ದಕ್ಷತೆ, ಪ್ರಾಮಾಣಿಕತೆಗೆ ದೇಶದಲ್ಲೇ ಹೆಸರುವಾಸಿ ಕರ್ನಾಟಕ ಪೊಲೀಸರು : ಸಿಎಂ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಏ.2- ಕರ್ನಾಟಕದ ಪೊಲೀಸರೆಂದರೆ ದೇಶದೆಲ್ಲೆಡೆ ಸದಾಭಿಪ್ರಾಯವಿದ್ದು, ನಿಮ್ಮ ಸೇವೆ ಇತರರಿಗೂ ಮಾದರಿಯಾಗಲಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಶಿಸಿದರು. ಕೋರಮಂಗಲದ ಕೆಎಸ್‍ಆರ್‍ಪಿ ಪರೇಡ್ ಮೈದಾನದಲ್ಲಿ ಪೊಲೀಸ್ ಧ್ವಜ ದಿನಾಚರಣೆ ಹಾಗೂ ಕರ್ತವ್ಯ ಸಂದರ್ಭದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಪೊಲೀಸರಿಗೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಕರ್ನಾಟಕದ ಪೊಲೀಸರೆಂದರೆ ದೇಶದಲ್ಲೇ ದಕ್ಷತೆ, ಪ್ರಾಮಾಣಿಕತೆ ಹಾಗೂ ನಿಸ್ವಾರ್ಥ ಸಿಬ್ಬಂದಿ ಎಂಬ ಹೆಗ್ಗಳಿಕೆ ಇದೆ. ಇದನ್ನು ಉಳಿಸಿ-ಬೆಳೆಸಿ ಪೋಷಿಸುವುದು ನಿಮ್ಮೆಲ್ಲರ ಕರ್ತವ್ಯ ಎಂದು ಸಲಹೆ ಮಾಡಿದರು. ಉಗ್ರರು ಮತ್ತು ನಕ್ಸಲ್ ಚಟುವಟಿಕೆಗಳನ್ನು ಹತ್ತಿಕ್ಕುವಲ್ಲಿ ನೀವು ನಿಮ್ಮ ಮನೆ, ಮಠ, ಕುಟುಂಬದವರನ್ನು ಬಿಟ್ಟು ಕರ್ತವ್ಯ ನಿರ್ವಹಿಸುತ್ತಿದ್ದೀರಿ. ನಿಮ್ಮ ಈ ನಿಸ್ವಾರ್ಥ ಸೇವೆಯಿಂದ ರಾಜ್ಯದಲ್ಲಿ ಶಾಂತಿ ನೆಲೆಯೂರಲು ಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಶಾಂತಿ ಪ್ರಿಯವಾಗಿದ್ದ ಕರ್ನಾಟಕದಲ್ಲಿ ಕೆಲ ವರ್ಷಗಳ ಹಿಂದೆ ಭಯೋತ್ಪಾದಕ ಮತ್ತು ನಕ್ಸಲ್ ಚಟುವಟಿಕೆಗಳು ನಡೆಯುತ್ತಿದ್ದವು. ಅದನ್ನು ನಿಮ್ಮ ಜೀವದ ಹಂಗನ್ನು ತೊರೆದು ಸಮಾಜ ಘಾತುಕ ಶಕ್ತಿಯನ್ನು ಸೆದೆಬಡಿಯುವಲ್ಲಿ ನೀವು ತೋರಿದ ಕರ್ತವ್ಯ ನಿಷ್ಠೆಗೆ ನಾನು ಆಬಾರಿಯಾಗಿದ್ದೇನೆ ಎಂದರು. ಆಧುನಿಕ ತಂತ್ರಜ್ಞಾನ ಬಳಕೆ ಮಾಡಿಕೊಂಡು ಅತ್ಯಂತ ಕ್ಲಿಸ್ಟಕರಾವಾದ ಪ್ರಕರಣಗಳನ್ನು ಭೇದಿಸುತ್ತೀರಿ. ನಿಮ್ಮ ಇಲಾಖೆಗೆ ಬೇಕಾದ ಎಲ್ಲಾ ಸಹಕಾರವನ್ನು ನಮ್ಮ ಸರ್ಕಾರ ನೀಡಲು ಈಗಲೂ ಸಿದ್ದವಿದೆ ಎಂದು ಹೇಳಿದರು.

ಕೊರೊನಾ ಸಂದರ್ಭದಲ್ಲಿ ಹಗಲು-ರಾತ್ರಿ ಮಳೆ, ಚಳಿ, ಗಾಳಿ ಯಾವುದನ್ನೂ ಲೆಕ್ಕಿಸದೆ ಕರ್ತವ್ಯ ನಿರ್ವಹಿಸಿದ್ದೀರಿ. ನಿಮ್ಮ ಈ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಶಾಂತಿ, ರಕ್ಷಣೆಗೆ ಇಂದಿನಿಂದ ಇನ್ನಷ್ಟು ಉತ್ತಮವಾದ ಸೇವೆ ಬಯಸುತ್ತೇನೆ ಎಂದರು. ಎಂತಹ ಕ್ಲಿಸ್ಟಕರ ಪರಿಸ್ಥಿತಿಯಲ್ಲೂ ಪೊಲೀಸರು ಸಹನೆ ಕಳೆದುಕೊಳ್ಳದೆ ಶಾಂತಿ ಕಾಪಾಡುವಲ್ಲಿ ಯಶಸ್ವಿಯಾಗಿದ್ದೀರಿ. ನಿಮ್ಮ ಈ ಸೇವೆಯಿಂದಲೇ ದೇಶದಲ್ಲೇ ಕರ್ನಾಟಕದ ಪೊಲೀಸರೆಂದರೆ ಗೌರವದಿಂದ ಕಾಣುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಪದಕ ಪಡೆದವರು ಶ್ರೇಷ್ಠರು ಎಂಬ ಮನೋಭಾವನೆ ಬೇಡ. ಉಳಿದ ಸಿಬ್ಬಂದಿಗಳೂ ಕರ್ತವ್ಯ ನಿಷ್ಟೆ ಮೆರೆದರೆ ಪ್ರಶಸ್ತಿಗಳು ನಿಮ್ಮನ್ನು ಹುಡಿಕೊಂಡು ಬರಲಿವೆ. ಪದಕ ಪಡೆದವರು ಎಲ್ಲರಿಗೂ ಮಾದರಿಯಾಗಲಿದ್ದಾರೆ ಎಂದು ಸಿಎಂ ಹೇಳಿದರು. ಕಾರ್ಯಕ್ರಮದಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವಿಣ್ ಸೂದ್, ಅಪರ ಮುಖ್ಯಕಾರ್ಯದರ್ಶಿ ರಜನೀಶ್ ಗೋಯಲ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಅತ್ಯುತ್ತಮ ಸೇವೆಸಲ್ಲಿಸಿದ 125ಪೊಲೀಸ್ ಸಿಬ್ಬಂದಿಗೆ ಮುಖ್ಯಮಂತ್ರಿಗಳ ಪದಕ ಪ್ರದಾನ ಮಾಡಿ ಗೌರವಿಸಿದರು.

Facebook Comments