕ್ವಾರಂಟೈನ್‍ಗೆ

ಈ ಸುದ್ದಿಯನ್ನು ಶೇರ್ ಮಾಡಿ

ಹನೂರು, ಮೇ 5- ಲಾಕ್‍ಡೌನ್ ಸಂದರ್ಭದಲ್ಲಿ ಊರಿನಲ್ಲಿ ಕಾಲ ಕಳೆಯಲು ತೆರಳಿದ್ದ ಬೆಂಗಳೂರಿನ ಪೇದೆಯೊಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು ತಾಲ್ಲೂಕಿನಲ್ಲಿ ಆತಂಕ ಸೃಷ್ಟಿಸಿದೆ.

ಅನಾರೋಗ್ಯದ ಹಿನ್ನೆಲೆಯಲ್ಲಿ 40 ವರ್ಷದ ಪೇದೆ ಹುಟ್ಟೂರು ಬೆಳತ್ತೂರು ಗ್ರಾಮಕ್ಕೆ ಕುಟುಂಬ ಸಮೇತ ತೆರಳಿದ್ದರು. ಕಾಯಿಲೆ ವಾಪಸಾದ ನಂತರ ಬೆಂಗಳೂರಿಗೆ ಹಿಂದಿರುಗಿ ಚೆಕ್‍ಪೋಸ್ಟ್ ವೊಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಚೆಕ್‍ ಪೋಸ್ಟ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾರಣ ಆರೋಗ್ಯ ಇಲಾಖೆಯ ಅಧಿಕಾರಿಗಳು ಆತನ ಗಂಟಲು ದ್ರವ ಮತ್ತು ರಕ್ತದ ಪರೀಕ್ಷೆ ನಡೆಸಿದಾಗ ಪೇದೆಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿರುವುದು ಪತ್ತೆಯಾಗಿದೆ.

ಇತ್ತೀಚೆಗೆ ಹಾಟ್‍ಸ್ಪಾಟ್ ಪಾದರಾಯನಪುರದಲ್ಲಿ ಕರ್ತವ್ಯ ನಿರ್ವಹಿಸಿದ್ದ ಪೊಲೀಸರನ್ನು ತಪಾಸಣೆಗೊಳಪಡಿಸಲಾಗಿತ್ತು. ವರದಿಯಲ್ಲಿ ಎಲ್ಲಾ ಪೊಲೀಸರಿಗೂ ನೆಗೆಟಿವ್ ಬಂದಿದ್ದರಿಂದ ಪೊಲೀಸ್ ಇಲಾಖೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿತ್ತು.ಆದರೆ ಇದೀಗ ಚೆಕ್‍ ಪೋಸ್ಟ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೇದೆಗೆ ಸೋಂಕು ತಗುಲಿರುವುದು ಇಡೀ ಇಲಾಖೆಯನ್ನೇ ಬೆಚ್ಚಿ ಬೀಳಿಸಿದೆ.

ಆದರೆ ಇದೀಗ ಬೇಗೂರು ಠಾಣೆಯ ಪೇದೆಗೆ ಸೋಂಕು ತಗುಲಿರುವುದು ಪೊಲೀಸ್ ಇಲಾಖೆಯನ್ನು ಬೆಚ್ಚಿ ಬೀಳಿಸಿರುವುದಲ್ಲದೆ ಹನೂರು ತಾಲ್ಲೂಕಿನಲ್ಲೂ ಆತಂಕ ಸೃಷ್ಟಿಸಿದೆ. ಪೇದೆಯಿಂದ ಆತನ ಕುಟುಂಬ , ಸಂಬಂಧಿಕರು ಹಾಗೂ ಬೆಳತ್ತೂರು ಗ್ರಾಮಸ್ಥರಿಗೆ ಸೋಂಕು ತಗುಲಿರುವ ಸಾಧ್ಯತೆ ಇರುವುದರಿಂದ ತಾಲ್ಲೂಕು ಆಡಳಿತ ಪೇದೆಯೊಂದಿಗೆ ಸಂಪರ್ಕ ಇರಿಸಿಕೊಂಡಿರುವವರನ್ನು ತಪಾಸಣೆಗೆ ಒಳಪಡಿಸಲು ತೀರ್ಮಾನಿಸಲಾಗಿದೆ.

ಈ ಮಧ್ಯೆ ಬೆಳತ್ತೂರು ಗ್ರಾಮದ ಪಿಡಿಒ ರಾಮು ಕುಟುಂಬದ 18 ಮಂದಿಯನ್ನು ಮೂರು ತುರ್ತು ವಾಹನದಲ್ಲಿ ಚಾಮರಾಜ ನಗರಕ್ಕೆ ಕ್ವಾರಂಟೈನ್ ಸೆಂಟರ್‍ಗೆ ಕರೆದೊಯ್ದಿರುವುದು ಸ್ಥಳೀಯರ ನಿದ್ದೆಗೆಡಿಸಿದೆ.

ಕ್ಷೇತ್ರದ ಬಂಡಳ್ಳಿ ಜಿಪಂ ವ್ಯಾಪ್ತಿಯ ಶಾಗ್ಯ ಗ್ರಾಪಂನಲ್ಲಿ ಪಿಡಿಒ ಆಗಿ ಸೇವೆ ಸಲ್ಲಿಸುತ್ತಿರುವ ರಾಮು ರವರ ತಂಗಿಯ ಪತಿ ಸೋಂಕು ಪೀಡಿತ ಪೇದೆ ಎಂದು ತಿಳಿದು ಬಂದಿರುತ್ತದೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಚಾಮರಾಜ ನಗರ ಜಿಲ್ಲಾಡಳಿತ ರಾತ್ರೋ ರಾತ್ರಿಬೆಳತ್ತೂರು ಗ್ರಾಮದಲ್ಲಿ ವಾಸವಾಗಿದ್ದ ಪಿಡಿಒ ರಾಮು ಸಂಸಾರ ಸೇರಿದಂತೆ ಸಂಬಂಧಿಕರು ಹಾಗೂ ಆತನ ಒಡನಾಡಿಗಳಾದ ನಾಲ್ಕು ಮಕ್ಕಳು ಸೇರಿ 18 ಮಂದಿಯನ್ನು ಮೂರು ಆಂಬ್ಯುಲೆನ್ಸ್‍ನಲ್ಲಿ ಕ್ವಾರೆಂಟೈನ್‍ಗೆ ಕರೆದೊಯ್ಯಲಾಗಿದೆ.

ಆತನ ಜತೆ ಪ್ರಾಥಮಿಕ ಸಂಪರ್ಕವಿರಿಸಿಕೊಂಡಿದ್ದವರನ್ನು ಪತ್ತೆ ಹಚ್ಚಿ ಕ್ವಾರಂಟೈನ್‍ಗೆ ಒಳಪಡಿಸಲು ತೀರ್ಮಾನಿಸುವುದರ ಜತೆಗೆ ಆತ ಎಲ್ಲೆಲ್ಲಿ ಸಂಚರಿಸಿದ್ದ ಎಂಬ ಬಗ್ಗೆಯೂ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಸೋಂಕಿತ ಪೇದೆ ಚಾಮರಾಜನಗರಕ್ಕೂ ಭೇಟಿ ನೀಡಿ ಹಲವು ಸ್ನೇಹಿತರನ್ನು ಸಂಪರ್ಕಿಸಿದ್ದ ಎನ್ನಲಾಗಿದೆ. ಇದರ ಜತೆಗೆ ಪೆಟ್ರೋಲ್ ಬಂಕ್, ಮದ್ಯದಂಗಡಿಗೂ ತೆರಳಿರುವುದರಿಂದ ಚಾಮರಾಜ ನಗರ ಜನತೆಯನ್ನು ಆತಂಕಕ್ಕೆ ಒಳಪಡಿಸಿದೆ. ಪೇದೆಗೆ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಆತನ ಜತೆ ಕರ್ತವ್ಯ ನಿರ್ವಹಿಸುತ್ತಿದ್ದ 21 ಮಂದಿ ಪೊಲೀಸರನ್ನು ಕ್ವಾರಂಟೈನ್‍ಗೆ ಒಳಪಡಿಸಲು ಆರೋಗ್ಯ ಇಲಾಖೆ ತೀರ್ಮಾನಿಸಿದೆ.

Facebook Comments

Sri Raghav

Admin