ಬೆಂಗಳೂರಲ್ಲಿ ಮತ್ತೆ ಘರ್ಜಿಸಿದ ಪೊಲೀಸರ ಬಂದೂಕು, ರೌಡಿ ಶೀಟರ್’ಗೆ ಗುಂಡೇಟು

ಈ ಸುದ್ದಿಯನ್ನು ಶೇರ್ ಮಾಡಿ

Firing-Bangalore
ಬೆಂಗಳೂರು, ಜೂ.5- ಪೊಲೀಸರ ಮೇಲೆ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿ ಪರಾರಿಯಾಗುತ್ತಿದ್ದ ರೌಡಿಶೀಟರ್ ಕಾಲಿಗೆ ಗುಂಡು ಹಾರಿಸಿ ಸೆರೆ ಹಿಡಿಯಲಾಗಿದೆ. ಕಾಮಾಕ್ಷಿಪಾಳ್ಯ ಮತ್ತು ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಡಕಾಯಿತಿ, ರಾಬರಿ, ಕಳ್ಳತನ, ಕೊಲೆ ಯತ್ನ, ದೊಂಬಿ ಸೇರಿದಂತೆ ಏಳು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಬ್ಯಾಡರಹಳ್ಳಿ ಸಮೀಪದ ತುಂಗಾನಗರ ನಿವಾಸಿ ರೌಡಿಶೀಟರ್ ಶರವಣ ಅಲಿಯಾಸ್ ತರುಣ್ ಪೊಲೀಸರ ಗುಂಡೇಟು ತಿಂದು ಆಸ್ಪತ್ರೆಗೆ ದಾಖಲಾಗಿರುವ ಆರೋಪಿಯಾಗಿದ್ದಾನೆ.

ಪ್ರಕರಣದ ಹಿನ್ನೆಲೆ:
ಕಳೆದ ಮೇ 21ರಂದು ರಾತ್ರಿ 8.45ರ ಸಮಯದಲ್ಲಿ ಪ್ರವೀಣ್ ಎಂಬುವವರು ಪಟ್ಟೆಗಾರಪಾಳ್ಯದಲ್ಲಿ ಟಿವಿಎಸ್ ಬೈಕ್‍ನಲ್ಲಿ ಹೋಗುತ್ತಿದ್ದಾಗ ಕಾರಿನಲ್ಲಿ ಬಂದ ಐವರು ದುಷ್ಕರ್ಮಿಗಳು ದೊಣ್ಣೆ, ಲಾಂಗುಗಳಿಂದ ಹಲ್ಲೆ ಮಾಡಿ 15 ಸಾವಿರ ಬೆಲೆಬಾಳುವ ಮೊಬೈಲ್, ಯುಪಿಎಸ್ ಸಿಸ್ಟಮ್ ಕಿತ್ತುಕೊಂಡು ಪರಾರಿಯಾಗಿದ್ದು, ಈ ಕುರಿತಂತೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದೇ ರೀತಿ ಕಳೆದ ಜೂ.2ರಂದು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 3 ಲಕ್ಷ ರೂ.ಗಳನ್ನು ಅಪಹರಿಸಲಾಗಿದ್ದು, ಈ ಕುರಿತಂತೆಯೂ ಪ್ರಕರಣ ದಾಖಲಾಗಿತ್ತು.

ವಿಜಯನಗರ ಮತ್ತು ಕಾಮಾಕ್ಷಿಪಾಳ್ಯ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಪಶ್ಚಿಮ ವಿಭಾಗದ ಡಿಸಿಪಿ ರವಿ ಡಿ.ಚನ್ನಣ್ಣವರ್ ಆವರು ಆರೋಪಿಗಳ ಪತ್ತೆಗೆ ವಿಶೇಷ ತಂಡವೊಂದನ್ನು ರಚನೆ ಮಾಡಿದ್ದರು. ಕಾರ್ಯಾಚರಣೆಗಿಳಿದ ವಿಶೇಷ ತಂಡದ ಪೊಲೀಸರು ಆರೋಪಿಗಳಾದ ಪ್ರದೀಪ್ ಮತ್ತು ಅಕ್ಷಯ್ ಎಂಬುವವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದರು.  ವಿಚಾರಣೆ ಸಂದರ್ಭದಲ್ಲಿ ಆರೋಪಿಗಳಾದ ಶರವಣ ಅಲಿಯಾಸ್ ತರುಣ್, ನಂದೀಶ ಮತ್ತು ಸುಮಂತ್ ಎಂಬುವವರು ಅಪರಾಧ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದರು.

ಪ್ರಮುಖ ಆರೋಪಿಗಳಾದ ಶರವಣ, ನಂದೀಶ ಮತ್ತು ಸುಮಂತ್ ಅವರ ಪತ್ತೆಗೆ ಕಾರ್ಯಾಚರಣೆಗಿಳಿದ ಪೊಲೀಸರು ಇಂದು ಮುಂಜಾನೆ ಸುಮನಹಳ್ಳಿ ವೃತ್ತದಲ್ಲಿ ಹೊಂಚುಹಾಕಿ ಕುಳಿತಿದ್ದರು. ಈ ಸಮಯದಲ್ಲಿ ಪ್ರಮುಖ ಆರೋಪಿ ಶರವಣ ಹಾಗೂ ಇತರರು ಆಟೋದಲ್ಲಿ ಸುಮನಹಳ್ಳಿ ರಿಂಗ್ ರಸ್ತೆಯಿಂದ ಕಾಮಾಕ್ಷಿಪಾಳ್ಯದ ಪೇಟೆ ಚನ್ನಪ್ಪ ಇಂಡಸ್ಟ್ರಿಯಲ್ ಎಸ್ಟೇಟ್ ಹಿಂಭಾಗದ ನಿರ್ಜನ ಪ್ರದೇಶದತ್ತ ತೆರಳುತ್ತಿದ್ದರು.

ಆರೋಪಿಗಳನ್ನು ಹಿಂಬಾಲಿಸಿದ ಪೊಲೀಸರು ಇಂಡಸ್ಟ್ರಿಯಲ್ ಎಸ್ಟೇಟ್ ಸಮೀಪ ಆಟೋ ಅಡ್ಡಗಟ್ಟಿ ಶರಣಾಗುವಂತೆ ಸೂಚಿಸಿದಾಗ ಅವರು ಶ್ರೀನಿವಾಸಮೂರ್ತಿ ಎಂಬ ಕಾನ್ಸ್‍ಟೆಬಲ್ ಮೇಲೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಲು ಪ್ರಯತ್ನಿಸಿ ಪರಾರಿಯಾದರು. ತಕ್ಷಣ ಎಚ್ಚೆತ್ತುಕೊಂಡ ಇನ್ಸ್‍ಪೆಕ್ಟರ್ ನಾಗೇಶ್ ಅವರು ತಮ್ಮ ಸಿಬ್ಬಂದಿಗಳ ಆತ್ಮ ರಕ್ಷಣೆಗಾಗಿ ಆರೋಪಿಗಳನ್ನು ಶರಣಾಗುವಂತೆ ಸೂಚಿಸಿ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದರು. ಆದರೂ ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ನಡೆಸಲು ಮುಂದಾದಾಗ ಆರೋಪಿ ಶರವಣನ ಕಾಲಿಗೆ ಗುಂಡು ಹಾರಿಸಿ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತೀವ್ರವಾಗಿ ಗಾಯಗೊಂಡಿದ್ದ ಶರವಣನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಪಿಯಿಂದ ಗಾಯಗೊಂಡಿದ್ದ ಕಾನ್ಸ್‍ಟೆಬಲ್ ಶ್ರೀನಿವಾಸಮೂರ್ತಿ ಅವರಿಗೆ ವಿಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಆರೋಪಿಗಳ ದಾಳಿಗೂ ಎದೆಗುಂದದೆ ಪ್ರಾಣಭಯ ಬಿಟ್ಟು ಕುಖ್ಯಾತ ಆರೋಪಿ ಕಾಲಿಗೆ ಗುಂಡು ಹಾರಿಸಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾದ ವಿಶೇಷ ತಂಡದ ಪೊಲೀಸರ ಕಾರ್ಯವೈಖರಿಯನ್ನು ಡಿಸಿಪಿ ರವಿ ಡಿ.ಚನ್ನಣ್ಣವರ್ ಅವರು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.

Facebook Comments

Sri Raghav

Admin