ಬಂಧನಕ್ಕೆ ತೆರಳಿದಾಗ ಪೊಲೀಸರ ಮೇಲೆ ಹಲ್ಲೆ ನಡೆಸಿದ ಕೊಲೆ ಆರೋಪಿಗಳ ಮೇಲೆ ಫೈರಿಂಗ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮೇ 4-ರೌಡಿ ಬಿಜ್ಜು ಕೊಲೆಗೆ ಸಂಬಂಧಿಸಿದಂತೆ ಕೆಜಿಹಳ್ಳಿ ಠಾಣೆ ಪೊಲೀಸರು ಇಂದು ಮುಂಜಾನೆ ಆರೋಪಿಗಳನ್ನು ಬಂಧಿಸಲು ತೆರಳಿದ್ದಾಗ ಪೊಲೀಸರ ಮೇಲೆಯೇ ಖಾರದ ಪುಡಿ ಎರಚಿ ಹಲ್ಲೆ ನಡೆಸಿದ ಆರೋಪಿ ಪೊಲೀಸರ ಗುಂಡೇಟಿನಿಂದ ಗಾಯಗೊಂಡಿದ್ದಾರೆ.

ಆಂಡ್ರೊ ಅಲಿಯಾಸ್ ಸಂಜಯ್(19) vಲೀಸರ ಗುಂಡೇಟಿಗೆ ಗಾಯಗೊಂಡು ಅಂಬೇಡ್ಕರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆರೋಪಿ. ಈತ ಹಳೆ ಬಾಗಲೂರು ಲೇಔಟ್ ನಿವಾಸಿ. ಲಾಕ್‍ಡೌನ್ ನಡುವೆಯೂ ಹಳೆ ದ್ವೇಷದ ಹಿನ್ನೆಲೆಯಲ್ಲಿ ಮೊನ್ನೆ ರಾತ್ರಿ 7.20ರ ಸುಮಾರಿನಲ್ಲಿ ಬಾಗಲೂರು ಲೇಔಟ್‍ನಲ್ಲಿ ರೌಡಿ ಮರಿಯಾ ದಿಲೀಪ್ ಅಲಿಯಾಸ್ ಬಿಜ್ಜು(39) ಎಂಬಾತನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದರು.

ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಕೆಜಿಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆರೋಪಿಗಳ ಪತ್ತೆಗೆ ಪೂರ್ವ ವಿಭಾಗದ ಡಿಸಿಪಿ ಡಾ.ಶರಣಪ್ಪ ಅವರು ತಂಡವನ್ನು ರಚಿಸಿದ್ದರು.

ಈ ತಂಡ ಪ್ರಕರಣದ ಆರೋಪಿ ವೇಲುನನ್ನು ಬಂಧಿಸಿ ತನಿಖೆ ಮುಂದುವರೆಸಿದ್ದರು. ಪ್ರಕರಣದ ಪ್ರಮುಖ ಆರೋಪಿಗಳಾದ ಸಂಜಯ್ ಅಲಿಯಾಸ್ ಆಂಡ್ರೋ, ಸ್ಟಾಲಿನ್, ಶಶಿ, ಆಗಸ್ಟೀನ್ ಲಿಡ್ಕರ್ ಕಾಲೋನಿಯಲ್ಲಿರುವ ಬಗ್ಗೆ ಮಾಹಿತಿ ಲಭಿಸಿದೆ.

ತಕ್ಷಣ ಕೆಜಿಹಳ್ಳಿ ಠಾಣೆ ಇನ್‍ಸ್ಪೆಕ್ಟರ್ ಅಜಯ್ ಸಾರಥಿ, ಪಿ.ಎಸ್.ರಾಜೇಶ್, ಹೆಡ್‍ಕಾನ್‍ಸ್ಟೆಬಲ್‍ಗಳಾದ ಶ್ರೀನಿವಾಸಮೂರ್ತಿ, ಸಿದ್ದಲಿಂಗಸ್ವಾಮಿ ಅವರನ್ನೊಳಗೊಂಡ ತಂಡ ಆರೋಪಿಗಳನ್ನು ಬಂಧಿಸಲು ಬೆಳಗ್ಗೆ 6 ಗಂಟೆ ಸುಮಾರಿನಲ್ಲಿ ಸ್ಥಳಕ್ಕೆ ತೆರೆಳಿದ್ದಾರೆ.

ಪೊಲೀಸರನ್ನು ಗಮನಿಸಿದ ಆರೋಪಿಗಳು ತಕ್ಷಣ ಸಿಬ್ಬಂದಿ ಮೇಲೆ ಖಾರದಪುಡಿ ಎರಚಿ ಚಾಕುಗಳಿಂದ ಹೊಡೆಯಲು ಮುಂದಾದರು. ತಕ್ಷಣ ಇನ್‍ಸ್ಪೆಕ್ಟರ್ ಅಜಯ್ ಸಾರಥಿ ಅವರು ಗಾಳಿಯಲ್ಲಿ ಗುಂಡು ಹಾರಿಸಿ ಆರೋಪಿಗಳಿಗೆ ಶರಣಾಗಲು ಸೂಚಿಸಿದ್ದಾರೆ.

ಪೆÇಲೀಸರ ಮಾತನ್ನು ಲೆಕ್ಕಿಸದೆ ಅವರ ಮೇಲೆ ಹಲ್ಲೆಗೆ ಮುಂದಾದಾಗ ಆತ್ಮರಕ್ಷಣೆಗಾಗಿ ಇನ್‍ಸ್ಪೆಕ್ಟರ್ ಹಾರಿಸಿದ ಗುಂಡು ಆಂಡ್ರೋ ಎಡಗಾಲಿಗೆ ತಗುಲಿದೆ. ಈ ಸಂದರ್ಭದಲ್ಲಿ ಗುಂಡೇಟಿನಿಂದ ಕುಸಿದುಬಿದ್ದ ಆರೋಪಿಯನ್ನು ಸುತ್ತುವರಿದು ವಶಕ್ಕೆ ಪಡೆದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಾರ್ಯಾಚರಣೆ ಸಂದರ್ಭದಲ್ಲಿ ಉಳಿದ ಮೂವರು ಆರೋಪಿಗಳು ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ.

ಆರೋಪಿ ಆಂಡ್ರೋನನ್ನು ವಿಚಾರಣೆ ಮಾಡಿದಾಗ ತನ್ನ ದೊಡ್ಡಪ್ಪ ಡ್ಯಾನಿಯಲ್‍ನನ್ನು ಮರಿಯಾ ದಿಲೀಪ್ ಅಲಿಯಾಸ್ ಬಿಜ್ಜು ಮತ್ತು ಆತನ ಸಹೋದರರು ಸೇರಿ ಕೊಲೆ ಮಾಡಿದ್ದರು. ಈ ದ್ವೇಷದಿಂದ ಬಿಜ್ಜುನ ಕೊಲೆಗೆ ಹಲವು ದಿನಗಳಿಂದ ಸಂಚು ರೂಪಿಸಿದ್ದೆವು. ಶನಿವಾರ ಸಂಜೆ ಸಹಚರರೊಂದಿಗೆ ಸೇರಿ ಕೊಲೆ ಮಾಡಿದ್ದಾಗಿ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ.

ಕಾರ್ಯಾಚರಣೆ ವೇಳೆ ಗಾಯಗೊಂಡಿರುವ ಹೆಡ್‍ಕಾನ್‍ಸ್ಟೆಬಲ್ ಶ್ರೀನಿವಾಸ್ ಮೂರ್ತಿ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ನಡೆದ ಎರಡನೇ ದಿನದಲ್ಲಿ ಪ್ರಮುಖ ಆರೋಪಿಯನ್ನು ಪತ್ತೆ ಮಾಡುವಲ್ಲಿ ಪೂರ್ವ ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿ ಯಶಸ್ವಿಯಾಗಿದ್ದು, ಆರೋಪಿಯಿಂದ ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

Facebook Comments

Sri Raghav

Admin