ಡಿಜೆಹಳ್ಳಿಯ ಕುಖ್ಯಾತ ರೌಡಿ ಅನೀಸ್ ಅಹಮದ್‌ಗೆ ಪೊಲೀಸರಿಂದ ಗುಂಡೇಟು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.5- ನಗರದಲ್ಲಿ 20ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಡಿಜೆಹಳ್ಳಿಯ ಕುಖ್ಯಾತ ರೌಡಿ ಕೆಜಿಹಳ್ಳಿ ಠಾಣೆ ಇನ್‍ಸ್ಪೆಕ್ಟರ್ ಹಾರಿಸಿದ ಗುಂಡೇಟಿನಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಡಿಜೆಹಳ್ಳಿ ಪೊಲೀಸ್ ಠಾಣೆಯ ರೌಡಿಶೀಟರ್ ಅನೀಸ್ ಅಹಮದ್(32) ಪೊಲೀಸರ ಗುಂಡೇಟಿನಿಂದ ಗಾಯಗೊಂಡಿರುವ ರೌಡಿ.

ಈತನ ಮೇಲೆ ಕೊಲೆ, ಕೊಲೆಯತ್ನ, ದರೋಡೆ, ಸುಲಿಗೆ ಸೇರಿದಂತೆ 20ಕ್ಕೂ ಹೆಚ್ಚು ಪ್ರಕರಣಗಳು ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ. ಆರೋಪಿ ಅನೀಸ್ ಅಹಮದ್ ಬೆಂಗಳೂರು ನಗರದ ನಾಲ್ಕು ವಿಭಾಗದಲ್ಲೂ ಸಹಚರರೊಂದಿಗೆ ಸೇರಿ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿ ನಂತರ ತಲೆತಪ್ಪಿಸಿ ಕೊಳ್ಳುತ್ತಿದ್ದನು. ಎರಡೂವರೆ ವರ್ಷಗಳಿಂದ ಪೊಲೀಸರ ಕೈಗೆ ಸಿಗದೆ ತಪ್ಪಿಸಿಕೊಂಡಿದ್ದ.

ಇತ್ತೀಚೆಗೆ ಕೆ.ಜಿ.ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣದಲ್ಲಿ ಈತ ಪೊಲೀಸರಿಗೆ ಬೇಕಾಗಿದ್ದ. ಈತನ ಬಂಧನಕ್ಕೆ ಪೊಲೀಸರು ಬಲೆಬೀಸಿದ್ದರು.

ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ಅವರು ಬಾಣಸವಾಡಿ ಎಸಿಪಿ ರವಿಪ್ರಸಾದ್ ನೇತೃತ್ವದಲ್ಲಿ ಕೆಜಿಹಳ್ಳಿ ಮತ್ತು ಡಿಜೆಹಳ್ಳಿ ಠಾಣೆ ಇನ್‍ಸ್ಪೆಕ್ಟರ್ ಅವರನ್ನೊಳಗೊಂಡ ತಂಡವನ್ನು ರಚಿಸಿದ್ದರು. ಈ ತಂಡ ಕಾರ್ಯಾಚರಣೆ ನಡೆಸಿ ರೌಡಿ ಅನೀಸ್ ಅಹಮದ್‍ನನ್ನು ಬಂಧಿಸಿತ್ತು.

ಕೊಲೆಗೆ ಬಳಸಿದ್ದ ಮಾರಕಾಸ್ತ್ರಗಳ ಬಗ್ಗೆ ಆರೋಪಿಯ ವಿಚಾರಣೆ ನಡೆಸಿದಾಗ ಕೆಜಿಹಳ್ಳಿ ಠಾಣೆ ವ್ಯಾಪ್ತಿಯ ಅರೇಬಿಕ್ ಕಾಲೇಜು ಸಮೀಪದ ರೋಲಿಂಗ್ ಮಿಲ್ ಬಳಿ ಬಿಸಾಡಿರುವುದಾಗಿ ಹೇಳಿದ್ದಾನೆ.

ಇಂದು ಬೆಳಗ್ಗೆ 6.15ರಲ್ಲಿ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲು ಆರೋಪಿ ಅನೀಸ್ ಅಹಮದ್‍ನನ್ನು ಪೊಲೀಸರು ಸ್ಥಳಕ್ಕೆ ಕರೆದೊಯ್ದಾಗ ಹೆಡ್‍ಕಾನ್‍ಸ್ಟೆಬಲ್ ಎಚ್.ಸಿ.ಶ್ರೀನಿವಾಸಮೂರ್ತಿ ಮತ್ತು ಎಎಸ್‍ಐ ಅಂತೋಣಿ ಅವರ ಮೇಲೆ ಹಲ್ಲೆ ಮಾಡಿದ್ದಾನೆ.

ತಕ್ಷಣ ಎಚ್ಚೆತ್ತುಕೊಂಡ ಕೆಜಿಹಳ್ಳಿ ಠಾಣೆ ಇನ್‍ಸ್ಪೆಕ್ಟರ್ ಅಜಯ್ ಸಾರಥಿ ಅವರು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಎಚ್ಚರಿಕೆ ನೀಡಿದ್ದಾರೆ. ಇನ್‍ಸ್ಪೆಕ್ಟರ್ ಮಾತಿಗೆ ಕಿವಿಗೊಡದೆ ಮತ್ತೆ ಅವರ ಮೇಲೆ ದಾಳಿಗೆ ಮುಂದಾದಾಗ ಅವರು ಆತ್ಮರಕ್ಷಣೆಗಾಗಿ ಹಾರಿಸಿದ ಗುಂಡು ಆರೋಪಿ ಅನೀಸ್ ಅಹಮದ್ ಎಡಗಾಲಿಗೆ ತಗುಲಿ ಕುಸಿದುಬಿದ್ದಿದ್ದಾನೆ.

ತಕ್ಷಣಪೊಲೀಸರು ಆರೋಪಿಯನ್ನು ಸುತ್ತುವರಿದು ಅಂಬೇಡ್ಕರ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಈ ಸಂದರ್ಭದಲ್ಲಿ ಗಾಯಗೊಂಡಿರುವ ಹೆಡ್ ಕಾನ್‍ಸ್ಟೇಬಲ್ ಶ್ರೀನಿವಾಸಮೂರ್ತಿ ಮತ್ತು ಎಎಸ್‍ಐ ಅಂತೋಣಿ ಅವರೂ ಸಹ ಅಂಬೇಡ್ಕರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆರೋಪಿ ಅನೀಸ್ ಅಹಮದ್ ತನ್ನ ಸಹಚರರೊಂದಿಗೆ ಸೇರಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದನು. ಇದೀಗ ಈತನ ಸಹಚರರಿಗಾಗಿ ಕೆಜಿಹಳ್ಳಿ ಠಾಣೆ ಪೊಲೀಸರು ಬಲೆ ಬೀಸಿದ್ದಾರೆ ಎಂದು ಡಿಸಿಪಿ ಶರಣಪ್ಪ ಈ ಸಂಜೆಗೆ ತಿಳಿಸಿದ್ದಾರೆ.

Facebook Comments

Sri Raghav

Admin