ನಾಳೆ ಪೊಲೀಸ್ ಮಾಸಿಕ ಜನಸಂಪರ್ಕ ಸಭೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.27- ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಜನಸ್ನೇಹಿ ಪೊಲೀಸಿಂಗ್ ಪ್ರಾರಂಭಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ಪ್ರತಿ ತಿಂಗಳ 4ನೇ ಶನಿವಾರದಂದು ಮಾಸಿಕ ಜನಸಂಪರ್ಕ ಸಭೆ ನಡೆಸಲು ಉದ್ದೇಶಿಸಲಾಗಿದೆ. ಅಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಗೆ ಎಲ್ಲಾ ಪೊಲೀಸ್ ಇನ್‍ಸ್ಪೆಕ್ಟರ್ ಕಡ್ಡಾಯವಾಗಿ ತಮ್ಮ ಪೊಲೀಸ್ ಠಾಣೆಗಳಲ್ಲಿ ಉಪಸ್ಥಿತರಿದ್ದು, ಸಾರ್ವಜನಿಕರ ದೂರು, ಅಹವಾಲು, ಇನ್ನಿತರೆ ಸಮಸ್ಯೆಗಳನ್ನು ಸ್ವೀಕರಿಸಿ, ಪರಿಹರಿಸಲು ಕ್ರಮ ವಹಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ನಾಳೆ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಮುಕ್ತವಾಗಿ ಸಂಬಂಧಪಟ್ಟ ಪೊಲೀಸ್ ಠಾಣೆ ಇನ್‍ಸ್ಪೆಕ್ಟರ್ ಅವರನ್ನು ಭೇಟಿ ಮಾಡಿ ತಮ್ಮ ಅಹವಾಲುಗಳನ್ನು ಸಲ್ಲಿಸಬಹುದಾಗಿದೆ. ಠಾಣೆಯಲ್ಲಿ ನೀಡಲಾದ ಪ್ರಕರಣ, ದೂರಿನ ಪ್ರಸ್ತುನ ಸ್ಥಿತಿಯನ್ನು ತಿಳಿದುಕೊಳ್ಳಬಹುದು ಹಾಗೂ ದಾಖಲಿಸಿದ ದೂರು ವಿಲೇವಾರಿಯಾಗದೆ ದೀರ್ಘಕಾಲದಿಂದ ಬಾಕಿ ಉಳಿದಿದ್ದರೆ ಬಾಕಿ ಉಳಿಯಲು ಸಕಾರಣವನ್ನು ತಿಳಿದುಕೊಳ್ಳಬಹುದು.

ದೂರುದಾರರು ತಾವು ನೀಡಿದ ದೂರು ಯಾವ ಹಂತದಲ್ಲಿದೆ ಎಂಬುದರ ಬಗ್ಗೆ ವಿಚಾರಣೆ ಮಾಡಬಹುದು. ದೂರುದಾರರು ತಾವು ನೀಡಿದ ದೂರು ಯಾವ ಹಂತದಲ್ಲಿದೆ ಎಂಬುದರ ಬಗ್ಗೆ ವಿಚಾರಣೆ ಮಾಡಬಹುದು. ಅಗತ್ಯವಿದ್ದಲ್ಲಿ, ಪೊಲೀಸ್ ಠಾಣೆಗಳಿಗೆ ಸಂಬಂಸಿದ ಕೆಲಸಗಳ ಬಗ್ಗೆ ಸ್ಪಷ್ಟೀಕರಣ ಪಡೆಯಬಹುದು. ಸ್ಥಳೀಯ ಸಾರ್ವಜನಿಕರ ಯಾವುದೇ ಕುಂದುಕೊರತೆಗಳಿದ್ದಲ್ಲಿ, ಕೂಡಲೇ ಪರಿಹರಿಸಲು ಠಾಣಾ ಮಟ್ಟದಲ್ಲಿ ಕ್ರಮ ವಹಿಸಲಾಗುವುದು.

ಅರ್ಜಿದಾರರಿಗೆ ಸಂಬಂಸಿದ ಬಾಕಿ ಉಳಿದಿರುವ ಪಾಸ್‍ಪೋರ್ಟ್, ಪೂರ್ವಾಪರ ಪರಿಶೀಲನೆಯನ್ನು ಸ್ಥಳಿದಲ್ಲಿಯೇ ಲಭ್ಯವಿರುವ ದಾಖಲೆಗಳನ್ನು ಪರಿಶೀಲಿಸಿ ವಿಲೇವಾರಿ ಮಾಡಲಾಗುವುದು. ಅಮಾನತ್ತುಪಡಿಸಿಕೊಳ್ಳಲಾದ ವಸ್ತುಗಳನ್ನು ನ್ಯಾಯಾಲಯದಿಂದ ಅನುಮತಿ ಪಡೆದು ಹಿಂದಿರುಗಿಸದೇ ಬಾಕಿ ಇದ್ದಲ್ಲಿ ಅವುಗಳನ್ನು ವಾರಸುದಾರರಿಗೆ ಹಿಂತಿರುಗಿಸಲಾಗುವುದು.

ಡಿಸಿಪಿ ಮತ್ತು ಎಸಿಪಿ ದರ್ಜೆಯ ಮೇಲ್ವಿಚಾರಣಾಕಾರಿಗಳು ತಮ್ಮ ಸಹರದ್ದಿನ ಠಾಣೆಗಳಲ್ಲಿ ಲಭ್ಯವಿರುವಂತೆ ಅಗತ್ಯ ಕ್ರಮವಹಿಸಲಾಗಿದೆ.
ಹೆಚ್ಚುವರಿ ಪೊಲೀಸ್ ಆಯುಕ್ತರು ಮತ್ತು ಉಪಪೊಲೀಸ್ ಆಯುಕ್ತರ ಸಮ್ಮುಖದಲ್ಲಿ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಹೇಳಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಸಾರ್ವಜನಿಕರು ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ, ತಮಗೆ ಅಗತ್ಯವಿರುವ ಮಹಿತಿ, ಅಹವಾಲು, ಇತರೆ ವಿಷಯಗಳನ್ನು ಮುಕ್ತವಾಗಿ ಹಂಚಿಕೊಂಡು ಪರಿಹಾರ ಕಂಡುಕೊಳ್ಳಬಹುದಾಗಿದೆ. ಆ ದಿನದಂದು ಪೊಲೀಸ್ ಆಯುಕ್ತರು ಸಹ ನಗರದಲ್ಲಿನ ಯಾವುದಾದರೂ ಪೊಲೀಸ್ ಠಾಣೆಗೆ ಭೇಟಿ ನೀಡಲಿದ್ದು, ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಸಲ್ಲಿಸಬಹುದಾಗಿದೆ.

ಕೋವಿಡ್-19 ಮಾರ್ಗಸೂಚಿಗಳನ್ನು ಅನುಸರಿಸಿ ಸಾರ್ವಜನಿಕ ಅಹವಾಲುಗಳನ್ನು ಸ್ವೀಕರಿಸಲು ಅಗತ್ಯ ವ್ಯವಸ್ಥೆ ಮಾಡಲಾಗಿದೆ. ಪೊಲೀಸ್ ಆಯುಕ್ತರು, ಅಪರ ಪೊಲೀಸ್ ಆಯುಕ್ತರು ಹಾಗೂ ಉಪಪೊಲೀಸ್ ಆಯುಕ್ತರು ಲಭ್ಯವಿರುವ ಪೊಲೀಸ್ ಠಾಣೆಯ ಪಟ್ಟಿಯನ್ನು ಮುಂಚಿತವಾಗಿ ಠಾಣೆಗಳಲ್ಲಿ ಲಭ್ಯವಿರುವಂತೆ ಕ್ರಮವಹಿಸಲಾಗಿದೆ.

ನಾಳೆ ಪುಲಿಕೇಶನಗರ ಮತ್ತು ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಹಾಗೂ ಪೂರ್ವ ವಿಭಾಗದ ಅಪರ ಪೊಲೀಸ್ ಆಯುಕ್ತ ಎಸ್.ಮುರುಗನ್ ಅವರು ಪುಲಿಕೇಶನಗರ ಮತ್ತು ಬಾಣಸವಾಡಿ ಠಾಣೆಯಲ್ಲಿ ಸಾರ್ವಜನಿಕರಿಗೆ ಲಭ್ಯವಿರುತ್ತಾರೆ.

ಪಶ್ಚಿಮ ವಿಭಾಗದ ಅಪರ ಪೊಲೀಸ್ ಆಯುಕ್ತ ಸೌಮೆಂದು ಮುಖರ್ಜಿ ಅವರು ಹನುಮಂತನಗರ ಮತ್ತು ಬ್ಯಾಟರಾಯನಪುರ ಠಾಣೆಯಲ್ಲಿ ಹಾಗೂ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರು ಎನ್.ಟಿ.ಪೇಟೆಯ ಸಿಸಿಬಿ ಕಚೇರಿಯಲ್ಲಿ ಬೆಳಗ್ಗೆ 11ರಿಂದ ಮಧ್ಯಾಹ್ನ 1 ಗಂಟೆವರೆಗೆ ಲಭ್ಯವಿರುತ್ತಾರೆ.

ಕೇಂದ್ರ ವಿಭಾಗದ ಉಪಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ಅವರು ಅಶೋಕನಗರ ಠಾಣೆ, ಪೂರ್ವ ವಿಭಾಗ(ಪ್ರಭಾರ) ಉಪಪೊಲೀಸ್ ಆಯುಕ್ತರಾದ ಇಶಾಪಂತ್ ಅವರು ಪುಲಿಕೇಶಿನಗರ, ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಲಭ್ಯವಿರುತ್ತಾರೆ. ಪಶ್ಚಿಮ ವಿಭಾಗ ಉಪಪೊಲೀಸ್ ಆಯುಕ್ತ ಡಾ.ಸಂಜೀವ್ ಪಾಟೀಲ್ ಅವರು ವಿಜಯನಗರಪೊಲೀಸ್ ಠಾಣೆ, ಉತ್ತರ ವಿಭಾಗ ಉಪಪೊಲೀಸ್ ಆಯುಕ್ತ ಧರ್ಮೇಂದ್ರಕುಮಾರ್ ಅವರು ಆರ್‍ಟಿನಗರ ಪೊಲೀಸ್ ಠಾಣೆಯಲ್ಲಿ ಉಪಸ್ಥಿತರಿರುತ್ತಾರೆ.

ದಕ್ಷಿಣ ವಿಭಾಗ ಉಪಪೊಲೀಸ್ ಆಯುಕ್ತ ಹರೀಶ್ ಪಾಂಡೆ ಅವರು ಹನುಮಂತನಗರ ಪೊಲೀಸ್ ಠಾಣೆ, ಆಗ್ನೇಯ ವಿಭಾಗ ಉಪಪೊಲೀಸ್ ಆಯುಕ್ತ ಜೋಶಿ ಶ್ರೀನಾಥ್ ಮಹಾದೇವ್, ಕೋರಮಂಗಲ ಪೊಲೀಸ್ ಠಾಣೆಯಲ್ಲಿ ನಾಳೆ ಬೆಳಗ್ಗೆ 11ರಿಂದ ಮಧ್ಯಾಹ್ನ 1 ಗಂಟೆವರೆಗೆ ಲಭ್ಯವಿರುತ್ತಾರೆ.

ಈಶಾನ್ಯ ವಿಭಾಗದ ಉಪಪೊಲೀಸ್ ಆಯುಕ್ತ ಸಿ.ಕೆ.ಬಾಬಾ ಅವರು ಯಲಹಂಕ ಪೊಲೀಸ್ ಠಾಣೆ ಮತ್ತು ವೈಟ್‍ಫೀಲ್ಡ್ ವಿಭಾಗದ ಉಪ ಪೊಲೀಸ್ ಆಯುಕ್ತ ಡಿ.ದೇವರಾಜ ಅವರು ನಾಳೆ ಬೆಳಗ್ಗೆ 11 ಗಂಟೆಯಿಂದ 1 ಗಂಟೆವರೆಗೆ ಲಭ್ಯವಿದ್ದು, ಸಾರ್ವಜನಿಕರ ಅಹವಾಲು ಸ್ವೀಕರಿಸಲಿದ್ದಾರೆ.

Facebook Comments