ಪೊಲೀಸ್ ಇಲಾಖೆಗೆ ಬಜೆಟ್ ನಲ್ಲಿ ಭರ್ಜರಿ ಕೊಡುಗೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.8-ಅಪರಾಧ ಪತ್ತೆಯನ್ನು ಚುರುಕುಗೊಳಿಸಲು ಹಾಗೂ ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಲು ಬಳ್ಳಾರಿ ಮತ್ತು ಹುಬ್ಬಳ್ಳಿಯಲ್ಲಿ ವಿಧಿವಿಜ್ಞಾನ ಪ್ರಯೋಗಾಲಯದ ಪ್ರಾದೇಶಿಕ ಕೇಂದ್ರಗಳನ್ನು ಆರಂಭಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ಸ್ವಂತ ಕಟ್ಟಡಗಳಿಲ್ಲದ ನೂರು ಪೊಲೀಸ್ ಠಾಣೆಗಳಿಗೆ ಮುಂದಿನ ಐದು ವರ್ಷಗಳಲ್ಲಿ 200 ಕೋಟಿ ರೂ. ವೆಚ್ಚದಲ್ಲಿ ಹೊಸ ಕಟ್ಟ ನಿರ್ಮಿಸಿಕೊಡಲಾಗುವುದು. ಈ ಉದ್ದೇಶಕ್ಕಾಗಿ ಪ್ರಸಕ್ತ ಬಜೆಟ್‍ನಲ್ಲಿ 25 ಕೋಟಿ ಒದಗಿಸಲಾಗಿದೆ.

ಪೊಲೀಸರ ಕ್ಷೇಮಾಭಿವೃದ್ಧಿಗಾಗಿ ಪೊಲೀಸ್ ಗೃಹ 2025 ಯೋಜನೆಯನ್ನು 2740 ಕೋಟಿ ಮೊತ್ತದಲ್ಲಿ ಪ್ರಾರಂಭಿಸಿದ್ದು, ಅಗ್ನಿಶಾಮಕ, ಕಾರಾಗೃಹ ಇಲಾಖೆಗಳ ಸಿಬ್ಬಂದಿಗಳು ಸೇರಿದಂತೆ ಗೃಹ ಇಲಾಖೆಯ 10,032 ವಸತಿ ಗೃಹಗಳನ್ನು ನಿರ್ಮಿಸಲಾಗುವುದು ಎಂದರು.

ಹಾವೇರಿ ಜಿಲ್ಲೆ ಶಿಗ್ಗಾವಿ ತಾಲ್ಲೂಕಿನಲ್ಲಿರುವ ಕರ್ನಾಟಕ ರಾಜ್ಯ ಮೀಸಲು ಪಡೆಯ 10ನೇ ಬೆಟಾಲಿಯನ್‍ನನ್ನು ಸಶಕ್ತಗೊಳಿಸಲು 8 ಕೋಟಿ ರೂ. ಒದಗಿಸಲಾಗಿದೆ. ಹಾವೇರಿ, ಕೊಡಗು ಜಿಲ್ಲೆಯಲ್ಲಿ ಹೊಸ ಪೊಲೀಸ್ ಸಂಕೀರ್ಣ ನಿರ್ಮಿಸಲು ತಲಾ 8 ಕೋಟಿ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

[ ಕರ್ನಾಟಕ ಬಜೆಟ್ – 2021 (All Updates) ]

ಸಾರ್ವಜನಿಕರಿಗೆ ತುರ್ತು ಸಂದರ್ಭದಲ್ಲಿ ಅಗ್ನಿಸುರಕ್ಷತೆ ಮತ್ತು ಉನ್ನತ್ತೀಕರಿಸಿದ ಸೇವೆ ಒದಗಿಸಲು ಮುಂದಿನ ಐದು ವರ್ಷಗಳಿಗೆ ಕೆ-ಸೇಫ್-2 ಯೋಜನೆಯನ್ನು ರೂಪಿಸಲಾಗಿದೆ ಎಂದರು. ರಾಜ್ಯದ ಕರಾವಳಿ ಪ್ರದೇಶಗಳ ಸುರಕ್ಷತೆ ಮತ್ತು ಭದ್ರತೆಗೆ ಮೀಸಲಿರುವ ಕಾವಲು ಪಡೆಗೆ ಆಧುನಿಕ ತಂತ್ರಜ್ಞಾನ ಅಳವಡಿಸಲು 8 ಕೋಟಿ ರೂ.ಗಳನ್ನು ನೀಡಲಾಗಿದೆ. 40 ಕೋಟಿ ರೂ. ವೆಚ್ಚದಲ್ಲಿ 8 ಕಾರಾಗೃಹಗಳ ಸಾಮಥ್ರ್ಯ ಹೆಚ್ಚಿಸಲು ನಿರ್ಧರಿಸಲಾಗಿದ್ದು, ಈ ವರ್ಷ 10 ಕೋಟಿ ನೀಡಲಾಗಿದೆ.

ಕಾರಾಗೃಹದಿಂದಲೇ ಖೈದಿಗಳನ್ನು ಆನ್‍ಲೈನ್ ಮೂಲಕ ನ್ಯಾಯಾಲಯದ ಕಲಾಪಕ್ಕೆ ಹಾಜರುಪಡಿಸಲು ಅನುಕೂಲವಾಗುವಂತೆ ವಿಡಿಯೋಕಾನರೆನ್ಸಿಂಗ್ ಸೌಲಭ್ಯ ರೂಪಿಸಲು 15 ಕೋಟಿ ರೂ. ನೀಡಲಾಗಿದೆ ಎಂದರು. ವ್ಯಸನಮುಕ್ತ ಸ್ವಸ್ಥ ಸಮಾಜದ ನಿರ್ಮಾಣ ಸರ್ಕಾರದ ಆದ್ಯತೆಯಾಗಿದೆ. ಮಾದಕ ವಸ್ತುಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಹೊಸ ಕಾರ್ಯಕ್ರಮ ರೂಪಿಸುವುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ.

Facebook Comments

Sri Raghav

Admin