ಬೆಂಗಳೂರಲ್ಲಿ ಮತ್ತೆ ಸದ್ದು ಮಾಡಿದ ಪೊಲೀಸರ ಪಿಸ್ತೂಲ್, ರೌಡಿ ಕಾಲಿಗೆ ಗುಂಡೇಟು..!
ಬೆಂಗಳೂರು, ಜೂ.3- ಲಾಕ್ಡೌನ್ ನಂತರ ಮತ್ತೆ ಪೊಲೀಸರ ಪಿಸ್ತೂಲು ಸದ್ದು ಮಾಡಿದೆ. ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ ರೌಡಿ ಕಾಲಿಗೆ ಗುಂಡು ಹಾರಿಸಿ ಸೆರೆಹಿಡಿಯುವಲ್ಲಿ ಅಮೃತಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಅಮೃತಹಳ್ಳಿ ಮತ್ತಿತರ ಪ್ರದೇಶಗಳಲ್ಲಿ ಕೊಲೆ ಯತ್ನ, ಹಲ್ಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮುನಿಕೃಷ್ಣ ಅಲಿಯಾಸ್ ಕಪ್ಪೆ (27) ಸೆರೆಸಿಕ್ಕ ರೌಡಿ ಶೀಟರ್. ಲಾಕ್ಡೌನ್ ಮುಗಿದು ಮದ್ಯದಂಗಡಿ ಓಪನ್ ಆದ ಸಂದರ್ಭದಲ್ಲಿ ಯಶವಂತ್ ಎಂಬ ವ್ಯಕ್ತಿಗೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದ ಕಪ್ಪೆ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದ.
ಇಂದು ಬೆಳಗಿನ ಜಾವ 5.15ರ ಸಮಯದಲ್ಲಿ ಕಪ್ಪೆ ಮತ್ತು ಆತನ ಸಹಚರ ಮಿಟ್ಟಗಾನಹಳ್ಳಿ ಕ್ವಾರೆ ಸಮೀಪ ಇದ್ದಾರೆ ಎಂಬ ಮಾಹಿತಿ ಪಡೆದ ಅಮೃತಹಳ್ಳಿ ಪೊಲೀಸರು ಅವರ ಬಂಧನಕ್ಕೆ ಕಾರ್ಯಾಚರಣೆ ಕೈಗೊಂಡಿದ್ದರು.
ಬಾಗಲೂರು ಪೊಲೀಸ್ ಠಾಣೆ ವ್ಯಾಪ್ತಿಯ ಮಿಟ್ಟಗಾನಹಳ್ಳಿ ಮುಖ್ಯರಸ್ತೆ ಸಮೀಪದ ಪಾಳು ಮನೆಯೊಂದರ ಬಳಿ ಸ್ಕೂಟಿ ನಿಂತಿರುವುದು ಕಂಡುಬಂದು ಪೊಲೀಸರು ಸುತ್ತಮುತ್ತಲ ಪ್ರದೇಶದಲ್ಲಿ ಹುಡುಕಾಡುತ್ತಿದ್ದಾಗ ಪಾಳು ಬಿದ್ದ ಮನೆಯಿಂದ ಒಬ್ಬ ಓಡಿ ಪರಾರಿಯಾದ.
ತಕ್ಷಣ ಪೊಲೀಸರು ಮನೆಯನ್ನು ಸುತ್ತುವರಿದು ಮುನಿಕೃಷ್ಣ ಅಲಿಯಾಸ್ ಕಪ್ಪೆಯನ್ನು ಬಂಸಲು ಮುಂದಾದರು. ಆಗ ಕಪ್ಪೆ ತನ್ನ ಬಳಿ ಇದ್ದ ಡ್ರ್ಯಾಗರ್ನಿಂದ ಹೆಡ್ಕಾನ್ಸ್ಟೆಬಲ್ ನಂದೀಶ್ ಅವರಿಗೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ.
ಈ ಸಮಯದಲ್ಲಿ ಇನ್ಸ್ಪೆಕ್ಟರ್ ಅರುಣ್ಕುಮಾರ್ ಅವರು ಶರಣಾಗುವಂತೆ ಸೂಚಿಸಿದರೂ ಅವರ ಮೇಲೂ ಹಲ್ಲೆ ನಡೆಸಲು ಮುಂದಾದಾಗ ಆತ್ಮರಕ್ಷಣೆಗಾಗಿ ಹಾರಿಸಿದ ಗುಂಡು ಆತನ ಬಲಗಾಲಿಗೆ ತಗುಲಿ ಕುಸಿದು ಬಿದ್ದ.
ಗುಂಡೇಟಿನಿಂದ ಗಾಯಗೊಂಡಿರುವ ರೌಡಿಶೀಟರ್ನನ್ನು ಯಲಹಂಕ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಪಿಯಿಂದ ಗಾಯಗೊಂಡಿರುವ ಹೆಡ್ಕಾನ್ಸ್ಟೆಬಲ್ ನಂದೀಶ್ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ಕರೆದೊಯ್ಯಲಾಗಿದೆ.
ಸೆರೆ ಸಿಕ್ಕಿರುವ ಮುನಿಕೃಷ್ಣ ಅಲಿಯಾಸ್ ಕಪ್ಪೆ ಅಮೃತಹಳ್ಳಿ ಪೆÇಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಆಗಿದ್ದು, ಈತನ ವಿರುದ್ಧ ಅಮೃತಹಳ್ಳಿ, ಕೊಡಿಗೇಹಳ್ಳಿ, ಜ್ಞಾನಭಾರತಿ, ಚಿಕ್ಕಜಾಲ ಮತ್ತಿತರ ಪೊಲೀಸ್ ಠಾಣೆಗಳಲ್ಲಿ ಕೊಲೆ ಯತ್ನ, ಹಲ್ಲೆ ಸೇರಿದಂತೆ ಎಂಟಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.