ವಾಲಿದ್ದ ಪೊಲೀಸ್ ಕ್ವಾಟ್ರಸ್ ಪರಿಶೀಲಿಸಿದ ತಜ್ಞರ ತಂಡ, ಮನೆ ಖಾಲಿ ಮಾಡುವಂತೆ ನೊಟೀಸ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.18- ಬಿರುಕು ಕಾಣಿಸಿಕೊಂಡಿರುವ ಪೊಲೀಸ್ ವಸತಿ ಸಮುಚ್ಛಯ ಪ್ರದೇಶಕ್ಕೆ ಇಂದು ಭಾರತೀಯ ವಿಜ್ಞಾನ ಸಂಸ್ಥೆ ಮತ್ತಿತರ ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿವೆ. ಬಿನ್ನಿಮಿಲ್ ವೃತ್ತದ ಬಳಿ ಇರುವ ಏಳು ಅಂತಸ್ತಿನ ಪೊಲೀಸ್ ಕ್ವಾಟ್ರರ್ಸ್ ವಾಲಿರುವ ಬಗ್ಗೆ ಈ ತಜ್ಞರ ತಂಡಗಳು ನೀಡುವ ವರದಿ ಆಧಾರದ ಮೇಲೆ ಬಿಲ್ಡರ್‍ಗಳ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

ಒಂದು ವೇಳೆ ಕಟ್ಟಡದಲ್ಲಿ ಕಾಣಿಸಿಕೊಂಡಿರುವ ಬಿರುಕನ್ನು ದುರಸ್ತಿ ಮಾಡಲು ಸಾಧ್ಯವಾದರೆ ದುರಸ್ತಿ ಮಾಡಲಾಗುವುದು. ಒಂದು ವೇಳೆ ಜನರ ವಾಸಕ್ಕೆ ಕಟ್ಟಡ ಯೋಗ್ಯವಾಗಿಲ್ಲ ಎಂಬುದು ವರದಿಯಲ್ಲಿ ದೃಢಪಟ್ಟರೆ ಇಡೀ ಕಟ್ಟಡವನ್ನು ತೆರವುಗೊಳಿಸುವ ಸಾಧ್ಯತೆಗಳಿವೆ.

34 ಕುಟುಂಬಗಳಿಗೆ ನೋಟಿಸ್: ಈ ವಸತಿ ಸಮುಚ್ಛಯದಲ್ಲಿ ಬಿರುಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ನಿವಾಸಿಗಳು ಆತಂಕಕ್ಕೊಳಗಾಗಿದ್ದು, ಮುಂಜಾಗ್ರತಾ ಕ್ರಮವಾಗಿ 34 ಕುಟುಂಬಗಳು ಈ ಕೂಡಲೇ ಮನೆ ಖಾಲಿ ಮಾಡುವಂತೆ ನೋಟಿಸ್ ನೀಡಲಾಗಿದೆ. ನೋಟಿಸ್ ಹಿನ್ನೆಲೆಯಲ್ಲಿ ಪೊಲೀಸ್ ಕುಟುಂಬಗಳು ಈಗಾಗಲೇ ಬೇರೆ ಕಡೆ ಸ್ಥಳಾಂತರಗೊಳ್ಳಲು ಸಿದ್ಧತೆ ಮಾಡಿಕೊಂಡಿದ್ದು, ಒಬ್ಬೊಬ್ಬರಾಗಿ ಮನೆ ಖಾಲಿ ಮಾಡುತ್ತಿದ್ದಾರೆ.

ನಗರದಲ್ಲಿ ಮಳೆ ಬೀಳುತ್ತಿದ್ದಂತೆ ಕಟ್ಟಡದ ಬಿರುಕು ಹೆಚ್ಚಾಗುತ್ತಾ ಹೋಗುತ್ತಿದೆ. ಬಿರುಕು ಬಿಟ್ಟಿರುವ ಜಾಗದಲ್ಲಿ ನೀರು ಸೋರುತ್ತಿರುವುದರಿಂದ ಆತಂಕವೂ ಹೆಚ್ಚಾಗಿದೆ.n ಈ ವಸತಿ ಸಮುಚ್ಛಯದ ಕಾಮಗಾರಿಯನ್ನು 2018ರಲ್ಲಿ ಪೂರ್ಣಗೊಳಿಸಿ ವಾಸಕ್ಕೆ ನೀಡಲಾಗಿತ್ತು. ಅಂದಿನಿಂದಲೇ ಈ ಕಟ್ಟಡದಲ್ಲಿ ಸ್ವಲ್ಪ ಸ್ವಲ್ಪ ಬಿರುಕು ಬಿಟ್ಟಿದ್ದರಿಂದ ನಗರ ಪೊಲೀಸ್ ಗೃಹ ನಿರ್ಮಾಣ ಸಹಕಾರ ಸಂಘದ ಎಂಜಿನಿಯರ್ ಕೇವಲ ಸಿಮೆಂಟ್ ಹಾಕಿ ಮುಚ್ಚಿದ್ದರು. ಆದರೂ ನೀರು ಸೋರುತ್ತಲೇ ಇತ್ತು.

ಇದೀಗ ಬಿರುಕಿನ ಅಂತರ ಹೆಚ್ಚಾಗಿದ್ದು, ಸುತ್ತಮುತ್ತಲ ನಿವಾಸಿಗಳು ಸಹ ಈ ಕಟ್ಟಡ ಯಾವಾಗ ಬೀಳುತ್ತದೋ ಎಂಬ ಆತಂಕದಲ್ಲಿ ದಿನ ದೂಡುತ್ತಿದ್ದಾರೆ. ಒಂದು ಕಡೆ ಕಳಪೆ ಕಾಮಗಾರಿ ನಡೆಸಲಾಗಿದೆ ಎಂಬ ಆರೋಪವೂ ಸಹ ಕೇಳಿಬಂದಿದೆ. ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಿಸಿರುವ ಈ ಏಳು ಅಂತಸ್ತಿನ ಕಟ್ಟಡ ಎರಡೇ ವರ್ಷಕ್ಕೆ ಕುಸಿಯುವ ಹಂತಕ್ಕೆ ತಲುಪಿರುವುದರಿಂದ ಇತರೆ ಬೃಹತ್ ಕಟ್ಟಡಗಳಲ್ಲಿ ವಾಸಿಸುತ್ತಿರುವ ನಿವಾಸಿಗಳು ಜೀವ ಕೈಯಲ್ಲಿಡಿದು ದಿನ ದೂಡುವಂತಾಗಿದೆ.

Facebook Comments