ಮತ್ತೆ ಘರ್ಜಿಸಿತು ಪೊಲೀಸರ ರಿವಾಲ್ವರ್, ಮತ್ತೊಬ್ಬ ರೌಡಿಗೆ ಗುಂಡೇಟು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.25- ಸಿಲಿಕಾನ್ ಸಿಟಿಯಲ್ಲಿ ಪೊಲೀಸರ ರಿವಾಲ್ವರ್ ಸದ್ದು ಮಾಡುತ್ತಲೇ ಇದ್ದು, ಅಪರಾಧ ಕೃತ್ಯಗಳಲ್ಲಿ ತೊಡಗುತ್ತಿರುವ ರೌಡಿಗಳು, ಆರೋಪಿಗಳಿಗೆ ಗುಂಡಿನ ರುಚಿ ತೋರಿಸುತ್ತಿದ್ದಾರೆ.

ಕಳೆದ ರಾತ್ರಿ ಬಾಣಸವಾಡಿ ಠಾಣೆ ಇನ್‍ಸ್ಪೆಕ್ಟರ್ ಹಾರಿಸಿದ ಗುಂಡೇಟಿನಿಂದ ರೌಡಿ ಅಶೋಕ್(22) ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಬಾಗಲೂರು ನಿವಾಸಿ ಅಶೋಕ್‍ನ ಹೆಸರು ಕೆಜಿಹಳ್ಳಿ ಪೊಲೀಸ್ ಠಾಣೆಯ ರೌಡಿಪಟ್ಟಿಯಲ್ಲಿದೆ. 2016ರಲ್ಲಿ ಪೊಲೀಸರ ಮೇಲೆ ಹಾಕಿಂಗ್ ಸ್ಟಿಕ್‍ನಿಂದ ಹಲ್ಲೆ ಮಾಡಿ ಜೈಲು ಸೇರಿದ್ದ.

ಜೈಲಿನಿಂದ ಬಂದ ನಂತರ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ. ಮೊನ್ನೆ ಲಿಂಗರಾಜಪುರದಲ್ಲಿ ವಾಸವಾಗಿದ್ದ ಅಸ್ಸಾಂ ಯುವಕರ ಮನೆಗೆ ತನ್ನ ಇಬ್ಬರು ಸ್ನೇಹಿತರ ಜೊತೆ ನುಗ್ಗಿ ಅವರುಗಳನ್ನು ಬೆದರಿಸಿ ಹಣ ಹಾಗೂ ಮೊಬೈಲ್‍ನ್ನು ದೋಚಿ ಪರಾರಿಯಾಗಿದ್ದ.

ಈ ಬಗ್ಗೆ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಶೋಕನಿಗಾಗಿ ಬಾಣಸವಾಡಿ ಪೊಲೀಸರು ವ್ಯಾಪಕ ಶೋಧ ನಡೆಸುತ್ತಿದ್ದರು. ಕಳೆದ ರಾತ್ರಿ 11.30 ಸಮಯದಲ್ಲಿ ಅಶೋಕ್ ಪುಲಿಕೇಶಿನಗರದಲ್ಲಿ ಬೈಕ್‍ನಲ್ಲಿ ಹೋಗುತ್ತಿದ್ದಾನೆ ಎಂದು ಖಚಿತ ಮಾಹಿತಿ ಬಾಣಸವಾಡಿ ಪೊಲೀಸ್ ಠಾಣೆ ಇನ್‍ಸ್ಪೆಕ್ಟರ್ ವಿರೂಪಾಕ್ಷ ಸ್ವಾಮಿ ಅವರಿಗೆ ಬಂದಿದೆ.

ಆಗ ಅವರು ಮತ್ತು ಅವರ ಸಿಬ್ಬಂದಿ ಆತನನ್ನು ಬಂಧಿಸಲು ತೆರಳಿದ್ದಾರೆ.
ಬೈಕ್‍ನಲ್ಲಿ ಹೋಗುತ್ತಿದ್ದ ಆರೋಪಿಯನ್ನು ಪೊಲೀಸರು ಜೀಪ್‍ನಲ್ಲಿ ಬೆನ್ನಟ್ಟುತ್ತಿದ್ದರು. ರಾಮಮೂರ್ತಿನಗರ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಕಸ್ತೂರಿನಗರ 3ನೇ ಕ್ರಾಸ್‍ನ ತಿರುವಿನಲ್ಲಿ ಅತಿವೇಗವಾಗಿ ಹೋಗುತ್ತಿದ್ದಾಗ ಜಾರಿಬಿದ್ದಿದ್ದಾನೆ.

ತಕ್ಷಣ ಕಾನ್‍ಸ್ಟೇಬಲ್ ಸೌದಾಗರ್ ಆತನನ್ನು ಹಿಡಿಯಲು ಹೋದಾಗ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಆಗ ಇನ್‍ಸ್ಪೆಕ್ಟರ್ ವಿರೂಪಾಕ್ಷಸ್ವಾಮಿ ಅವರು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಎಚ್ಚರಿಕೆ ನೀಡಿದ್ದಾರೆ.

ಅವರ ಎಚ್ಚರಿಕೆಯನ್ನು ಲೆಕ್ಕಿಸದೆ ಆರೋಪಿ ದಾಳಿಗೆ ಮುಂದಾದಾಗ ಆತ್ಮರಕ್ಷಣೆಗಾಗಿ ಅವರು ಹಾರಿಸಿದ ಗುಂಡು ಆತನ ಬಲಗಾಲಿಗೆ ತಗುಲಿ ಕುಸಿದುಬಿದ್ದಿದ್ದಾನೆ. ತಕ್ಷಣ ಸುತ್ತುವರಿದ ಪೊಲೀಸರು ಆತನನ್ನು ಚಿಕಿತ್ಸೆಗಾಗಿ ಬೌರಿಂಗ್ ಆಸ್ಪತ್ರೆಗೆ ಸೇರಿಸಿದ್ದಾರೆ.

ಗಾಯಗೊಂಡಿರುವ ಪೊಲೀಸ್ ಕಾನ್‍ಸ್ಟೇಬಲ್ ಅವರನ್ನು ಸಹ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೊನ್ನೆ ಸಿಸಿಬಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ರೌಡಿಶೀಟರ್ ಅಮೀರ್‍ಖಾನ್ ಅಲಿಯಾಸ್ ಪಪ್ಪು (34) ಗುಂಡೇಟಿನಿಂದ ಗಾಯಗೊಂಡಿದ್ದು, ನಿನ್ನೆ ಬ್ಯಾಟರಾಯನಪುರ ಪೊಲೀಸರು ನಡೆಸಿದ ಕಾರ್ಯಾಚರಣೆ ಸಂದರ್ಭದಲ್ಲಿ ಸುಲಿಗೆ, ದರೋಡೆ ಪ್ರಕರಣಗಳ ಆರೋಪಿ ರಾಹುಲ್ ಅಲಿಯಾಸ್ ಗೋವಿಂದು (22) ಗುಂಡೇಟಿನಿಂದ ಗಾಯಗೊಂಡಿದ್ದಾನೆ.

Facebook Comments

Sri Raghav

Admin